ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿದರು. 
ನ್ಯೂಸ್

ಐಪಿ ಸೆಟ್‌ಗಳಿಗೆ ಸಮಯ ನಿಗದಿ ಮಾಡಿ: ಎಚ್.ಆರ್.ಬಸವರಾಜಪ್ಪ

ನವೀನ ಬಿ.ಎಂ

ಶಿವಮೊಗ್ಗ: ರೈತರ ಐಪಿ ಸೆಟ್‌ಗಳಿಗೆ ಹಗಲು ಕನಿಷ್ಟ 10 ಗಂಟೆ 3ಫೇಸ್ ವಿದ್ಯುತ್ ನೀಡಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಆಗ್ರಹಿಸಿದರು.

ಮಳೆ ಇಲ್ಲದೆ ಒಣಗುತ್ತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಟ ನಡೆಸುತ್ತಿದ್ದಾರೆ. ಐಪಿ ಸೆಟ್‌ಗಳನ್ನು ಉಪಯೋಗಿಸಿ ಬೆಳೆ ಬೆಳೆಯುತ್ತಿರುವ ರೈತರಿಗೆ ವಿದ್ಯುತ್ ಸಮಸ್ಯೆ ಎದುರಾಗಿದೆ. ಸರ್ಕಾರ ಕನಿಷ್ಠ 7 ಗಂಟೆ 3ಫೇಸ್ ವಿದ್ಯುತ್ ಕೊಡುವುದಾಗಿ ಹೇಳಿದೆ. ಆದರೆ ದಿನಕ್ಕೆ ಕನಿಷ್ಠ 3-4 ಗಂಟೆಯೂ ಕೊಡುತ್ತಿಲ್ಲ. ರಾತ್ರಿಯೆಲ್ಲ ಐಪಿ ಸೆಟ್‌ಗಳ ಬಳಿಯೇ ಕಾಲ ಕಳೆಯುವಂತಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವೋಲ್ಟೇಜ್ ವ್ಯತ್ಯಯದಿಂದ ಐಪಿ ಸೆಟ್‌ಗಳ ಮೋಟರ್‌ಗಳು ಸುಟ್ಟು ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಹಾಗಾಗಿ ಐಪಿ ಸೆಟ್‌ಗಳಿಗೆ ವಿದ್ಯುತ್ ಪೂರೈಕೆಗೆ ಸಮಯ ನಿಗದಿ ಮಾಡಬೇಕು ಎಂದರು.
ಐಪಿ ಸೆಟ್‌ಗಳಿಗೆ ಆಧಾರ್‌ಕಾರ್ಡ್ ಜೋಡಣೆ ಹಿಂದೆ ಖಾಸಗೀಕರಣದ ಹುನ್ನಾರ ಅಡಗಿದೆ. ಐಪಿ ಸೆಟ್‌ಗಳಿಗೆ ಆಧಾರ್ ನಂಬರ್ ಜೋಡಣೆ ಮಾಡುವಂತೆ ಇಲಾಖೆಯವರು ಒತ್ತಾಯಿಸುತ್ತಿದ್ದಾರೆ. ಆಧಾರ್ ಕಾರ್ಡ್ ಜೋಡಣೆ ಮಾಡಿದರೆ ಮುಂದಿನ ದಿನಗಳಲ್ಲಿ ಮೊಬೈಲ್‌ಗಳಿಗೆ ಕರೆನ್ಸಿ ಹಾಕಿಸಿಕೊಂಡು ಉಪಯೋಗಿಸುವ ರೀತಿಯಲ್ಲಿ ವಿದ್ಯುತ್ ಉಪಯೋಗಿಸಬೇಕಾದಂತಹ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ರೈತರು ಐಪಿ ಸೆಟ್‌ಗಳಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಬಾರದು. ಸರ್ಕಾರ ಇದನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
ರಾಜ್ಯ ಉಪಾಧ್ಯಕ್ಷರಾದ ಹಿಟ್ಟೂರು ರಾಜು, ಟಿ.ಎಂ.ಚಂದ್ರಪ್ಪ, ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ, ಕಾರ್ಯಾಧ್ಯಕ್ಷ ಕೆ.ರಾಘವೇಂದ್ರ, ಪಿ.ಡಿ. ಮಂಜಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ತೆಂಗು ದರ ಹೆಚ್ಚಳ ಸಂಬಂಧ ಅಕ್ಟೋಬರ್ 2ರಂದು ತಿಪಟೂರಿನಿಂದ ಬೆಂಗಳೂರಿನವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಪಾದಯಾತ್ರೆಯಲ್ಲಿ ಶಿವಮೊಗ್ಗ ಜಿಲ್ಲೆಯಿಂದಲೂ ನೂರಾರು ರೈತರು ಪಾಲ್ಗೊಳ್ಳಲಿದ್ದಾರೆ.
ಎಚ್.ಆರ್.ಬಸವರಾಜಪ್ಪ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