ಬೆಂಗಳೂರು: ಪರಿಶಿಷ್ಟ ಜಾತಿ ಒಳ ಮೀಸಲು ಕಲ್ಪಿಸುವ ವಿಚಾರದಲ್ಲಿ ಬಿಜೆಪಿ ಬದ್ಧತೆಯನ್ನು ಪ್ರಶ್ನಿಸುವ ಮುನ್ನ 'ಸ್ವಯಂ ಘೋಷಿತ' ಹಿಂದುಳಿದ ವರ್ಗಗಳ ನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆದು ಒಳ ಮೀಸಲು ಜಾರಿ ನಿರ್ಧಾರ ಕೈಗೊಳ್ಳಲಿ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸೆಡ್ಡು ಹೊಡೆದಿದ್ದಾರೆ.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಮೊದಲ ಅಧಿವೇಶನದಲ್ಲಿ ಈ ಕುರಿತು ನಿರ್ಣಯ ಅಂಗೀಕರಿಸಬೇಕಾಗಿತ್ತು. ಆದರೆ, ಈ ವಿಷಯವನ್ನೇ ಚರ್ಚೆಗೆ ಪ್ರಸ್ತಾಪಿಸಿಲ್ಲ. ತಮಿಳುನಾಡಿನಲ್ಲಿ ಎಸ್ ಸಿ ಮೀಸಲು ವರ್ಗೀಕರಣ ಜಾರಿಯಲ್ಲಿದೆ. ಷೆಡ್ಯೂಲ್ 9ಕ್ಕೆ ಸೇರ್ಪಡೆ ಮಾಡುವುದನ್ನು ಸುಪ್ರೀಂ ಕೋರ್ಟ್ ರದ್ದುಪಡಿಸುವ ಮುನ್ನ ಅವಿಭಜಿತ ಆಂಧ್ರಪ್ರದೇಶದಲ್ಲೂ ಜಾರಿಯಲ್ಲಿತ್ತು. ಸಿಎಂ ಸಿದ್ದರಾಮಯ್ಯ ಅವರಿಗೆ ಎದೆಗಾರಿಕೆ, ಮೀಸಲು ವರ್ಗೀಕರಣದ ಬಗ್ಗೆ ಬದ್ಧತೆಯಿದ್ದರೆ ವಿಶೇಷ ಅಧಿವೇಶನ ಕರೆದು ಒಪ್ಪಿಗೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪಂಜಾಬ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 2015ರಲ್ಲಿ ನೀಡಿದ ಅಭಿಪ್ರಾಯದಂತೆ ಕೇಂದ್ರ ಸರ್ಕಾರ ಸಂವಿಧಾನದ 341ನೇ ಪರಿಚ್ಛೇದಕ್ಕೆ ತಿದ್ದುಪಡಿ ತರುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಇದರ ಭಾಗವಾಗಿ ಎಲ್ಲ ರಾಜ್ಯಗಳ ಅಭಿಪ್ರಾಯಗಳನ್ನು ತರಿಸಿಕೊಂಡು ದಾಖಲಿಸುತ್ತಿದೆ.
ಮಹಾಘಟಬಂಧನ್ ಸದಸ್ಯರು ಒಳಮೀಸಲಿಗೆ ವಿರೋಧ ವ್ಯಕ್ತಪಡಿಸಿವೆ. ಪಂಜಾಬ್ ಆಡಳಿತ ಪಕ್ಷ ಆಮ್ ಆದ್ಮಿ ಪಾರ್ಟಿ, ಪಶ್ಚಿಮ ಬಂಗಾಳ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್, ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರ ಒಳ ಮೀಸಲು ವಿರೋಧಿ ನಿಲುವು ತಳೆದಿದ್ದು, ಸಿಎಂ ಸಿದ್ದರಾಮಯ್ಯ ಅವರು ಮೊದಲಿಗೆ ರಾಜ್ಯಗಳ ಮುಖ್ಯಮಂತ್ರಿಗಳ ಚರ್ಚಿಸಬೇಕು ಎಂದು ಎ.ನಾರಾಯಣಸ್ವಾಮಿ ಒತ್ತಾಯಿಸಿದರು.
ಹಿರಿಯ ರಾಜಕೀಯ ನಾಯಕ, ಸ್ವತಃ ವಕೀಲರು ಆಗಿರುವ ಸಿದ್ದರಾಮಯ್ಯ ಅವರಿಗೆ ಸಂಸತ್ ಹಾಗೂ ವಿಧಾನಸಭೆ ಕಾರ್ಯಕಲಾಪಗಳ ನಡವಳಿಕೆ ಅರಿವು, ಅನುಭವವಿದೆ ಎಂದುಕೊಂಡಿರುವೆ. ಸಂಸತ್ ಅಧಿವೇಶನದಲ್ಲಿ ಕೇಳಲಾದ ಚುಕ್ಕೆ ರಹಿತ ಗುರುತಿನ ಪ್ರಶ್ನೆಗೆ ನಾನು ನೀಡಿದ ಉತ್ತರವನ್ನು ಬಳಸಿಕೊಂಡು ಬಿಜೆಪಿ ಬೂಟಾಟಿಕೆ ಬಯಲು ಎಂದು ಟೀಕಿಸಿರುವುದು ಅಚ್ಚರಿ ಹಾಗೂ ಹಾಸ್ಯಾಸ್ಪದವಾದುದು.
ಎಸ್ ಸಿ ಒಳ ಮೀಸಲು ವಿಚಾರವಾಗಿ ಸಂವಿಧಾನ ಏನು ಹೇಳುತ್ತದೆ ಎನ್ನುವುದು ಆ ಪ್ರಶ್ನೆಯಾಗಿತ್ತು. ಸದ್ಯದ ಸ್ಥಿತಿ ಪ್ರಕಾರ ಸಂವಿಧಾನದ ಪರಿಚ್ಛೇದ 341ರಲ್ಲಿ ಎಸ್ ಸಿ ಒಳ ಮೀಸಲು ಪ್ರಸ್ತಾಪವಿಲ್ಲ ಎಂದು ವಾಸ್ತವಿಕ ಅಂಶವನ್ನು ಉತ್ತರವಾಗಿ ತಿಳಿಸಿರುವೆ. ಸಂವಿಧಾನವನ್ನು ತಿರುಚಿ ಉತ್ತರಿಸಲಾಗದು ಎಂದು ಸ್ಪಷ್ಟಪಡಿಸಿದರು.
ಉತ್ತರದ ಮುಂದುವರಿದ ಭಾಗವಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದು ಒಳಮೀಸಲಿಗೆ ಅವಕಾಶ ನೀಡಬೇಕೆಂಬ ಕರ್ನಾಟಕ ಸರ್ಕಾರದ ಶಿಫಾರಸು, ಹಲವು ರಾಜ್ಯಗಳ ಅಭಿಮತ, ಸುಪ್ರೀಂ ಕೋರ್ಟ್ ನ ಇತ್ತೀಚಿನ ಅವಲೋಕನದ ಬಗ್ಗೆಯೂ ವಿವರಿಸಿರುವೆ ಎಂದು ಎ.ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು.
ಮಾಜಿ ಸಚಿವರಾದ ಗೋವಿಂದ ಕಾರಜೋಳ, ಹಾಲಪ್ಪ ಆಚಾರ್, ಎಸ್ ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಮುಖಂಡ ಸಚ್ಚಿದಾನಂದ ಮೂರ್ತಿ ಇದ್ದರು.