ನ್ಯೂಸ್

ಎಸ್ ಸಿ ಸಮೀಕ್ಷೆ ಮೇ 25ರವರೆಗೆ ವಿಸ್ತರಣೆ: ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಮಾಹಿತಿ | Submitting the report within the deadline

ಬೆಂಗಳೂರು: ಪರಿಶಿಷ್ಟ ಜಾತಿ ಸಮೀಕ್ಷೆಗಾಗಿ ಮನೆ ಮನೆಗೆ ಭೇಟಿ ಮೇ 25ರವರೆಗೆ ವಿಸ್ತರಿಸಲಾಗಿದೆ. ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ  ವಿಶೇಷ ಶಿಬಿರ ಮೇ 26 ರಿಂದ 28 ಹಾಗೂ ಆನ್ ಲೈನ್ ಮೂಲಕ ಸ್ಚಯಂ ಘೋಷಣೆ ಸಲ್ಲಿಕೆ ಮೇ 19 ರಿಂದ 28ರವರೆಗೆ ನಿಗದಿಪಡಿಸಲಾಗಿದೆ ಎಂದು ಎಸ್ ಸಿ ಒಳ ಮೀಸಲು ಏಕಸದಸ್ಯ ವಿಚಾರಣಾ ಆಯೋಗದ ಮುಖ್ಯಸ್ಥ ನ್ಯಾ.ಡಾ.ಎಚ್.ಎನ್.ನಾಗಮೋಹನ್ ದಾಸ್ ಮಾಹಿತಿ ನೀಡಿದರು.

ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಶುಕ್ರವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ಸಂಘಟನೆಗಳು ಹಾಗೂ ಹಲವು ಜಿಲ್ಲಾಧಿಕಾರಿಗಳು ಮನೆ ಮನೆಗೆ ಭೇಟಿ ಮಾಡಿ ಸಮೀಕ್ಷೆ ನಡೆಸಲು ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಕೋರಿದ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸಲಾಗಿದೆ ಎಂದರು.

ಮೇ 5ರಿಂದ ಶುರುವಾಗಿರುವ ಸಾಕ್ಷಾತ್ ಸಮೀಕ್ಷೆಯಲ್ಲಿ ಮೇ 15ರವರೆಗೆ ಶೇಕಡ 73.72ರಷ್ಟು ಪ್ರಗತಿ ಸಾಧಿಸಲಾಗಿದೆ. ಒಟ್ಟು 31 ಜಿಲ್ಲೆಗಳಲ್ಲಿ 1841258, ಬಿಬಿಎಂಪಿ ವ್ಯಾಪ್ತಿಯಲ್ಲಿ 55027 ಕುಟುಂಬಗಳ ಸಮೀಕ್ಷಾ ಕಾರ್ಯಮುಗಿದಿದ್ದರೆ, 31 ಜಿಲ್ಲೆಗಳ 970233, ಬಿಬಿಎಂಪಿ ವ್ಯಾಪ್ತಿಯಲ್ಲಿ 1326323 ಸೇರಿ ಒಟ್ಟು 11032556 ಎಸ್ ಸಿಯೇತರ ಕುಟುಂಬಗಳನ್ನು ಭೇಟಿ ಮಾಡಲಾಗಿದೆ. ಶುಕ್ರವಾರ ಸಂಜೆಯ ವೇಳೆಗೆ 20 ಲಕ್ಷ ಎಸ್ ಸಿ ಕುಟುಂಬಗಳ ಸಮೀಕ್ಷೆ ಪೂರ್ಣಗೊಳ್ಳಲಿದೆ ಎಂದು ನ್ಯಾ.ನಾಗಮೋಹನ್ ದಾಸ್ ವಿವರಿಸಿದರು.

ನಿಗದಿತ ಕಾಲಮಿತಿ ವರದಿ ಸಲ್ಲಿಕೆ

ಮನೆ ಮನೆಗೆ ಭೇಟಿ ಅವಧಿ ವಿಸ್ತರಣೆ, ವಿಶೇಷ ಶಿಬಿರ ಹಾಗೂ ಆನ್ ಲೈನ್ ನಲ್ಲಿ ಸಲ್ಲಿಕೆ ದಿನಾಂಕ ಪರಿಷ್ಕರಿಸಿದ್ದರೂ ಸುಪ್ರೀಂ ಕೋರ್ಟ್ ನಿಗದಿಪಡಿಸಿ ವೈಜ್ಞಾನಿಕ, ನಿಖರ ದತ್ತಾಂಶಗಳ ಆಧಾರದಲ್ಲಿ ಎಸ್ ಸಿ ಮೀಸಲು ವರ್ಗೀಕರಣ ಶಿಫಾರಸು ಸಹಿತ ನಿಗದಿತ ಕಾಲಮಿತಿಯೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಉದ್ಯೋಗಕ್ಕೆ ಸಂಬಂಧಿಸಿದಂತೆ 43ರ ಪೈಕಿ 40 ಇಲಾಖೆಗಳು ಮಾಹಿತಿ ನೀಡಿವೆ. ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೆ ರಾಜಕೀಯ ಪ್ರಾತಿನಿಧ್ಯದ ಮಾಹಿತಿ ಸಂಗ್ರಹಿಸಲಾಗಿದೆ. ವಿವಿಧ ತಜ್ಞರ ತಂಡಗಳು ವಿಶ್ಲೇಷಣಾ ಕಾರ್ಯದಲ್ಲಿ ತೊಡಗಿವೆ. ಅರೆಬರೆ ಮಾಹಿತಿ, ವಿಳಂಬ ಮಾಡಿದ ಇಲಾಖೆಗಳಿಗೆ ಎಚ್ಚರಿಕೆ, ನೋಟಿಸ್ ಕೂಡ ನೀಡಲಾಗಿದೆ ಎಂದು ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ತಿಳಿಸಿದರು.