ನ್ಯೂಸ್

ಡಿ.15ರಿಂದ ಶಾಲೆ?; 9ರಿಂದ 12ನೇ ತರಗತಿವರೆಗೆ ಆರಂಭ

chandru

ಬೆಂಗಳೂರು: ರಾಜ್ಯದಲ್ಲಿ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಡಿ 15ರಿಂದ ಶಾಲೆ-ಕಾಲೇಜು ಆರಂಭಗೊಳ್ಳುವುದು ಬಹುತೇಕ ಖಚಿತಗೊಂಡಿದೆ. ಶಾಲೆ ಆರಂಭಿಸಲು ಖಾಸಗಿ ಶಾಲೆಗಳ ಮುಖ್ಯಸ್ಥರು ಹಾಗೂ ಪಾಲಕರು ಸಮ್ಮತಿ ಸೂಚಿಸಿದ್ದು, ದೀಪಾವಳಿ ಬಳಿಕ ಸರ್ಕಾರ ಈ ಸಂಬಂಧ ಅಂತಿಮ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಶಿಕ್ಷಣ ಇಲಾಖೆ ಈಗಾಗಲೇ ಸರಣಿ ಸಭೆಗಳ ಮೂಲಕ ಶಾಲೆ ಆರಂಭದ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ವರದಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದೆ. ಬುಧವಾರ ಶಿಕ್ಷಣ ಇಲಾಖೆಯ ನಿರ್ದೇಶಕರು ಆರ್​ಟಿಇ ಸ್ಟೂಡೆಂಟ್ಸ್ ಆಂಡ್ ಪೇರೆಂಟ್ಸ್ ಅಸೋಸಿಯೇಷನ್, ಮಾನ್ಯತೆ ಪಡೆದ ಅನುದಾನ ರಹಿತ ಶಾಲೆಗಳ ಸಂಘ (ರುಪ್ಸ) ಜತೆಗೆ ಮತ್ತೊಂದು ಸುತ್ತಿನ ಸಭೆ ಸಹ ನಡೆಸಿದ್ದಾರೆ.

ಪಾಲಕರು ಮತ್ತು ಖಾಸಗಿ ಶಾಲಾ ಸಂಘ ಸಂಸ್ಥೆಗಳ ನಡುವೆ ನಡೆದ ಸಭೆಯಲ್ಲೂ 9ರಿಂದ 12ನೇ ತರಗತಿ ಆರಂಭಿಸಲು ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ. ಡಿ.15ರ ನಂತರ ಶಾಲೆ ಆರಂಭಿಸಬಹುದು. ಪಠ್ಯೇತರ ಚಟುವಟಿಕೆ ನಡೆಸಬಾರದು. ಎಸ್ಸೆಸ್ಸೆಲ್ಸಿ ಮತ್ತು ಪಿಯು ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯಲ್ಲಿ ಕರೊನಾ ಕೃಪಾಂಕ ನೀಡಬೇಕು. ವಿದ್ಯಾರ್ಥಿಗಳ ಹಾಜರಿಗೆ ಪಾಲಕರಿಂದ ಮುಚ್ಚಳಿಕೆ ಪತ್ರ ಪಡೆಯಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗೂ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕೆಂದು ಆರ್​ಟಿಇ ಸ್ಟೂಡೆಂಟ್ಸ್ ಆಂಡ್ ಪೇರೆಂಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಬಿ.ಎನ್. ಯೋಗಾನಂದ ಆಗ್ರಹಿಸಿದ್ದಾರೆ. ಶಾಲೆ ಆರಂಭದ ಹದಿನೈದು ದಿನ ಮೊದಲೇ ಶುಚಿತ್ವದ ಕಾರ್ಯ ಆರಂಭವಾಗಬೇಕು.

ಇದರ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಕಡ್ಡಾಯವಾಗಿ ಕರೊನಾ ಟೆಸ್ಟ್ ಮಾಡಿಬೇಕು. ತರಗತಿಗಳನ್ನು ಪಾಳಿ ಪದ್ಧತಿಯಲ್ಲಿ ನಡೆಸಬೇಕೆಂದು ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸ) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಒತ್ತಾಯಿಸಿದ್ದಾರೆ.

