ನ್ಯೂಸ್

ಶಾಲೆ ಆರಂಭವಾದ ಮೇಲೆ ಏನೇನು ಮಾಡಬೇಕು, ಮಾಡಬಾರದು

ಬೆಂಗಳೂರು

ಶಾಲಾ&ಕಾಲೇಜು ಆರಂಭ ದಿನಾಂಕ ನಿಶ್ಚಯವಾಗುತ್ತಿದ್ದಂತೆಯೇ ವಿದ್ಯಾರ್ಥಿಗಳು, ಆಡಳಿತ ಮಂಡಳಿಗಳು, ಸಮುದಾಯ, ಶಿಕ್ಷಕರು, ಪಾಲಕರು ಅನುಸರಿಸಬೇಕಾದ ಪ್ರಮಾಣಿತ ಕಾರ್ಯಚರಣಾ ವಿಧಾನ(ಎಸ್​ಒಪಿ)ವನ್ನು ಬಿಡುಗಡೆ ಮಾಡಿದೆ.

ಆ ಪ್ರಕಾರವಾಗಿ ಕರೊನಾ ತಡೆಯುವ ನಿಟ್ಟಿನಲ್ಲಿ ಪ್ರತಿ ಶಾಲೆಯಲ್ಲೂ ಮುಖ್ಯಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿ ಪ್ರತಿನಿಧಿಗಳನ್ನು ಒಳಗೊಂಡ ಆರೋಗ್ಯ ಸಮಿತಿ(ಹೆಲ್ತ್​ ಕ್ಲಬ್​) ರಚಿಸಿ, ಕರೊನಾ ನಿಯಂತ್ರಿಸುವ ಚಟುವಟಿಕೆಗಳನ್ನು ಈ ಸಮಿತಿಗೆ ಹಂಚಲು ಸರ್ಕಾರ ಸೂಚನೆ ನೀಡಿದೆ.

ಪ್ರತಿ ತರಗತಿಯಲ್ಲೂ ಇಬ್ಬರು ವಿದ್ಯಾರ್ಥಿಗಳ ಮೂಲಕ ಶಿಕ್ಷಕರು ಇಲ್ಲದ ಸಮಯದಲ್ಲಿ ಕರೊನಾ ಮಾರ್ಗಸೂಚಿ ಅಂಶಗಳು ಪಾಲನೆಗೆ ಖಚಿತಪಡಿಸಿಕೊಳ್ಳಬೇಕು, ವಿದ್ಯಾರ್ಥಿಗಳು ಶಾಲೆಗೆ ಆಗಮಿಸುವಾಗ ಮತ್ತು ಶಾಲೆಯಿಂದ ನಿರ್ಗಮಿಸುವಾಗ ಸಾಮಾಜಿಕ ಅಂತರ ಸಹಿತವಾಗಿ ಎಲ್ಲ ರೀತಿಯ ಮಾರ್ಗಸೂಚಿ ಪಾಲನೆಯಾಗುತ್ತಿರುವ ಬಗ್ಗೆ ಹೆಲ್ತ್​ ಕ್ಲಬ್​ ಸದಸ್ಯರು ಮೇಲುಸ್ತುವಾರಿ ವಹಿಸಬೇಕು ಎಂದು ಸೂಚಿಸಿದೆ.

ಪ್ರತ್ಯೇಕ ಎಸ್​ಒಪಿ ಅಗತ್ಯ: ಪ್ರತಿ ಶಾಲೆಯಲ್ಲೂ ಮಕ್ಕಳು ಮೈದಾನ, ಗ್ರಂಥಾಲಯ, ಪ್ರಯೋಗಾಲಯ ಬಳಕೆ, ವಿರಾಮದ ಸಮಯದ ಸದ್ಬಳಕೆ, ಶಾಲಾ ಸ್ವಚ್ಛತೆ ಹಾಗೂ ನೈರ್ಮಲೀಕರಣದ ವೇಳಾಪಟ್ಟಿ, ಶಾಲಾ ವಾಹನದ ಬಳಕೆ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಗೈರು ಹಾಜರಿಯ ಮೇಲ್ವಿಚಾರಣೆ, ತುರ್ತು ಸಂದರ್ಭದ ನಿರ್ವಾಹಣೆ, ಪಾಲಕರು, ಸೇವಕರು, ಸಂದರ್ಶಕರ ಭೇಟಿ ಈ ಎಲ್ಲ ಚಟುವಟಿಕೆಗಳನ್ನು ನಿರ್ವಹಿಸಲು ಪ್ರತಿ ಶಾಲೆಯಲ್ಲೂ ಶಾಲಾ ಹಂತದಲ್ಲಿ ಪ್ರತ್ಯೇಕ ಎಸ್​ಒಪಿ ಸಿದ್ಧಪಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.

