ನ್ಯೂಸ್

ಹೊಸದಾಗಿ 800 ಕೆಪಿಎಸ್ ಆರಂಭ: ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ: ಸಚಿವ ಮಧು ಬಂಗಾರಪ್ಪ

ಬೆಂಗಳೂರು: ಮೂರನೇ ತರಗತಿಯಿಂದಲೇ ಕೃತಕ ಬುದ್ಧಿಮತ್ತೆ (ಎಐ) ಶಿಕ್ಷಣ ನೀಡುವುದಾಗಿ ಕೇಂದ್ರ ಶಿಕ್ಷಣ ಇಲಾಖೆ ಪ್ರಕಟಿಸಿರುವ ಬೆನ್ನಲ್ಲೇ, ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ನೀಡಲು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿದೆ.

ಸರ್ಕಾರಿ ಶಾಲೆಗಳ ಸಬಲೀಕರಣ, ದಾಖಲಾತಿ, ಕಲಿಕಾ ಗುಣಮಟ್ಟ ಮತ್ತು ಮೂಲ ಸೌಕರ್ಯ ಹೆಚ್ಚಳ ಮಾಡುವ ನಿಟ್ಟನಲ್ಲಿ ರಾಜ್ಯದಲ್ಲಿ 800 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ಸೇರಿ ಗುಣಾತ್ಮಕ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಸಹಯೋಗದಲ್ಲಿ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

2019ರಲ್ಲಿ ಕೆಪಿಎಸ್ ಶಾಲೆಗಳನ್ನು ಆರಂಭಿಸಿದ್ದು, ಇಲ್ಲಿಯವರೆಗೂ ಕೇವಲ 300 ಕೆಪಿಎಸ್ ಶಾಲೆಗಳನ್ನು ಮಾತ್ರ ಆರಂಭಿಸಲಾಗಿದೆ. ಈಗ ಒಂದೇ ಬಾರಿಗೆ 800 ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಇದರಲ್ಲಿ 500 ಶಾಲೆಗಳನ್ನು ಈಗಾಗಲೇ ಗುರುತಿಸಲಾಗಿದ್ದು, ನವೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಯೋಜನೆಗೆ ಚಾಲನೆ ಕೊಡಿಸಲಾಗುತ್ತದೆ ಎಂದು ಹೇಳಿದರು.

ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಮಗುವು ಪೂರ್ವ ಪ್ರಾಥಮಿಕ, ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತಗಳಿದ್ದು, ಮಗುವು ಪ್ರತಿ ಹಂತದಲ್ಲಿ ಶಾಲೆಯಲ್ಲಿ ಬದಲಿಸಬೇಕಿದೆ. ಇದರಿಂದ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿತವಾಗುತ್ತಿದೆ. ಕೆಪಿಎಸ್‌ನಲ್ಲಿ ಪೂರ್ವ ಪ್ರಾಥಮಿಕ ತರಗತಿಯಿಂದ ದ್ವಿತೀಯ ಪಿಯುಸಿವರೆಗೂ ಮಗು ಒಂದೇ ಕಡೆ ಶಿಕ್ಷಣ ಪಡೆಯುವುದರಿಂದ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳು ಕೂಡ ಪ್ರಗತಿ ಕಾಣಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಕ್ಕಳಿಗೆ ಉಚಿತ ಸಾರಿಗೆ ವ್ಯವಸ್ಥೆ

ಪ್ರತಿ ಕೆಪಿಎಸ್ ಶಾಲೆಗಳಿಗೆ ಮಕ್ಕಳನ್ನು ಕರೆದುಕೊಂಡು ಬರಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಪ್ರತಿ 5 ಕಿಮೀ ವ್ಯಾಪ್ತಿಯಲ್ಲಿ ಒಂದು ಕೆಪಿಎಸ್ ಮಾಡುವ ಗುರಿ ಹೊಂದಲಾಗಿದೆ. ಪ್ರತಿ ಶಾಲೆಯಲ್ಲಿ ಕನಿಷ್ಠ 1,200 ಮತ್ತು ಗರಿಷ್ಠ 1,800 ವಿದ್ಯಾರ್ಥಿಗಳನ್ನು ಹೊಂದುವುದು ಸರ್ಕಾರದ ಉದ್ದೇಶವಾಗಿದೆ. ಭೌಗೋಳಿಕ ಪ್ರದೇಶ ಮತ್ತು ವಿದ್ಯಾರ್ಥಿಗಳ ಸಂಖ್ಯೆಯ ಆಧಾರದಲ್ಲಿ ಅಗತ್ವವಿರುವ ಕಡೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಕೆಲವೆಡೆ 500ರಿಂದ 600 ಮಕ್ಕಳಿದ್ದರೂ ಕೆಪಿಎಸ್ ನೀಡಲಾಗುತ್ತದೆ ಎಂದರು.

