ಬೆಂಗಳೂರು: ಕರೊನಾ ಕಾರಣದಿಂದ ಒಂದೂವರೆ ವರ್ಷಗಳಿಂದ ಮಕ್ಕಳು ಬಾರದೆ ಬಣಗುಡುತ್ತಿದ್ದ ಶಾಲೆಗಳಲ್ಲಿ ಇದೀಗ ಮಕ್ಕಳ ಕಲರವ ಕೇಳಿ ಬರುತ್ತಿದೆ. ಸೋಮವಾರ ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳು ಆರಂಭವಾಗಿದ್ದು, ಮೊದಲ ದಿನ ಶೇ.27 ಹಾಜರಾತಿ ದಾಖಲಾಗಿದೆ.
ಮಕ್ಕಳಲ್ಲಿನ ಉತ್ಸಾಹ: ಶಾಲೆ ಆರಂಭವಾಗಿರುವುದು ಮಕ್ಕಳು ಹಾಗೂ ಶಿಕ್ಷಕರಿಬ್ಬರಲ್ಲೂ ಹೊಸ ಉತ್ಸಾಹಕ್ಕೆ ಕಾರಣವಾಗಿತ್ತು. ಈ ಮೊದಲೇ ಶಾಲೆಗಳಿಗೆ ಮಾರ್ಗಸೂಚಿಗಳನ್ನು ನೀಡಿದ್ದ ಹಿನ್ನೆಲೆಯಲ್ಲಿ ಶಾಲೆಗಳು ಅವುಗಳನ್ನು ಪಾಲಿಸುವುದರ ಜತೆಗೆ ಮಕ್ಕಳನ್ನು ಬರ ಮಾಡಿಕೊಳ್ಳಲು ಶಾಲೆಗಳನ್ನು ಅಲಂಕಾರಿಕ ವಸ್ತುಗಳ ಮೂಲಕ ಸಿಂಗರಿಸಿದ್ದರು. ಕೆಲವು ಶಾಲೆಗಳಲ್ಲಿನ ಶಿಕ್ಷಕರು ಮಕ್ಕಳಿಗೆ ಆರತಿ ಮಾಡಿ ತರಗತಿಗಳಿಗೆ ಕರೆದುಕೊಂಡರೆ, ಮತ್ತೆ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಚಾಕೋಲೆಟ್, ಆಟಿಕೆಗಳನ್ನು ನೀಡಿ ಸ್ವಾಗತಿಸಿದ್ದಾರೆ.
ತೆರೆಯದ ಶಾಲೆಗಳು: ನಗರದಲ್ಲಿ ಬಹುತೇಕ ಪ್ರತಿಷ್ಠಿತ ಶಾಲೆಗಳು ಪ್ರಾಥಮಿಕ ತರಗತಿಗಳನ್ನು ತೆರೆದಿಲ್ಲ. ಒಂದುವಾರದಲ್ಲಿ, ದೀಪಾವಳಿ ಹಬ್ಬ ಎದುರಾಗಲಿದ್ದು, ಆ ವೇಳೆ ಎರಡು- ಮೂರು ದಿನ ರಜೆ ನೀಡಬೇಕು ಎಂಬ ಆಲೋಚನೆ ಹಾಗೂ ಬಹುತೇಕ ಪಾಲಕರು ದೀಪಾವಳಿಯ ನಂತರ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಶಾಲೆಗಳು ದೀಪಾವಳಿಯ ನಂತರವೇ ಶಾಲೆ ತೆರೆಯಲು ತೀರ್ವನಿಸಿವೆ.
ಪ್ರವೇಶಾವಧಿ ವಿಸ್ತರಣೆ: 2021-22ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ನಿಗದಿ ಪಡಿಸಿದ್ದ ಕೊನೆಯ ದಿನಾಂಕವನ್ನು ನ.30ರವರೆಗೆ ವಿಸ್ತರಿಸಿದೆ. ಈ ಮೊದಲು ಅ.30ರೊಳಗೆ ಪ್ರವೇಶ ಪಡೆಯಬೇಕಾಗಿತ್ತು. ಪ್ರಾಥಮಿಕ ಭೌತಿಕ ತರಗತಿಗಳು ಅ.25ರಿಂದ ಆರಂಭವಾಗಿರುವ ಹಿನ್ನೆಲೆಯಲ್ಲಿ ಪಾಲಕರು ಪ್ರವೇಶ ಬಯಸಿ ಶಾಲೆಗಳಿಗೆ ತೆರಳುತ್ತಿರುವುದರಿಂದ ಇಲಾಖೆಯು ದಿನಾಂಕ ವಿಸ್ತರಣೆ ಮಾಡಿದೆ.
