ಬೆಂಗಳೂರು ರಾಜ್ಯದ ಶಾಲಾ ಶಿಕ್ಷಣ ಇಲಾಖೆಯ ವೆಬ್‌ಸೈಟ್ ಕಳೆದ ಒಂದು ವಾರದಿಂದ ಕಾರ್ಯನಿರ್ವಹಿಸದ ಕಾರಣ ಹಾಗೂ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಕೇಳುವುದಕ್ಕಾಗಿ ಕರೆ ಮಾಡಿದರೆ ಇಲಾಖೆಯ ಅಧಿಕಾರಿಗಳುಸರಿಯಾಗಿ ಸ್ಪಂದಿಸದ ಪರಿಣಾಮ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಪರದಾಡುವಂತಾಗಿದೆ.
ಶಾಲಾ ವಿದ್ಯಾರ್ಥಿಗಳ ದೃಷ್ಟಿಯಿಂದ ಮಧ್ಯವಾರ್ಷಿಕ ಪರೀಕ್ಷೆ ನಡೆಯುತ್ತಿದೆ. ದಸರಾ ರಜೆ ಬಂದಿದೆ. ರಜೆ ಸಮಯದಲ್ಲಿ ಶಿಕ್ಷಕರಿಗೆ ಕೆಲವು ತರಬೇತಿ ಕಾರ್ಯಕ್ರಮಗಳಿರುತ್ತವೆ. ಶಾಲಾ ಶಿಕ್ಷಣ ಇಲಾಖೆಯ ವೆಬ್‌ಸೈಟ್ ತಾಂತ್ರಿಕ ಕಾರಣಗಳಿಂದ ಕಾರ್ಯನಿರ್ವಹಿಸದ ಕಾರಣ ಆದೇಶಗಳು, ಸುತ್ತೋಲೆಗಳ ಮಾಹಿತಿ ತಿಳಿಯುತ್ತಿಲ್ಲ.
ಹಾಗೆಯೇ, ಖಾಸಗಿ ಶಾಲೆಗಳ ನೋಂದಣಿ, ಪರವಾನಗಿ ನವೀಕರಣ, ಹೊಸದಾಗಿ ಪರವಾನಗಿ ಮಾಡಿಕೊಳ್ಳುವವರು, ಇತರೆ ಆದೇಶಗಳು ಸೇರಿ ಪ್ರತಿದಿನ ಒಂದಲ್ಲಾ ಒಂದು ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಇಲಾಖೆ ಜಾಲತಾಣ ಕಾರ್ಯನಿರ್ವಹಿಸದ ಕಾರಣ ಯಾವುದೇ ಮಾಹಿತಿ ತಿಳಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರೆ ಸ್ವೀಕರಿಸದ ಸಿಬ್ಬಂದಿ, ಅಧಿಕಾರಿಗಳು:
ಇಲಾಖೆಗೆ ಸಂಬಂಧಿಸಿದ ಗೊಂದಲಗಳು, ಅನುಮಾನಗಳನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕಾಗಿ ಇಲಾಖೆಯ ನಿರ್ದೇಶಕರು, ಆಯುಕ್ತರು ಸೇರಿ ಯಾವೊಬ್ಬ ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಇನ್ನು ಈ ವಿಚಾರವಾಗಿ ಸಿಬ್ಬಂದಿಯನ್ನು ಕೇಳಿದರೆ, ಅಧಿಕಾರಿಗಳನ್ನೇ ಕೇಳಬೇಕು. ನಮಗೆ ಗೊತ್ತಿಲ್ಲ ಎಂದು ಹೇಳಿ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ಸಾರ್ವಜನಿಕರಿಂದ ಮುಕ್ತವಾಗಿದೆ. ಜನಸಾಮಾನ್ಯರಿಗೆ ಸಿಗದಂತಾಗಿದೆ ಎಂದು ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ.
ಕೇಂದ್ರ ಕಚೇರಿಯಲ್ಲಿ ಮಾತ್ರವಲ್ಲದೆ, ಜಿಲ್ಲಾ ಉಪ ನಿರ್ದೇಶಕರು, ಬಿಇಒಗಳು ಸೇರಿ ಯಾರೊಬ್ಬರು ಕೂಡ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಪಾಲಕರು ಗಂಭೀರ ಆರೋಪ ಮಾಡುತ್ತಿದ್ದಾರೆ.