ನ್ಯೂಸ್

ನಿರ್ಭಯಾ ಕೇಸ್: ಅಪರಾಧಿ ವಿನಯ್ ಶರ್ಮಾ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ನಿರ್ಭಯಾ ಕೇಸ್​ನ ನಾಲ್ವರು ಅಪರಾಧಿಗಳ ಪೈಕಿ ವಿನಯ್ ಶರ್ಮಾ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ. ಆತ ಸಲ್ಲಿಸಿದ್ದ ದಯಾ ಅರ್ಜಿ ತಿರಸ್ಕರಿಸುವಂತೆ ಶಿಫಾರಸು ಮಾಡಬೇಕೆಂಬ ಮನವಿಯ ಅರ್ಜಿ ಅದಾಗಿತ್ತು.

ನ್ಯಾಯಪೀಠದಲ್ಲಿ ಗುರುವಾರ ವಿಚಾರಣೆ ಆರಂಭವಾದ ಕೂಡಲೇ ಶರ್ಮಾ ಪರ ವಕೀಲ ಎ.ಪಿ.ಸಿಂಗ್​ ಅವರು ಶರ್ಮಾ ಸಲ್ಲಿಸಿದ್ದ ದಯಾ ಅರ್ಜಿ ತಿರಸ್ಕರಿಸಬೇಕೆಂಬ ಮನವಿಗೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್​ ಮತ್ತು ದೆಹಲಿಯ ಗೃಹ ಸಚಿವರು ಸಹಿ ಹಾಕುತ್ತಿಲ್ಲ ಎಂದು ಆರೋಪ ಮಾಡಿದರು.

ಆದಾಗ್ಯೂ, ನ್ಯಾಯಮೂರ್ತಿಗಳಾದ ಆರ್. ಬಾನುಮತಿ, ಅಶೋಕ್ ಭೂಷಣ್​, ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠ ದಾಖಲೆ ಪರಿಶೀಲಿಸಿ, ಲೆಫ್ಟಿನೆಂಟ್ ಗವರ್ನರ್ ಮತ್ತು ಗೃಹ ಸಚಿವರು ಸಹಿ ಹಾಕಿರುವುದನ್ನು ಖಾತರಿ ಪಡಿಸಿಕೊಂಡಿತು.

ರಾಷ್ಟ್ರಪತಿಗಳು ತರಾತುರಿಯಲ್ಲಿ ದಯಾ ಅರ್ಜಿ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಶರ್ಮಾ ತನ್ನ ವಕೀಲರ ಮೂಲಕ ಮಂಗಳವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ. ತರಾತುರಿಯಲ್ಲಿ ತಿರಸ್ಕರಿಸಿರುವುದು ಸಂವಿಧಾನದ ಸಾರದ ಪ್ರಕಾರ ಇರುವುದಿಲ್ಲ ಎಂದು ವಾದ ಮಂಡಿಸಲಾಗಿತ್ತು. (ಏಜೆನ್ಸೀಸ್)