ಪ್ರತಿ ಕೆಪಿಎಸ್‌ಗೆ 4 ಕೋಟಿ ರೂ. ಅನುದಾನ:

ರಾಜ್ಯ ಸರ್ಕಾರದ ವತಿಯಿಂದ 500 ಕೆಪಿಎಸ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ನಿಧಿಯ ಮೂಲಕ 200 ಶಾಲೆಗಳು ಮತ್ತು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗದಮ (ಸಿಇಪಿಎಂಐಝೆಡ್) ವತಿಯಿಂದ 10 ತಾಲ್ಲೂಕುಗಳಲ್ಲಿ 100 ಕೆಪಿಎಸ್ ಶಾಲೆಗಣನ್ನು ಉನ್ನತೀಕರಿಸಲು ವಿಸತ ಯೋಜನಾ ವರದಿ (ಡಿಪಿಆರ್) ತಯಾರಿಸಲಾಗುವುದು. ಪ್ರತಿ ಶಾಲೆಯನ್ನು ಅಂದಾಜು 4 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗುವುದು. ಶಾಲಾವರಣಕ್ಕೆ ಅಗತ್ಯಕ್ಕೆ ತಕ್ಕಂತೆ ಕಟ್ಟಡಗಳನ್ನು ನಿರ್ಮಿಸಲಾಗುವುದು. ಕೆಲವೆಡೆ ಮೂರು ಕೋಟಿ ರೂ.ಗಳನ್ನು ಮುಗಿಯಬಹುದು. ಕೆಲವೆಡೆ 5ರಿಂದ 6 ಕೋಟಿ ರೂ. ಬೇಕಾಗಬಹುದು ಎಂದರು.

ಎಂಎಲ್‌ಎ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 2ರಿಂದ3 ಶಾಲೆಗಳು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಪ್ರತಿ ತಾಲೂಕಿನಲ್ಲಿ 4ರಿಂದ 5 ಶಾಲೆಗಳನ್ನು ಉನ್ನತೀಕರಿಸಲಾಗುತ್ತದೆ. ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಶಿಕ್ಷಣ ಸುಧಾರಣಾ ಸಮಿತಿಯನ್ನು ರಚಿಸಲಾಗುತ್ತದೆ. ಈ ಮಹತ್ವಾಕಾಂಕ್ಷೆ ಯೋಜನೆಯು ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಮೂಲಸೌಕರ್ಯ, ಕಲಿಕಾ ಗುಣಮಟ್ಟ ಹೆಚ್ಚಿಸಲು ಸರ್ಕಾರವು ಬದ್ಧತೆಯನ್ನು ಹೊಂದಿದೆ ಎಂದು ಹೇಳಿದರು.

ತರಗತಿವಾರು ದಾಖಲಾತಿ ಸಂಖ್ಯೆ ಹೆಚ್ಚಳ

ಸರ್ಕಾರಿ ಶಾಲೆಗಳಲ್ಲಿ ಪ್ರಸ್ತುತ ಪೂರ್ವ ಪ್ರಾಥಮಿಕ ತರಗತಿಗಳಲ್ಲಿ ದಾಖಲಾತಿ ಮಿತಿಯು 30 ವಿದ್ಯಾರ್ಥಿಗಳಿಗಿದೆ. ಈ ಸಂಖ್ಯೆಯನ್ನು 40 ಹೆಚ್ಚಳ ಮಾಡಲಾಗುತ್ತಿದೆ. ಅದೇ ರೀತಿ ಪ್ರಾಥಮಿಕ ತರಗತಿಗಳಲ್ಲಿ ಕೂಡ 30 ಮಕ್ಕಳಿದ್ದು, ಈ ಸಂಖ್ಯೆಯನ್ನು 50ಕ್ಕೆ ಹೆಚ್ಚಿಸಲಾಗುತ್ತದೆ. ಮೂಲ ಸೌಕರ್ಯ ಹಾಗೂ ಶಿಕ್ಷಕರ ಲಭ್ಯತೆಯನ್ನು ನೋಡಿಕೊಂಡು ಸಾಧ್ಯವಾದಲ್ಲಿ 60 ಮಕ್ಕಳವರೆಗೂ ಅನುಮತಿ ನೀಡಲಾಗುತ್ತದೆ ಎಂದರು.

6ನೇ ತರಗತಿಯಿಂದ ಭಾಷಾ ಮಾಧ್ಯಮ ಮಕ್ಕಳ ಆಯ್ಕೆ

ಕೆಪಿಎಸ್ ಶಾಲೆಗಳಲ್ಲಿ ಮತ್ತು ಈಗಾಗಲೇ ದ್ವಿಭಾಷಾ ಮಾಧ್ಯಮ ಬೋಧಿಸುತ್ತಿರುವ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಯಿಂದಲೇ ದ್ವಿಭಾಷಾ ಮಾಧ್ಯಮ ಬೋಧನೆ ಮಾಡಲಾಗುತ್ತಿದೆ. ಮುಂಬರುವ ವರ್ಷಗಳಲ್ಲಿ 5ನೇ ತರಗತಿವರೆಗೂ ದ್ವಿಭಾಷಾ ಮಾಧ್ಯಮದಲ್ಲಿ ಬೋಧನೆ ಮಾಡಲಾಗುತ್ತದೆ. 6ನೇ ತರಗತಿಯಿಂದ ಬೋಧನಾ ಮಾಧ್ಯಮವನ್ನು ಮಕ್ಕಳ ಆಯ್ಕೆಗೆ ಬಿಡಲಾಗುತ್ತದೆ. ಕನ್ನಡ/ಇಂಗ್ಲಿಷ್ ಯಾವುದೇ ಮಾಧ್ಯಮವನ್ನು ಮಕ್ಕಳು ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರಾಗಿರುತ್ತಾರೆ ಎಂದು ಸಚಿವರು ತಿಳಿಸಿದರು.