ರಾಮನಗರ : ಕೋವಿಡ್‌ನಿಂದಾಗಿ ವಿದ್ಯಾರ್ಥಿಗಳಿಲ್ಲದೆ ಕಳೆಗುಂದಿದ್ದ ಶಾಲೆಗಳಿಗೆ ಸೋಮವಾರ ಹೊಸ ಹುರುಪು ಬಂದಿದ್ದು, ಶೇ. 60ರಷ್ಟು ವಿದ್ಯಾರ್ಥಿಗಳು ಶಾಲೆಯತ್ತ ಮುಖ ಮಾಡಿದ್ದರು.ರಾಜ್ಯಾದ್ಯಂತ 9-10ನೇ ತರಗತಿಗಳ ಭೌತಿಕ ಪಾಠಗಳು ಸೋಮವಾರದಿಂದ ಆರಂಭವಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದಲೇ ಶಾಲೆಗಳಿಗೆ ಹಾಜರಾಗಿ ಮೆರುಗು ತಂದರು. ಆದರೂ, ನಿರೀಕ್ಷಿಸಿದಷ್ಟು ವಿದ್ಯಾರ್ಥಿಗಳು ಹಾಜರಾಗಿರಲಿಲ್ಲ. ಈ ಸಾಲಿನಲ್ಲಿ 9 ಹಾಗೂ 10ನೇ ತರಗತಿಗಳಿಗೆ ಒಟ್ಟು 28886 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದು, ಮೊದಲ ದಿನ 17453 ವಿದ್ಯಾರ್ಥಿಗಳು ಹಾಜರಾಗಿದ್ದರೆ. 11143 ಮಕ್ಕಳು ಹಾಜರಾಗಿರಲಿಲ್ಲ.
9ನೇ ತರಗತಿಗೆ ಒಟ್ಟು 14497 ವಿದ್ಯಾರ್ಥಿಗಳು ದಾಖಲಾಗಿದ್ದು ಇವರಲ್ಲಿ 8303 ಹಾಜರಾದರೆ, 10ನೇ ತರಗತಿಗೆ ದಾಖಲಾಗಿರುವ 14371 ವಿದ್ಯಾರ್ಥಿಗಳ ಪೈಕಿ 9150 ಮಂದಿ ಶಾಲೆಗೆ ಬಂದಿದ್ದರು.
ಗ್ರಾಮಾಂತರವೇ ಉತ್ತಮ : ಜಿಲ್ಲೆಯಲ್ಲಿ ನಗರ ವ್ಯಾಪ್ತಿಗೆ ಹೋಲಿಕೆ ಮಾಡಿದರೆ ಗ್ರಾಮಾಂತರ ಪ್ರದೇಶದಲ್ಲಿ ಶಾಲೆ ಆರಂಭಕ್ಕೆ ಉತ್ತಮ ಸ್ಪಂದನೆ ದೊರಕಿದೆ. ಶೇ. 80ರಷ್ಟು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದಾರೆ. ನಗರ ಪ್ರದೇಶದಲ್ಲಿನ ವಿದ್ಯಾರ್ಥಿಗಳ ಹಾಜರಾತಿ ಶೇ. 25ರಷ್ಟು ಇದೆ. ಜಿಲ್ಲಾ ಕೇಂದ್ರ ಐಜೂರು ಸರ್ಕಾರಿ ಪ್ರೌಢಶಾಲೆಯಲ್ಲಿ 300 ವಿದ್ಯಾರ್ಥಿಗಳ ಪೈಕಿ 200 ಮಂದಿ ಹಾಜರಾಗಿದ್ದು ವಿಶೇಷವಾಗಿತ್ತು. ಇನ್ನು ಗ್ರಾಮಾಂತರದಲ್ಲಿ ಪ್ರತಿ ಶಾಲೆಯಲ್ಲಿ ಇರುವ ದಾಖಲಾತಿಗೆ 10ರಿಂದ 15 ವಿದ್ಯಾರ್ಥಿಗಳು ಮಾತ್ರ ಗೈರಾಗಿದ್ದಾರೆ.
ವಿದ್ಯಾರ್ಥಿಗಳ ಹಾಜರಾತಿ ದಾಖಲು ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಆನ್‌ಲೈನ್‌ನಲ್ಲಿ ನೋಂದಣಿ ಮಾಡುವಂತೆ ಸೂಚಿಸಿದ್ದರು. ಆದರೆ ಇಂಟರ್‌ನೆಟ್ ಸಮಸ್ಯೆಯಿಂದಾಗಿ ಇದು ಸಾಧ್ಯವಾಗಲಿಲ್ಲ. ಆದರೂ ದೂರವಾಣಿ ಮೂಲಕ ಪಡೆದ ಮಾಹಿತಿ ಪ್ರಕಾರ ಶೇ.60ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾಗಿ ತಿಳಿದುಬಂದಿದೆ.