ಬಿಸಿನೀರು ವ್ಯವಸ್ಥೆ ಕಡ್ಡಾಯ: ಶಾಲೆಯಲ್ಲಿ ಮಕ್ಕಳಿಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಕಡ್ಡಾಯವಾಗಿ ಮಾಡಬೇಕು. ಶಾಲಾರಂಭಕ್ಕೂ ಪೂರ್ವದಲ್ಲಿ ಶಾಲಾವರಣ ಸೇರಿದಂತೆ, ಕಾಂಪೌಂಡ್​, ನೀರಿನ ಟ್ಯಾಂಕ್​, ಬಾವಿ, ಕಿಟಕಿ, ಪೀಠೋಪಕರಣ, ಕುರ್ಚಿ, ಮೇಜು, ಡೆಸ್ಕ್​ ಇತ್ಯಾದಿಗಳನ್ನು ಸ್ವಚ್ಛ ಮಾಡಬೇಕು. ಅಗತ್ಯ ವಸ್ತುಗಳನ್ನು ತೊಳೆದು ಸ್ಯಾನಿಟೈಜೇಷನ್​ ಮಾಡಬೇಕು. ಶೌಚಾಲಯ ಮತ್ತು ಮೂತ್ರಾಲಯಗಳ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಬೇಕು. ಸದಾ ನೈರ್ಮಲ್ಯದಿಂದ ಇರುವಂತೆ ಎಚ್ಚರ ವಹಿಸಬೇಕು. ತರಗತಿಯನ್ನು ಪಾಳಿ ಪದ್ಧತಿಯಲ್ಲಿ ನಡೆಸಲು ಇಲಾಖೆ ಹೊರಡಿಸುವ ವೇಳಾಪಟ್ಟಿಯನ್ನು ಪಾಲಿಸಬೇಕು ಎಂದು ಎಸ್​ಒಪಿಯಲ್ಲಿ ತಿಳಿಸಿದೆ.

*ಪಾಲಕರ ಜವಾಬ್ದಾರಿಗಳೇನು?

-& ಮಕ್ಕಳ ಆರೋಗ್ಯದ ಪರಿಸ್ಥಿತಿ ಗಮನವಹಿಸಬೇಕು

& ಮನೆಯಿಂದಲೇ ಮಕ್ಕಳಿಗೆ ಮಾಸ್ಕ್​ ಹಾಕಿ ಕಳುಹಿಸಬೇಕು

& ಮಾಸ್ಕ್​ನ ಸ್ವಚ್ಛತೆ ಕಾಪಾಡಿಕೊಳ್ಳಲು ತಿಳಿ ಹೇಳಬೇಕು

& ಶಾಲಾ ಬ್ಯಾಗ್​ ಜತೆಗೆ ತಟ್ಟೆ, ಟವೆಲ್​, ಬಿಸಿ ನೀರು, ಸ್ಯಾನಿಟೈಸರ್​ ಕಳುಹಿಸಬೇಕು

*ಶಾಲೆಗಳ ಜವಾಬ್ದಾರಿಗಳೇನು?

& ಸಾಮಾಜಿಕ ಅಂತರಕ್ಕೆ ಒತ್ತು ನೀಡಬೇಕು

& ವಿದ್ಯಾರ್ಥಿಗಳ ಆಗಮನ, ನಿರ್ಗಮನಕ್ಕೆ ಪ್ರತ್ಯೇಕ ಮಾರ್ಗ ಗುರುತಿಸಬೇಕು

& ಮಕ್ಕಳಿಗೆ ಕರೊನಾ ಜಾಗೃತಿ ಮೂಡಿಸುವ ಪೋಸ್ಟರ್​ಗಳನ್ನು ಅಳವಡಿಸಬೇಕು

& ವಿದ್ಯಾರ್ಥಿಗಳು ಪುಸ್ತಕ, ಡಸ್ಟರ್​, ಚಾಕ್​ ಪೀಸ್​ ಅನ್ನು ಹಲವರು ಒಂದೇ ಸಮನೇ ಮುಟ್ಟದಂತೆ ನೋಡಿಕೊಳ್ಳಬೇಕು

& ವಿದ್ಯಾರ್ಥಿಗಳು ಮಾಸ್ಕ್​ ಧರಿಸಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು

& ಹೊರಗಿನವರು ಬಂದರೆ ಶಾಲಾ ಕಚೇರಿಗೆ ಮಾತ್ರ ಪ್ರವೇಶ ಕಲ್ಪಿಸಬೇಕು

& ರಸ್ತೆ ಬದಿಯ ಆಹಾರ ಸೇವಿಸದಂತೆ ಮಕ್ಕಳಿಗೆ ಸೂಚಿಸಬೇಕು

& ಶಾಲಾ ಆವರಣದಲ್ಲಿ ಮಕ್ಕಳು ಉಗಳದಂತೆ ನೋಡಿಕೊಳ್ಳಬೇಕು

& ಮಾಸ್ಕ್​ ವಿಲೇವಾರಿ ಮಾಡುವಾಗ ಎಚ್ಚರವಹಿಸಬೇಕು

& ಶಾಲೆ ಸುತ್ತಮುತ್ತ ತಿಂಡಿ ಮಾರುವವರಿಗೆ ಅವಕಾಶ ನೀಡಬಾರದು