ಬೆಂಗಳೂರು: ಮಗಳು ಕೃತಿಕಾ ರೆಡ್ಡಿ ಹೆಸರಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ತೀರ್ಮಾನಿಸಿದ್ದೇವೆ ಎಂದು ಮೃತರ ತಾಯಿ ಸೌಜನ್ಯಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮಗಳಿಗೆ ಆರೋಗ್ಯ ಸಮಸ್ಯೆ ಇರಲಿಲ್ಲ. ಸಂಬಂಧಿಕರು ನೋಡಿದ ಹುಡುಗನ ಜತೆ ಮದುವೆ ಮಾಡಲಾಗಿತ್ತು. ಮದುವೆಯಾಗಿ ಹನ್ನೊಂದು ತಿಂಗಳು ಮಾತ್ರ ಅಳಿಯ ಮಹೇಂದ್ರರೆಡ್ಡಿ ಜತೆಗೆ ಇದ್ದ. ಸಣ್ಣ ಆರೋಗ್ಯ ಸಮಸ್ಯೆಗೆ ಪ್ರಾಣ ತೆಗಿತಾರ? ಪ್ರಾಣ ತೆಗೆಯೋ ಅಧಿಕಾರ ಆತನಿಗೆ ಯಾರು ಕೊಟ್ಟರು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಪಿ ಡಾ.ಮಹೇಂದ್ರ ರೆಡ್ಡಿ ಸಹೋದರನ ಮೇಲು ಹುಡುಗಿಗೆ ಮೋಸ ಮಾಡಿದ ಆರೋಪವಿದೆ. ಪ್ರಾಣ ಉಳಿಸುವವರೇ ಪ್ರಾಣ ತೆಗೆಯುವ ಕೆಲಸ ಮಾಡಿದ್ದಾರೆ. ಅವರದ್ದೇ ಔಷಧ ಅಂಗಡಿ ಇದ್ದು, ಕೃತಿಕಾ ಕೊಲೆಗೆ ಬಳಸಿರುವ ಅನಸ್ತೇಶಿಯಾ ಅಲ್ಲಿಂದಲೇ ತಂದಿರಬಹುದು. ಈ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಆರೋಪಿ ಈ ರೀತಿ ಎಷ್ಟು ಹುಡುಗಿಯರಿಗೆ ಮೋಸ ಮಾಡಿರಬಹುದು ಎಂಬುದರ ಬಗ್ಗೆಯೂ ತನಿಖೆ ಆಗಬೇಕು. ಮಗಳು ಇಷ್ಟ ಇಲ್ಲದಿದ್ದರೆ ನಮಗೆ ಹೇಳಬೇಕಿತ್ತು. ಅದನ್ನು ಬಿಟ್ಟು ಈ ರೀತಿ ಕೊಲೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಬಡ ಮಕ್ಕಳಿಗೆ ಸಹಾಯ:
ಕೃತಿಕಾ ರೆಡ್ಡಿ ತಂದೆ ಮುನಿರೆಡ್ಡಿ ಮಾತನಾಡಿ, ನಮ್ಮ ಇಬ್ಬರು ಮಕ್ಕಳನ್ನ ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಓದಿಸಿದ್ದೇವೆ. ಹಣಕಾಸಿನ ಸಮಸ್ಯೆ ಇರಲಿಲ್ಲ. ಉಚಿತ ಆರೋಗ್ಯ ಶಿಬಿರ ಆಯೋಜಿಸಿ, ಜನರಿಗೆ ಸೇವೆ ಮಾಡುವ ಉದ್ದೇಶವಿತ್ತು. ಅದು ಬಿಟ್ಟರೆ ಹಣ ಮಾಡುವ ಉದ್ದೇಶ ಇರಲಿಲ್ಲ. ವೈದ್ಯಕೀಯ ವ್ಯಾಸಂಗ ಮಾಡುವ ಬಡ ಮಕ್ಕಳಿಗೆ ಸಹಾಯ ಮಾಡಲಾಗುವುದು ಎಂದರು.