ಎರಡೂ ವರದಿಯನ್ನು ಕ್ರೋಡೀಕರಿಸಿ ಸೋಮವಾರದೊಳಗೆ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್​ಗೆ ಸಲ್ಲಿಸುವ ಸಾಧ್ಯತೆ ಇದೆ. ಸದ್ಯ ಕಾರ್ಯನಿಮಿತ್ತ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಮತ್ತು ಸಚಿವರಿಬ್ಬರೂ ಹೊರ ಜಿಲ್ಲೆಗಳ ಪ್ರವಾಸದಲ್ಲಿರುವುದರಿಂದ ವರದಿ ಸಚಿವರ ಕೈ ಸೇರುವುದು ಕೊಂಚ ವಿಳಂಬವಾಗಲಿದೆ. ಒಮ್ಮೆ ವರದಿ ಸಿಕ್ಕ ಬಳಿಕ ಸಚಿವರು ಪರಿಶೀಲಿಸಿ ಮುಖ್ಯಮಂತ್ರಿಗೆ ಸಲ್ಲಿಸಲಿದ್ದಾರೆ. ಇದಾದ ಮೇಲೆ ಸ್ಪಷ್ಟ ನಿರ್ಧಾರ ಪ್ರಕಟಿಸಲಿದ್ದಾರೆ. ಈ ಎಲ್ಲ ಪ್ರಕ್ರಿಯೆ ಹಬ್ಬದ ನಂತರ ಚುರುಕುಗೊಳ್ಳಲಿವೆ. ಬೇರೆ ರಾಜ್ಯಗಳಲ್ಲಿ ಈಗಾಗಲೇ ಶಾಲೆಗಳು ಆರಂಭವಾಗಿದ್ದು, ನಮ್ಮ ರಾಜ್ಯದಲ್ಲಿ ನ.17ರಂದು ಕಾಲೇಜುಗಳು ಆರಂಭವಾಗಲಿದೆ. ಆನಂತರ ಸಾಧಕ-ಬಾಧಕ ನೋಡಿಕೊಂಡು ಶಾಲೆಗಳನ್ನು ಪ್ರಾರಂಭಿಸಲಾಗುತ್ತದೆ. ಶಾಲೆ ತೆರೆಯಲು ಈ ಹಿಂದೆಯೇ ಪ್ರಮಾಣಿತ ಕಾರ್ಯಚರಣಾ ವಿಧಾನದ (ಎಸ್​ಒಪಿ) ಕೈಪಿಡಿ ರೂಪಿಸಿಟ್ಟುಕೊಂಡಿದೆ. ಕೇವಲ ಆದೇಶ ಮಾತ್ರ ಬಾಕಿ ಇದೆ.

ಸವಾಲುಗಳ ಕುರಿತು ಚರ್ಚೆ: ಕರೊನೋತ್ತರ ಕಾಲದಲ್ಲಿ ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಹಲವು ಸವಾಲುಗಳ ಕುರಿತಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬುಧವಾರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಜತೆ ಶ್ರೀ ಕ್ಷೇತ್ರದಲ್ಲಿ ಚರ್ಚೆ ನಡೆಸಿದರು.

ಶಾಲಾ ದಾಖಲಾತಿ ದಿನಾಂಕ ವಿಸ್ತರಣೆ: ಖಾಸಗಿ ಅನುದಾನಿತ ಶಾಲೆಗಳಲ್ಲಿ 2020-21ನೇ ಸಾಲಿನಲ್ಲಿ ದಾಖಲಾತಿ ಪಡೆದುಕೊಳ್ಳಲು ನಿಗದಿಪಡಿಸಿದ್ದ ದಿನಾಂಕವನ್ನು ನ. 13ರವರೆಗೆ ವಿಸ್ತರಿಸಲಾಗಿದೆ. ರಾಜ್ಯದಲ್ಲಿ ಕರೊನಾ ಸೋಂಕು ಇರುವುದರಿಂದ ಹಾಗೂ ಸಾಲು ರಜೆಗಳು ಬಂದ ಕಾರಣ ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲವೆಂಬುದನ್ನು ಪರಿಗಣಿಸಿ ಅವಧಿ ವಿಸ್ತರಿಸಲಾಗಿದೆ. ಈ ಹಿಂದೆ ಅ.10 ಕೊನೆಯ ದಿನವೆಂದು ಹೇಳಿತ್ತು. ಆದರೆ, ವಿದ್ಯಾರ್ಥಿಗಳು ಪ್ರವೇಶ ಪಡೆಯಲು ರಜೆಗಳು ಅಡ್ಡಿಯಾಗು ತ್ತಿರುವುದರಿಂದ ಮತ್ತೊಮ್ಮೆ ದಿನಾಂಕ ವಿಸ್ತರಣೆ ಮಾಡಲಾಗಿದೆ.

