ಬೆಂಗಳೂರು:
ಎಸ್ಸಿ ಎಸ್ಟಿ ಹಣವನ್ನ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ ಎಂದು
ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಮತ್ತು ಜೆಡಿಎಸ್ ಮೇಲ್ಮನೆಯಲ್ಲಿ ಸಭಾತ್ಯಾಗ ಮಾಡಿತು.
ಗಮನ ಸೆಳೆಯುವ ಸೂಚನೆಯಡಿ ವಿಷಯ ಪ್ರಸ್ತಾಪಿಸಿದ ಛಲವಾದಿ ನಾರಾಯಣ ಸ್ವಾಮಿ,
ಗ್ಯಾರಂಟಿಗಳಿಗೆ ಮೀಸಲಿಟ್ಟಿದ್ದ 52 ಸಾವಿರ ಕೋಟಿ ರೂ ಹಣದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಕೊಡಬೇಕಿತ್ತು. ಅದನ್ನು ಬಿಟ್ಟು ಎಸ್ಸಿಪಿ, ಟಿಎಸ್ಪಿಯೋಜನೆಗೆ ಮೀಸಲಾಗಿದ್ದ ಹಣದಲ್ಲಿಯೇ
14282 ಕೋಟಿ ರೂ ತೆಗೆಯುವ ಮೂಲಕ ಆ ಸಮುದಾಯಕ್ಕೆ ಅನ್ಯಾಯ ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉತ್ತರಿಸಿ, ಈ ಕಾಯ್ದೆಯ ಹಣ ಎಸ್ಸಿ ಎಸ್ಟಿ ಸಮುದಾಯದ ಕಲ್ಯಾಣಕ್ಕೆ ಬಳಸಲು ಅವಕಾಶ ಇದೆ. ಬೇರೆ ಯಾವ ಸಮುದಾಯಕ್ಕೂ ಬಳಸಲು ಅವಕಾಶ ಇಲ್ಲ. 2011 ರ ಜನಸಂಖ್ಯೆಯ ಅನುಗುಣವಾಗಿ ಈ ಯೋಜನೆಯ ಹಣ ಮೀಸಲಿಡಲಾಗಿದೆ. ಗ್ಯಾರಂಟಿ ಯೋಜನೆಗೆ ಆಯಾ ಇಲಾಖೆ ಕಾರ್ಯಕ್ರಮಗಳಿಗೆ ಕೇವಲ ಎಸ್ಸಿ ಎಸ್ಟಿ ಸಮುದಾಯದ 1.10 ಕೋಟಿ ಫಲಾನುಭವಿಗಳಿಗೆ ಬಳಸಲು ನೀಡಿದ್ದೇವೆ ಎಂದು ವಿವರಣೆ ನೀಡಿದರು.
ಬಿಜೆಪಿಯ ಎನ್.ರವಿಕುಮಾರ್ ಮಾತನಾಡಿ, ಕಳೆದ ವರ್ಷ 11114 ಕೋಟಿ ರೂ ಹಣ, ಈ ವರ್ಷ 14582 ಕೋಟಿ ರೂ ಸೇರಿ ಒಟ್ಟು, 25396 ಕೋಟಿ ಹಣ ಎಸ್ಸಿ ಎಸ್ಟಿ ಹಣ ಅನ್ಯ ಉದ್ದೇಶಕ್ಕೆ ಬಳಸಲಾಗಿದೆ. 7ಸಿ, 7ಡಿ ಅಡಿಯಲ್ಲಿ ದುರ್ಬಳಕೆ ಆಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಆಡಳಿತ ಪಕ್ಷದ ಸದಸ್ಯರಿಗೆ ಸಿ.ಟಿ.ರವಿ ಮತ್ತು ನವೀನ್, ಡಿ.ಎಸ್.ಅರುಣ್ ತಿರುಗೇಟು ನೀಡಿದರು.
ಮಾತು ಮುಂದುವರಿಸಿದ ಸಚಿವರು, ಸಿದ್ದರಾಮಯ್ಯ ಸರ್ಕಾರದ ಮೂಲ ಉದ್ದೇಶವೇ ಸಾಮಾಜಿಕ ನ್ಯಾಯ, ಆ ನಿಟ್ಟಿನಲ್ಲೆ ಸರ್ಕಾರ ನಡೆಯುತ್ತಿದೆ. ಕೆಳವರ್ಗದ ಜನರನ್ನ ಮೇಲೆತ್ತುವುದೇ ಸರ್ಕಾರದ ಗುರಿ. ಮಾಸಿಕವಾಗಿ 4 ರಿಂದ 5 ಸಾವಿರ ಆದಾಯ ನೀಡುವ ಯೋಜನೆ ಇದಾಗಿದೆ. 14000 ಕೋಟಿ ಹಣ ಗ್ಯಾರಂಟಿಗೆ ಕೊಡ್ತಿದ್ದೇವೆಲ್ಲ ಇದು ಎಸ್ಸಿ ಎಸ್ಟಿ ಸಮುದಾಯಕ್ಕೆ ಹೋಗುತ್ತೆ. ಬೇರೆ ಸಮುದಾಯಕ್ಕೆ ಈ ಹಣ ಖರ್ಚಾಗಲು ನಾವು ಬಿಡುವುದಿಲ್ಲ ಎಂದರು.
ಸಚಿವರ ಉತ್ತರದಿಂದ ತೃಪ್ತರಾಗದ ವಿರೋಧ ಪಕ್ಷ್ವಆದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು, ಪರಿಶಿಷ್ಟ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದೀರಿ ಎಂದು ೋಷಣೆ ಕೂಗಿ ಸಭಾತ್ಯಾಗ ಮಾಡಿದರು.