ನ್ಯೂಸ್

4,5ನೇ ತರಗತಿ ಸರ್ಕಾರಿ ಶಾಲಾ ಮಕ್ಕಳಿಗೆ ‘ಓದು ಕರ್ನಾಟಕ’: ಏನಿದು ಯೋಜನೆ, ವಿದ್ಯಾರ್ಥಿಗಳಿಗೆ ಲಾಭವೇನು?

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 4 ಮತ್ತು 5ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾಶಾಸದ ಕೌಶಲಗಳನ್ನು ಅಭಿವೃದ್ಧಿಪಡಿಸಲು ‘ಓದು ಕರ್ನಾಟಕ’ ಎಂಬ ಕಾರ್ಯಕ್ರಮವನ್ನು 2025-26ನೇಸಾಲಿನಲ್ಲಿ ಅನುಷ್ಠಾನ ಮಾಡುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯದ 42,946 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 10,03,821 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಓದು ಕರ್ನಾಟಕ ಕಾರ್ಯಕ್ರಮವನ್ನು 2023-24ನೇ ಸಾಲಿನ ನಿಪುಣ ಭಾರತ ಮಿಷನ್ ಅಡಿಯಲ್ಲಿ ನವೀನ ಶಿಕ್ಷಣಶಾಸದ ಅನುಷ್ಠಾನಕ್ಕಾಗಿ ಕಲಿಕಾ ಬೊಧನಾ ಸಾಮಗ್ರಿಗಳನ್ನು ಒದಗಿಸಲು ಅನುಮೋದಿತ ಚಟುವಟಿಕೆಗಳಲ್ಲಿ ಸೇರಿಸಲಾಗಿದೆ.

ಕಾರ್ಯಕ್ರಮ ಅನುಷ್ಠಾನಕ್ಕಾಗಿ 12.42 ಕೋಟಿ ರೂ. ಹಾಗೂ ತರಬೇತಿ ನೀಡಲು 1.82 ಕೋಟಿ ರೂ. ಸೇರಿ ಒಟ್ಟು 14.24 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

ರಾಜ್ಯ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ‘ಓದು ಕರ್ನಾಟಕ’ ಯೋಜನೆಯನ್ನು ೋಷಣೆ ಮಾಡಿತ್ತು. ಅದರಂತೆ ಈಗ ಅನುಷ್ಠಾನಗೊಳಿಸಲು ಆದೇಶ ಹೊರಡಿಸಿದೆ.

ನಲಿ-ಕಲಿ ಪದ್ಧತಿಯು 1ರಿಂದ 3ನೇ ತರಗತಿಗೆ ಜಾರಿಯಲ್ಲಿರುವುದರಿಂದ ಹಾಗೂ ಅದರಿಂದ ಮಕ್ಕಳ ಕಲಿಕಾ ನ್ಯೂನ್ಯತೆ ಹೆಚ್ಚು ಇರುವುದರಿಂದ ಪರಿಹರಾತ್ಮಕ ಬೋಧನೆ ಅವಶ್ಯಕತೆ ಇದೆ. 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆ ಮತ್ತು ಗಣಿತ ವಿಷಯದ ಮೂಲ ಪರಿಕಲ್ಪನೆಗಳನ್ನು ಶಿಕ್ಷಕರ ಮೂಲಕ ಅರ್ಥ್ಯಸಲಾಗುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಶಿಕ್ಷಕರಿಗೆ ವಿವಿಧ ಹಂತಗಳಲ್ಲಿ ತರಬೇತಿ ನೀಡಿ ಶಿಕ್ಷಕರಲ್ಲಿ ಅಗತ್ಯ ಕೌಶಲಗಳನ್ನು ವೃದ್ಧಿಸಲಾಗುವುದು ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.

ಪ್ರಥಮ್ ಸಂಸ್ಥೆ ಸಹಯೋಗದಲ್ಲಿ ಓದು ಕರ್ನಾಟಕ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುತ್ತಿದೆ.