ಬಸ್ನಲ್ಲಿ ನೂಕುನುಗ್ಗಲು: ನರಗುಂದ ತಾಲೂಕಿನ ವಿವಿಧ ಶಾಲೆಗಳಲ್ಲಿ 1ರಿಂದ 5ನೇ ತರಗತಿ ಮಕ್ಕಳಿಗೆ ಮಾಲಾರ್ಪಣೆ, ಪುಷ್ಪವೃಷ್ಟಿ, ವಿಶೇಷ ಪೂಜೆ ಮಾಡಿ, ಆರತಿ ಬೆಳಗಿ ಅದ್ದೂರಿಯಾಗಿ ಶಾಲೆಗೆ ಸೋಮವಾರ ಬರಮಾಡಿಕೊಳ್ಳಲಾಯಿತು. ಆದರೆ, ಕೆಲವು ಗ್ರಾಮಗಳಲ್ಲಿ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸಮಯಕ್ಕೆ ಸರಿಯಾಗಿ ಬಸ್ಗಳ ವ್ಯವಸ್ಥೆ ಇರಲಿಲ್ಲ. ಹಾಗಾಗಿ, ಬಂದ ಬಸ್ಗಳಿಗೆ ಹತ್ತಲು ನೂಕುನುಗ್ಗಲು ಉಂಟಾಗಿತ್ತು. ಕೆಲವರು ಜೋತು ಬಿದ್ದು ಪ್ರಯಾಣಿಸಿದರು.
ಶಿವಮೊಗ್ಗ: ಈಗಷ್ಟೇ 1ರಿಂದ 5ನೇ ತರಗತಿ ಶಾಲೆಗಳು ಆರಂಭಗೊಂಡಿದ್ದು ಪಠ್ಯ ಕಡಿತಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ. ಮಲವಗೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ 1ರಿಂದ 5ನೇ ತರಗತಿ ಮಕ್ಕಳನ್ನು ಸ್ವಾಗತಿಸಿದ ನಂತರ ಮಾತನಾಡಿದ ಅವರು, ಅನಿವಾರ್ಯತೆ ಕಂಡು ಬಂದರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಚಿಂತನೆ ಮಾಡಲಾಗá-ವುದು. ಡಿಸೆಂಬರ್ನಲ್ಲಿ ಮತ್ತೊಮ್ಮೆ ಸಭೆ ನಡೆಸಿ ಪರೀಕ್ಷೆಗೆ ಪಠ್ಯ ಕಡಿತಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು. ರಾಜ್ಯದಲ್ಲಿ 48 ಸಾವಿರ ಸರ್ಕಾರಿ ಶಾಲೆಗಳಿದ್ದು ಅವುಗಳಲ್ಲಿ 28,900 ಶಾಲೆಗಳು ಸಂಪೂರ್ಣ ಸುಸ್ಥಿತಿಯಲ್ಲಿವೆ. 7ರಿಂದ 8 ಸಾವಿರ ಶಾಲೆಗಳಲ್ಲಿ ಕೆಲ ಕೊಠಡಿಗಳು ಶಿಥಿಲಗೊಂಡಿವೆ. ಕೆಲ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆ ಇದ್ದು ಸುಸ್ಥಿತಿಯಲ್ಲಿರುವ ಕೊಠಡಿಗಳಲ್ಲೇ ಪಾಠ ಪ್ರವಚನ ನಡೆಸಲು ಸೂಚಿಸಲಾಗಿದೆ ಎಂದು ಬಿ.ಸಿ.ನಾಗೇಶ್ ಹೇಳಿದರು.