ಸುಪೌಲ್: ಚಿತ್ರ ವಿಚಿತ್ರ ಸುದ್ದಿಗಳಿಂದ ಬಿಹಾರ ಸದಾ ಸುದ್ದಿಯಲ್ಲಿರುವ ರಾಜ್ಯ. ಅಲ್ಲಿನ ಕಳ್ಳತನಗಳು, ಅಪರಾಧ ಸುದ್ದಿಗಳು, ಸೇತುವೆ ಕುಸಿತ ಎಲ್ಲವೂ ದೇಶದ ಜನತೆಗೆ ಮೀಮ್ಸ್, ಟ್ರೋಲ್ಸ್ಗಳಿಗೆ ಸರಕುಗಳಾಗಿ ನಗೆ ಹೊಮ್ಮಿಸುತ್ತಿತ್ತು. ಆದರೆ ಬಿಹಾರದಲ್ಲಿ ಇಂದು (ಬುಧವಾರ) ನಡೆದಿರುವ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ.
ಉತ್ತರ ಬಿಹಾರದ ಸುಪೌಲ್ನ ಶಾಲೆಯೊಂದರಲ್ಲಿ ಶೂಟೌಟ್ ನಡೆದಿದೆ. ಶಾಲೆಗೆ ತನ್ನ ಬ್ಯಾಗ್ನಲ್ಲಿ ಬಚ್ಚಿಟ್ಟು ಹ್ಯಾಂಡ್ಗನ್ ತಂದಿದ್ದ ಐದು ವರ್ಷದ ಬಾಲಕ ಅದೇ ಶಾಲೆಯ ಮೂರನೆಯ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ಗುಂಡು ಹಾರಿಸಿದ್ದಾನೆ. ಪರಿಣಾಮವಾಗಿ ಹತ್ತು ವರ್ಷದ ಬಾಲಕ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.
ಹ್ಯಾಂಡ್ಗನ್ನಿಂದ ಹಾರಿದ ಗುಂಡು ವಿದ್ಯಾರ್ಥಿಯ ಕೈಗೆ ತಲುಗಿದೆ. ಶಾಲೆಯ ಉಳಿದ ವಿದ್ಯಾರ್ಥಿಗಳ ಪೋಷಕರು ಭಯಭೀತರಾಗಿದ್ದಾರೆ.
ಘಟನೆ ನಡೆದ ಬೆನ್ನಲ್ಲೇ ಸ್ಥಳಕ್ಕೆ ದಾವಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಸ್ಪಿ ಶೈಶವ್ ಯಾದವ್, ಬಾಲಕನಿಗೆ ಹ್ಯಾಂಡ್ಗನ್ ಹೇಗೆ ದೊರಕಿತು ಮತ್ತು ಶಾಲೆಯೊಳಗೆ ಹೇಗೆ ತರಲಾಯಿತು ಎನ್ನುವುದನ್ನು ನಾವು ವಿಚಾರಿಸುತ್ತಿದ್ದೇವೆ. ಶಾಲಾ ಆಡಳಿತ ಮಂಡಳಿಗಳು ಮಕ್ಕಳ ವರ್ತನೆಯ ಬಗ್ಗೆ ಎಚ್ಚರದಿಂದಿರಬೇಕು ಮತ್ತು ನಿಯಮಿತವಾಗಿ ಅವರ ಬ್ಯಾಗ್ಗಳ ಪರಿಶೀಲನೆ ಮಾಡುವ ಮೂಲಕ ನಿಗಾ ಇಡಬೇಕು ಎಂದು ಎಚ್ಚರಿಸಿದ್ದಾರೆ.