ಶೃಂಗೇರಿ: ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನಕ್ಕೆ ಆದ್ಯತೆ ಇದ್ದರೂ ವಿದ್ಯಾರ್ಥಿಗಳು ದುರ್ಬಳಕೆ ಮಾಡಿಕೊಳ್ಳುವುದು ಸಲ್ಲ ಎಂದು ನಿವೃತ್ತ ಶಿಕ್ಷಕ ಎಚ್.ಕೆ.ಯೋಗಪ್ಪ ತಿಳಿಸಿದರು.
ಶನಿವಾರ ವಿದ್ಯಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕಾರ್ಮಿಕ ಮಿತ್ರ ಬಳಗ ಆಯೋಜಿಸಿದ್ದ ಉಚಿತ ನೋಟ್‌ಬುಕ್ ವಿತರಣಾ ಸಮಾರಂಭದಲ್ಲಿ ಓದಿಗಾಗಿ ಕಲಿಕಾ ಸಾಮಗ್ರಿಗಳು ವಿಷಯದ ಕುರಿತು ಮಾತನಾಡಿದರು.
ಓದಿಗಾಗಿ ಪ್ರತಿಯೊಬ್ಬರೂ ಬಯಸುವ ಕಲಿಕಾ ಸಾಮಗ್ರಿಗಳಲ್ಲಿ ಮೊಬೈಲು ಅಗ್ರಸ್ಥಾನ ಪಡೆದಿದೆ. ಎಲ್ಲ ಪರಿಕರಗಳಲ್ಲಿ ಒಳಿತು ಹಾಗೂ ಕೆಡಕು ಇರುತ್ತದೆ. ಒಳಿತನ್ನು ಸ್ವೀಕರಿಸುವ ಮನೋಭಾವ ಅತಿ ಕಡಿಮೆಯಾಗಿದ್ದು ಕೆಡಕುಗಳ ಬೆನ್ನತ್ತಿ ಹೋಗುವುದು ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರಿ ಶಾಲೆಗಳ ಬಗ್ಗೆ ಅಸಡ್ಡೆ ಬೇಡ. ಈ ಶಾಲೆಗಳಲ್ಲಿ ಶಿಕ್ಷಣ ಪಡೆದವರು ಉನ್ನತ ಸ್ಥಾನದಲ್ಲಿದ್ದಾರೆ ಎಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷೆ ಶೋಭಾ, ದಾನಿಗಳಾದ ಸುಮನಾ, ಗಿರಿಧರ್, ಗುತ್ತಿಗೆದಾರ ಸಂಘದ ಅಧ್ಯಕ್ಷ ಭಾಸ್ಕರ್ ಪೂಜಾರಿ, ಜೆಸಿಐ ವಲಯ-14ರ ಉಪಾಧ್ಯಕ್ಷ ಸುಜನ್, ಕಾರ್ಮಿಕ ಮಿತ್ರ ಬಳಗದ ಅಧ್ಯಕ್ಷ ರಮೇಶ್ ಶೂನ್ಯ, ಮುಖ್ಯಶಿಕ್ಷಕಿ ಮೈತ್ರಿ ಇತರರಿದ್ದರು.