ನ್ಯೂಸ್

ಪುಸ್ತಕ, ಪೆನ್ನು ಬದಲಿಗೆ ಏರ್ ಗನ್, ಚಾಕು; ವಿದ್ಯಾರ್ಥಿಗಳ ಹೊಡೆದಾಟ ನೋಡಿ ಶಿಕ್ಷಕರು ಕಂಗಾಲು!

ರಾಯಚೂರು: ಹೊಸ ವರ್ಷಾಚರಣೆ ಹಿನ್ನಲೆ ರಾಜ್ಯವ್ಯಾಪಿ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಲಾಗಿತ್ತು. 2024 ವರ್ಷವನ್ನು ಸ್ವಾಗತಿಸುವ ಉತ್ಸಾಹದಲ್ಲಿ ಜನರು ತೊಡಗಿದರೆ, ಇತ್ತ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಪುಸ್ತಕ, ಪೆನ್ನು ಹಿಡಿದು ತರಗತಿಯೊಳಗೆ ಪಾಠ ಕೇಳುವ ಬದಲು ಗನ್​, ಚಾಕು ಹಿಡಿದು ಪರಸ್ಪರ ಬಡಿದಾಡಿಕೊಂಡ ಘಟನೆ ರಾಯಚೂರಿನ ಖಾಸಗಿ ಶಾಲೆಯಲ್ಲಿ ವರದಿಯಾಗಿದೆ.

ರಾಯಚೂರಿನ ಖಾಸಗಿ ಶಾಲೆಯ ಮುಂಭಾಗದಲ್ಲಿ ವಿದ್ಯಾರ್ಥಿಗಳು ಗಲಾಟೆ ಮಾಡಿಕೊಂಡಿದ್ದು, ಚಾಕು ಮತ್ತು ಏರ್​ ಗನ್​ ಅನ್ನು ತಮ್ಮಲ್ಲಿ ಇಟ್ಟುಕೊಂಡು ಸ್ಕೂಲ್​ಗೆ ಬಂದದ್ದನ್ನು ಕಂಡು ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿ ಬೆಚ್ಚಿ ಬಿದ್ದಿದೆ.

ಈ ಹಿಂದೆ ಇಬ್ಬರ ನಡುವೆ ನಡೆದಿದ್ದ ಜಗಳದ ಹಿನ್ನಲೆಯಲ್ಲಿ ಈ ಗಲಾಟೆ ಸಂಭವಿಸಿದ್ದು, 7 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳ ನಡುವೆ ಜಗಳ ನಡೆದಿದೆ. ಏರ್ ಗನ್ ತಂದಿದ್ದ 7ನೇ ತರಗತಿಯ ವಿದ್ಯಾರ್ಥಿ ಹಾಗೂ ಚಾಕು ತಂದಿದ್ದ 9ನೇ ತರಗತಿ ವಿದ್ಯಾರ್ಥಿ ನಡುವಿನ ಜಟಾಪಟಿಯಲ್ಲಿ 7ನೇ ತರಗತಿ ವಿದ್ಯಾರ್ಥಿಗೆ ಗಾಯವಾಗಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ಕೊಟ್ಟ ರಾಯಚೂರು ನಗರದ ಪಶ್ಚಿಮ ಠಾಣೆ ಪೊಲೀಸರು, ಬಾಲಕನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.