ಬೆಂಗಳೂರು ಶಾಲಾ ಮಾನ್ಯತೆ ವಿಚಾರದಲ್ಲಿ ಆನ್‌ಲೈನ್ ನೋಂದಣಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಬುಡಮೇಲು ಮಾಡಿರುವ ಸಂಬಂಧ ವಿಜಯಪುರ ಜಿಲ್ಲಾ ಉಪ ನಿರ್ದೇಶಕ (ಡಿಡಿಪಿಐ) ಎನ್.ಎಚ್. ನಾಗೂರ ಅವರನ್ನು ಸೇವೆಯಿಂದ ಅಮಾನತು ಮಾಡಿ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ.
2024-25ನೇ ಸಾಲಿನಲ್ಲಿ ಸಲ್ಲಿಕೆಯಾಗಿರುವ 122 ಅರ್ಜಿಗಳಲ್ಲಿ ನಿಯಮಾನುಸಾರ ಪರಿಶೀಲಿಸಿ ಇತ್ಯರ್ಥಪಡಿಸಿರುವ ಪ್ರಕ್ರಿಯೆ ಸರಿಯಾಗಿ ನಡೆಯದಿರುವುದನ್ನು ಗಮನಿಸಲಾಗಿದೆ. ಹೊಸ ಶಾಲಾ ನೋಂದಣಿ ಪ್ರಕ್ರಿಯೆಯಲ್ಲಿ ನಿಯಮಬಾಹಿರವಾಗಿ ಕೃತ್ಯ ಎಸಗಿ ಇಲಾಖೆಗೆ ಮುಜುಗರ ಉಂಟುಮಾಡಿರುವ ಕಾರಣ ಅಮಾನತು ಮಾಡಲಾಗಿದೆ ಎಂದು ತಿಳಿಸಿದೆ.
122 ಅರ್ಜಿಗಳಲ್ಲಿ ಅನುಮೋದನೆ ನೀಡಿದ್ದ 58 ಅರ್ಜಿಗಳಲ್ಲಿ 40 ಶಾಲೆಗಳ ಕಟ್ಟಡ ಪೂಃರ್ಣಗೊಂಡಿರುವುದಿಲ್ಲ, 27 ಶಾಲೆಗಳು ಭೂ ಪರಿವರ್ತನೆ ದಾಖಲೆ ಸಲ್ಲಿಸಿರುವುದಿಲ್ಲ, 33 ಶಾಲೆಗಳಲ್ಲಿ ಬ್ಯಾಂಕ್ ಬ್ಯಾಲನ್ಸ್ ಹೊಂದಿರುವುದಿಲ್ಲ, 43 ಶಾಲೆಗಳು ಕಟ್ಟಡದ ನಕ್ಷೆ ತೋರಿಸಿಲ್ಲ, 67 ಶಾಲೆಗಳು ಕಂದಾಯ ಪಾವತಿಸಿದ ದಾಖಲೆಗಳಿಲ್ಲ, ಲೀಸ್ ಡೀಡ್/ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳಿರುವುದಿಲ್ಲ. ಹೀಗೆ ಹಲವು ದಾಖಲೆಗಳಿಲ್ಲದೆ ನೋಂದಣಿಗೆ ಅನುಮೋದನೆ ನೀಡಲಾಗಿತ್ತು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ಈ ವರ್ಷ 5,886 ಶಾಲೆಗಳು ಮಾನ್ಯತ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದವು. ಇದರಲ್ಲಿ 3,811 ಶಾಲೆಗಳ ನವೀಕರಣ ಬಾಕಿ ಇದೆ. ನವೀಕರಣ ಪ್ರಕ್ರಿಯೆಯಲ್ಲಿ ಡಿಡಿಪಿಐ ಗಳು ಅವ್ಯವಹಾರ ನಡೆಸುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ. ಕೂಡಲೇ ತನಿಖೆ ನಡೆಸಬೇಕು.
- ಬಿ.ಎನ್. ಯೋಗಾನಂದ, ಪೋಷಕ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