ನ್ಯೂಸ್

ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ: ಮೂವರ ವಿರುದ್ಧ ದೂರು ದಾಖಲು

ಬೆಂಗಳೂರು: ಪ್ರತಿಷ್ಠಿತ ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಆರು ಮಂದಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಂದ ಒಟ್ಟು ೧೨ ಲಕ್ಷ ರೂ. ಪಡೆದು ವಂಚಿಸಿದ ಆರೋಪದಡಿ ಮೂವರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಜಯನಗರ ೬ನೇ ಬ್ಲಾಕ್ ನಿವಾಸಿ ಎಸ್.ಎಂ.ಕಾರ್ತಿಕ್ ಎಂಬುವವರು ನೀಡಿದ ದೂರಿನ ಮೇರೆಗೆ ಪಾವನಿ, ಶ್ರೀನಿವಾಸ ಹಾಗೂ ಗೋಪಿ ಚಿಲುಕುಲ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ದೂರುದಾರ ಕಾರ್ತಿಕ್ ಇಂಜಿನಿಯರ್ ಪದವಿ ಮುಗಿಸಿದ ನಂತರ ವಿದೇಶಿ ಮೂಲದ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಎಂಬಾತನ ಮೂಲಕ ೨೦೨೨ರ ಆಗಸ್ಟ್‌ನಲ್ಲಿ ಪಾವನಿ ಎಂಬ ಯುವತಿಯ ಪರಿಚಯವಾಗಿದೆ. ನಗರದ ವಿವಿಧ ಖಾಸಗಿ ಕಂಪನಿಗಳಲ್ಲಿ ಪಾವನಿ ಕೆಲಸ ಕೊಡಿಸುತ್ತಾರೆ ಎಂದು ಪಾವನಿಯನ್ನು ಕಿರಣ್ ಪರಿಚಯಿಸಿದ್ದ. ಈ ವೇಳೆ ಪಾವನಿ ಜತೆಗೆ ಶ್ರೀನಿವಾಸ ಮತ್ತು ಗೋಪಿ ಇದ್ದರು. ಶ್ರೀನಿವಾಸ ಮತ್ತು ಗೋಪಿ ತಾವು ಇನ್ಫೋಸಿಸ್ ಕಂಪನಿಯಲ್ಲಿ ಮಾನವ ಸಂಪನ್ಮೂಲ(ಎಚ್.ಆರ್) ವಿಭಾಗದಲ್ಲಿ ಕೆಲಸ ಮಾಡುತ್ತಿರುವುದಾಗಿ ದೂರುದಾರ ಕಾರ್ತಿಕ್ ಹಾಗೂ ಆತನ ಸ್ನೇಹಿತರಾದ ಮುರಳಿ, ಸಂದೀಪ್, ಎಂ.ಜೆ.ಕಾರ್ತಿಕ್ ಧರಣಿ ಹಾಗೂ ಕುಮುದಾ ಅವರಿಗೆ ಪರಿಚಯಿಸಿಕೊಂಡಿದ್ದಾರೆ. ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾರೆ.


ಹಂತ ಹಂತವಾಗಿ ೧೨ ಲಕ್ಷ ರೂ. ಪಡೆದು ವಂಚನೆ:
ದೂರುದಾರ ಕಾರ್ತಿಕ್ ಹಾಗೂ ಆತನ ಐದು ಮಂದಿ ಸ್ನೇಹಿತರಿಂದ ಫೋನ್ ಪೇ ಹಾಗೂ ಗೂಗಲ್ ಪೇ ಮುಖಾಂತರ ೨೦೨೨ರ ಆಗಸ್ಟ್‌ನಿಂದ ೨೦೨೩ರ ಮಾರ್ಚ್ ವರೆಗೆ ಒಟ್ಟು ೧೨ ಲಕ್ಷ ರೂ. ಪಡೆದಿದ್ದಾರೆ. ಆದರೆ, ಈವರೆಗೂ ಇನ್ಫೋಸಿಸ್ ಕಂಪನಿಯಲ್ಲಿ ಉದ್ಯೋಗ ಕೊಡಿಸಿಲ್ಲ. ಹಣವನ್ನೂ ವಾಪಾಸ್ ನೀಡಿಲ್ಲ. ಮೋಸ ಮಾಡುವ ಉದ್ದೇಶದಿಂದಲೇ ಪಾವನಿ, ಶ್ರೀನಿವಾಸ ಹಾಗೂ ಗೋಪಿ ನಮ್ಮಿಂದ ಹಣ ಪಡೆದು ವಂಚಿಸಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.