ನ್ಯೂಸ್

ವಿಚಾರಣೆ ವೇಳೆ ಅಸ್ವಸ್ಥರಾದ ನ್ಯಾಯಮೂರ್ತಿ: ಕೋರ್ಟ್ ಹಾಲ್​ನಿಂದ ವೀಲ್​ಚೇರ್​ನಲ್ಲಿ ಕಚೇರಿಗೆ ರವಾನೆ, ಆಸ್ಪತ್ರೆಯಲ್ಲಿ ಚಿಕಿತ್ಸೆ

ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣ ಸಂಬಂಧ ಕೇಂದ್ರ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಆರ್.ಭಾನುಮತಿ ಅಸ್ವಸ್ಥರಾದ ಘಟನೆ ಶುಕ್ರವಾರ ನಡೆಯಿತು. ತಕ್ಷಣ ಅವರನ್ನು ಕೋರ್ಟ್ ಹಾಲ್​ನಿಂದ ಹೊರ ಕರೆತಂದು ಚಿಕಿತ್ಸೆಗೆ ಕಳುಹಿಸಲಾಯಿತು.

ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಒಟ್ಟಿಗೆ ಗಲ್ಲು ಶಿಕ್ಷೆ ಜಾರಿ ಮಾಡಬೇಕೆಂಬ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಯುತ್ತಿದ್ದ ವೇಳೆ ನ್ಯಾ.ಭಾನುಮತಿ ಇದ್ದಕ್ಕಿದ್ದಂತೆ ನಿತ್ರಾಣರಾಗಿ ಪ್ರಜ್ಞೆ ತಪ್ಪಿದರು. ತಕ್ಷಣವೇ ಅವರನ್ನು ಗಾಲಿ ಕುರ್ಚಿಯಲ್ಲಿ ಕೂರಿಸಿ ಕೋರ್ಟ್ ಹಾಲ್​ನಿಂದ ಅವರ ಕಚೇರಿಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಲಾಯಿತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮೇಲ್ಮನವಿ ಕುರಿತ ತೀರ್ಪನ್ನು ಕಚೇರಿಯಲ್ಲೇ ನೀಡಲಾಗುವುದು ಎಂದು ಪೀಠದಲ್ಲಿದ್ದ ಮತ್ತೋರ್ವ ನ್ಯಾಯ ಮೂರ್ತಿ ಎ.ಎಸ್. ಬೋಪಣ್ಣ ತಿಳಿಸಿದರು.

ಕೋರ್ಟ್ ಆವರಣದಲ್ಲಿ ಆತಂಕ: ಸುಪ್ರೀಂಕೋರ್ಟ್ ಆವರಣದಲ್ಲಿ ಭದ್ರತಾ ಪಡೆಗಳು ಪವರ್ ಬ್ಯಾಂಕ್​ನ್ನು ಬಾಂಬ್ ಎಂದು ಶಂಕೆ ವ್ಯಕ್ತಪಡಿಸಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ವಣವಾಗಿತ್ತು. ಬ್ಯಾಗೊಂದರಲ್ಲಿದ್ದ ಪವರ್​ಬ್ಯಾಂಕ್ ಬೀಪ್ ಶಬ್ದ ಮಾಡುತ್ತಿತ್ತು. ಇದನ್ನು ಬಾಂಬ್ ಎಂದು ತಿಳಿದ ಭದ್ರತಾ ಸಿಬ್ಬಂದಿ ಗಾಬರಿಗೊಂಡಿದ್ದರು.

ವಿನಯ್ ಅರ್ಜಿ ವಜಾ

ಇದಕ್ಕೂ ಮೊದಲು ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಅಪರಾಧಿ ವಿನಯ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತು. ವಿನಯ್ ಮಾನಸಿಕ ಸ್ಥಿತಿ ಸರಿಯಿಲ್ಲ. ಹೀಗಾಗಿ ಆತನಿಗೆ ಮರಣದಂಡನೆಯಿಂದ ವಿನಾಯಿತಿ ನೀಡಬೇಕು ಎಂದು ಅಪರಾಧಿ ಪರ ವಕೀಲರು ಮನವಿ ಮಾಡಿದ್ದರು. ವಿನಯ್ನ ವೈದ್ಯಕೀಯ ವರದಿಗಳನ್ನು ಪರಿಶೀಲಿಸಿದ ನ್ಯಾಯಪೀಠ, ಅಪರಾಧಿಯು ದೈಹಿಕವಾಗಿ ಆರೋಗ್ಯವಾಗಿದ್ದು, ಆತನ ಮಾನಸಿಕ ಸ್ಥಿತಿಯೂ ಸ್ಥಿರವಾಗಿದೆ ಎಂದು ಅರ್ಜಿ ವಜಾಗೊಳಿಸಿತು.