ತರಗತಿಗೆ 20 ವಿದ್ಯಾರ್ಥಿಗಳು : ಶಾಲೆಯಲ್ಲಿ ಎಷ್ಟೇ ದಾಖಲಾತಿ ಇದ್ದರು, ಒಂದು ತರಗತಿಯಲ್ಲಿ ಕೇವಲ 20 ವಿದ್ಯಾರ್ಥಿಗಳಿಗೆ ಮಾತ್ರ ಪಾಠ ಕೇಳಲು ಅವಕಾಶ ಕಲ್ಪಿಸಲಾಗಿತ್ತು. ಹಾಗಾಗಿ ಎಲ್ಲೆಡೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲಾಗಿತ್ತು. ಸೋಮವಾರ ಬೆಳಗ್ಗೆ 10 ಗಂಟೆಗೆ ಆರಂಭವಾದ ತರಗತಿಗಳು ಮಧ್ಯಾಹ್ನ 1.30ರ ತನಕ ನಡೆದಿವೆ. ಮೊದಲ ದಿನ ವಿದ್ಯಾರ್ಥಿಗಳಿಗೆ ಕೋವಿಡ್ ಕುರಿತು ಅರಿವು ಮೂಡಿಸುವ ಕೆಲಸವನ್ನು ಶಿಕ್ಷಕರು ಮಾಡಿದ್ದಾರೆ. ಭೌತಿಕ ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಪಾಲಕರಿಂದ ಅನುಮತಿ ಪತ್ರ ತರುವುದನ್ನು ಕಡ್ಡಾಯ ಮಾಡಿರುವ ಕಾರಣ, ಮೊದಲ ದಿನ ತರಗತಿಗೆ ಪತ್ರದೊಂದಿಗೆ ಹಾಜರಾಗಿದ್ದಾರೆ. ಪತ್ರಗಳನ್ನು ಆಯಾ ಶಾಲೆಯ ಮುಖ್ಯಶಿಕ್ಷಕರು ಸ್ವೀಕರಿಸಿದ್ದಾರೆ.
ಆನ್‌ಲೈನ್ ತರಗತಿ : ವಿವಿಧ ಕಾರಣಗಳಿಂದ ಭೌತಿಕ ತರಗತಿಗೆ ಹಾಜರಾಗಲು ಸಾಧ್ಯವಾಗದಿದ್ದವರಿಗೆ ಮಧ್ಯಾಹ್ನದ ನಂತರ ಶಿಕ್ಷಕರು ಮಕ್ಕಳಿಗೆ ಆನ್‌ಲೈನ್ ಮೂಲಕ ಪಾಠ ಮಾಡಿದ್ದಾರೆ. ಒಟ್ಟಾರೆ ಮೊದಲ ದಿನ ಯಾವುದೇ ಅಹಿತರಕ ಘಟನೆಗಳು ಜರುಗದೆ, ನಿರೀಕ್ಷಿತ ಮಟ್ಟ ತಲುಪದಿದ್ದರೂ ತರಗತಿಗಳು ಸುಗಮವಾಗಿ ನಡೆದಿವೆ. ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಅಯಾ ಕ್ಷೇತ್ರದ ಬಿಇಒಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳಿಗೆ ಹೂವು ನೀಡಿ ಶಾಲೆಗೆ ಸ್ವಾಗತಿಸಿದರು.
ಬಾಕ್ಸ್:
ಶಿಕ್ಷಣ ಇಲಾಖೆಯ ರಾಜ್ಯ ಪಠ್ಯಪುಸ್ತಕ ವಿಭಾಗದ ನಿರ್ದೇಶಕ ಎಂ.ಪಿ. ಮಾದೇಗೌಡ ಅವರು ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಹಾಜರಾತಿ, ಶಾಲೆಯಲ್ಲಿನ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದರು. ರಾಮನಗರದ ಐಜೂರು ಸರ್ಕಾರಿ ಪ್ರೌಢಶಾಲೆ, ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ಸರ್ಕಾರಿ ಪ್ರೌಢಶಾಲೆ ಹಾಗೂ ಮೈನಾಯಕನಹಳ್ಳಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಬಾಕ್ಸ್:2:
ತಳಿರು ತೋರಣ
ಭೌತಿಕ ತರಗತಿಗೆ ಹಾಜರಾದ ವಿದ್ಯಾರ್ಥಿಗಳನ್ನು ಶಿಕ್ಷಕರು ಭರ್ಜರಿಯಾಗಿಯೇ ಸ್ವಾಗತಿಸಿದ್ದಾರೆ. ಹಾಗಾಗಿ ಶಾಲೆಯ ಕಟ್ಟಡಗಳಿಗೆ ಮಾವಿನ ತೋರಣ ಕಟ್ಟಲಾಗಿತ್ತು, ಬಣ್ಣಬಣ್ಣದ ಬಲೂನುಗಳಿಂದ ಶಾಲೆಯನ್ನು ಸಿಂಗರಿಸಲಾಗಿತ್ತು. ಕೆಲವಡೆ ವಿದ್ಯಾರ್ಥಿಗಳಿಗೆ ಹೂವು ನೀಡಿ ಸ್ವಾಗತ ಕೋರಲಾಯಿತು. ಮತ್ತೆ ಕೆಲವು ಶಾಲೆಗಳಲ್ಲಿ ಕಲಿಕಾ ಸಾಮಗ್ರಿಗಳನ್ನು ನೀಡಿದರೆ, ಸಿಹಿಯನ್ನೂ ಹಂಚಲಾಯಿತು.
ಕೋಟ್:
ಜಿಲ್ಲೆಯಲ್ಲಿ ಸೋಮವಾರ ಶಾಲೆಗಳ ಆರಂಭಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಶೇ. 60ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ವಿದ್ಯಾರ್ಥಿಗಳು ಶಾಲೆಗಳಿಗೆ ಮುಖ ಮಾಡಲಿದ್ದಾರೆ ಎನ್ನುವ ವಿಶ್ವಾಸವಿದೆ. ವಿದ್ಯಾರ್ಥಿಗಳಿಗೆ ಕೋವಿಡ್ ನಿಯಮಾವಳಿಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಸೋಮಲಿಂಗಯ್ಯ ಇಒ, ಶಿಕ್ಷಣ ಇಲಾಖೆ, ರಾಮನಗರ