ನ್ಯೂಸ್

ಜುಲೈ 1ಕ್ಕೆ ಶಾಲೆ ಆರಂಭ ಅನುಮಾನ? ಕ್ಲಾಸ್​ ಬೇಕಾ-ಬೇಡ್ವಾ ಪಾಲಕರೇ ನಿರ್ಧರಿಸ್ತಾರೆ..!

ಬಾಗಲಕೋಟೆ: ಜುಲೈ 1ಕ್ಕೆ ಶಾಲೆ ಆರಂಭ ಎನ್ನುವುದು ಸರ್ಕಾರದ ನಿರ್ಧಾರಿತ ದಿನಾಂಕ ಅಲ್ಲ. ಪಾಲಕರ ಅಭಿಪ್ರಾಯ ಸಂಗ್ರಹಿಸಿದ ಬಳಿಕವೇ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್​ ತಿಳಿಸಿದರು.

ಮೊದಲು ಪಾಲಕರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರಕ್ಕೆ ಕಳುಹಿಸುತ್ತೇವೆ. ಈ ಸಂಬಂಧ ಮೇ 31ರಂದು ಕೇಂದ್ರದಿಂದ ಪತ್ರ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಜೂನ್ 10, 11, 12ರಂದು ಪಾಲಕರ ಸಭೆ ನಡೆಸಲು ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ಜುಲೈ 1ಕ್ಕೆ ಶಾಲೆ ಆರಂಭ ಎನ್ನುವುದು ಸರ್ಕಾರ ನಿರ್ಧರಿಸಿದ್ದಲ್ಲ. ಶಿಕ್ಷಣ ಇಲಾಖೆ ಯೋಚಿಸಿರುವ ದಿನಾಂಕ ಅಷ್ಟೆ. ರಾಜ್ಯಗಳಲ್ಲಿ ಶಾಲೆ ಆರಂಭಕ್ಕೆ ಕ್ರಮ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪೋಷಕರ ಜತೆ ಸಂವಾದ ನಡೆಸಬೇಕು. ಜೂನ್ 15ರೊಳಗಾಗಿ ಪಾಲಕರು, ಪೋಷಕರು, ಎಸ್​ಡಿಎಂಸಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಸುರೇಶ್ ಕುಮಾರ್​ ತಿಳಿಸಿದರು

ಶಾಲೆ ಆರಂಭಿಸಿದರೆ ಹೇಗೆ ಮಾಡಬೇಕು, ಮುಂದಿನ ತರಗತಿಗಳು, ಮಕ್ಕಳ ಆಟ, ವ್ಯಾಯಾಮ ಹೇಗೆ?.. ಇವುಗಳ ಕುರಿತು ಪಾಲಕರ ಅಭಿಪ್ರಾಯ ಪಡೆಯಲಾಗುವುದು. ಫ್ರೀ ಪ್ರೈಮರಿ ಆರಂಭ ಬೇಡ ಎನ್ನುವ ಅಭಿಪ್ರಾಯ ಇದೆ. ಕೇಂದ್ರದಿಂದ ಸಲಹೆ ಬಂದ ಬಳಿಕ ಶಾಲೆ ಯಾವಾಗ ಆರಂಭಿಸಬೇಕು ಎಂಬುದರ ಬಗ್ಗೆ ತೀರ್ಮಾನಿಸುತ್ತೇವೆ ಎಂದರು.