ಖಾಸಗಿ ಶಾಲೆ ಒತ್ತಾಯ

  • ಸ್ಥಳೀಯ ಪಾಲಕರೊಂದಿಗೆ ರ್ಚಚಿಸಿ ಮನವರಿಕೆ ಮಾಡಿಕೊಡಬೇಕು
  • ಶಿಕ್ಷಕರನ್ನು ಕರೊನಾ ವಾರಿಯರ್ಸ್ ಎಂದು ಪರಿಗಣಿಸಿ ಸೌಲಭ್ಯ ನೀಡಬೇಕು
  • ಸರ್ಕಾರದಿಂದಲೇ ಕರೊನಾ ಟೆಸ್ಟ್ ಕಿಟ್​ಗಳನ್ನು ಶಾಲೆಗಳಿಗೆ ಉಚಿತವಾಗಿ ನೀಡಬೇಕು, ತಾಲೂಕು ಹಂತದ ಆರೋಗ್ಯ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವೈದ್ಯಕೀಯ ವ್ಯವಸ್ಥೆ ಮಾಡಬೇಕು
  • ವಿದ್ಯಾರ್ಥಿಗಳಿಗೆ, ಶಾಲಾ ಆಡಳಿತ ಮಂಡಳಿಗಳೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು
  • ಭೌತಿಕ, ಆನ್​ಲೈನ್​ಗೆ ಅವಕಾಶ ಬೇಕು

ಪಾಲಕರ ಬೇಡಿಕೆ

  • ಪಾಳಿ ವ್ಯವಸ್ಥೆಯಲ್ಲಿ ಶಾಲೆಗಳನ್ನು ಆರಂಭಿಸಬೇಕು, ಸಮವಸ್ತ್ರ, ಶೂ,ಸಾಕ್ಸ್ ಖರೀದಿಸುವಂತೆ ಆಡಳಿತ ಮಂಡಳಿಗಳು ಒತ್ತಾಯಿಸಬಾರದು
  • ತರಗತಿ ಆರಂಭದ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಮಾಡಬಾರದು
  • ಎಸ್​ಒಪಿ ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳನ್ನು ನೇಮಕ ಮಾಡಬೇಕು
  • ವಿದ್ಯಾರ್ಥಿಗಳಿಗೆ ವಿಮೆ ಸೌಲಭ್ಯ ಕಲ್ಪಿಸ ಬೇಕು, ಎಸ್ಸೆಸ್ಸೆಲ್ಸಿ, ಪಿಯು ವಿದ್ಯಾರ್ಥಿ ಗಳಿಗೆ ಶೇ.10 ಕೃಪಾಂಕ ನೀಡಬೇಕು

ಶಾಲೆ ಆರಂಭದ ಬಗೆಗಿನ ವರದಿಯನ್ನು ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದ್ದೇನೆ. ಆನಂತರ ಸರ್ಕಾರ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಬೋರ್ಡ್ ಪರೀಕ್ಷೆ ಇರುವ ವಿದ್ಯಾರ್ಥಿಗಳ ತರಗತಿಗಳ ಮೇಲೆ ಹೆಚ್ಚು ಗಮನ ನೀಡಬೇಕಾಗುತ್ತದೆ. | ವಿ.ಅನ್ಬುಕುಮಾರ್ ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