ಶಿವಮೊಗ್ಗ: ರಾಜ್ಯದಲ್ಲಿ ಸವಿತಾ ಸಮಾಜಕ್ಕೆ ಸೇರಿದ 6,800 ಮಂದಿ ನಾದಸ್ವರ ನುಡಿಸುವವರು ಇದ್ದಾರೆ. ಡಿ.27ಕ್ಕೆ ಇವರೆಲ್ಲರನ್ನೂ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೇರಿಸಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುವುದು. ಈ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಆಹ್ವಾನಿಸಲಾಗುವುದು ಎಂದು ಕೊಂಚೂರು ಸವಿತಾ ಪೀಠ ಮಹಾಸಂಸ್ಥಾನದ ಶ್ರೀ ಸವಿತಾನಂದನಾಥ ಸ್ವಾಮೀಜಿ ತಿಳಿಸಿದರು.
ಜಿಲ್ಲಾ ಸವಿತಾ ಸಮಾಜದಿಂದ ಮಂಗಳವಾರ ನಗರದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ಸವಿತಾ ಶಿಕ್ಷಣ ಸೇವಾ ಟ್ರಸ್ಟ್‌ನ ಉದ್ಘಾಟನಾ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಬೆಂಗಳೂರಿನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ನಮ್ಮ ಸಂಘಟನೆಯ ಶಕ್ತಿಯನ್ನು ಅನಾವರಣಗೊಳಿಸಬೇಕೆಂದರು.
ಸರ್ಕಾರಕ್ಕೆ ವಿವಿಧ ಬೇಡಿಕೆ
ಇದೇ ಸಂದರ್ಭದಲ್ಲಿ ಸವಿತಾ ಸಮಾಜದ ಅಭಿವೃದ್ಧಿಗಾಗಿ ವಿವಿಧ ಬೇಡಿಕೆಗಳನ್ನು ಶಾಸಕ ಕೆ.ಎಸ್.ಈಶ್ವರಪ್ಪ ಮೂಲಕ ಸರ್ಕಾರದ ಮುಂದಿರಿಸಿದ ಸವಿತಾನಂದನಾಥ ಶ್ರೀಗಳು, ಬೀದಿಗಿಳಿದು ಹೋರಾಟ ಮಾಡುವ ಮನಸ್ಥಿತಿಯವರು ನಾವಲ್ಲ. ಸರ್ಕಾರ ನಮ್ಮ ಸಮಸ್ಯೆ ಗುರುತಿಸಿ ಪರಿಹರಿಸಬೇಕೆಂದರು.
ಆಂದ್ರಪ್ರದೇಶದಲ್ಲಿ ನಮ್ಮ ಸಮಾಜಕ್ಕೆ ಪೂರಕವಾಗಿ ಜಾತಿ ನಿಂಧನೆ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಕರ್ನಾಟಕದಲ್ಲೂ ಇದೇ ತರಹದ ಕಾಯ್ದೆ ಜಾರಿಗೆ ತರಬೇಕು. ಹಿಂದುಳಿದ ನಮ್ಮ ಸಮಾಜಕ್ಕೆ ಮೀಸಲಾತಿ ಕಲ್ಪಿಸುವ ದೃಷ್ಠಿಯಿಂದ ಎಸ್ಸಿ ಇಲ್ಲವೇ ಪ್ರವರ್ಗ-1ಕ್ಕೆ ಸೇರಿಸುವ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಬೇಕೆಂದರು.
ನಮ್ಮ ಮಠದಿಂದ 700 ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಮಠದಲ್ಲಿ 500 ಗೋವುಗಳನ್ನು ಸಾಕುತ್ತಿದ್ದೇವೆ. ನಮ್ಮ ಮಠದ ಕಾರ್ಯದಿಂದ ಗೋಸಾಗಣೆ ಕಡಿಮೆಯಾಗಿದೆ. ಅಕ್ರಮ ಗೋಸಾಗಣೆಗೆ ಸಂಬಂಧಿಸಿದಂತೆ ನೂರಾರು ಎಫ್‌ಐಆರ್ ದಾಖಲಾಗಿವೆ ಎಂದು ತಿಳಿಸಿದರು.
ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎಂ.ಜಿ.ಬಾಲು ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕೆ.ಎಸ್.ಈಶ್ವರಪ್ಪ, ಸವಿತಾ ಶಿಕ್ಷಣ ಸೇವಾ ಟ್ರಸ್ಟ್‌ನ ಅಧ್ಯಕ್ಷ ಜೆ.ಶಿವಪ್ರಸಾದ್, ರಾಜ್ಯ ಸವಿತಾ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಎಂ.ವಿಜಯ ಭಾಸ್ಕರ್, ಧರ್ಮರಾಜ್, ಆಪ್ ಮುಖಂಡ ಭದ್ರಾವತಿಯ ಆನಂದ್, ಸವಿತಾ ಸಮಾಜದ ವಿವಿಧ ತಾಲೂಕುಗಳ ಅಧ್ಯಕ್ಷರು, ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಣ ಹಬ್‌ಗೆ ಸಹಕರಿಸಿ
ಶಿವಮೊಗ್ಗದಲ್ಲಿ ಸವಿತಾ ಸಮಾಜ, ಸವಿತಾ ಶಿಕ್ಷಣ ಸೇವಾ ಟ್ರಸ್ಟ್ ಹಾಗೂ ಸವಿತಾ ಪೀಠದ ಶಾಖಾ ಮಠಕ್ಕೆ ಪ್ರತ್ಯೇಕವಾಗಿ ಒಟ್ಟು ಐದು ಎಕರೆ ಭೂಮಿಯನ್ನು ಮಂಜೂರು ಮಾಡಿಸಬೇಕು. ಆ ಮೂಲಕ ಶಿವಮೊಗ್ಗದಲ್ಲಿ ಸವಿತಾ ಸಮಾಜದ ಶಿಕ್ಷಣ ಹಬ್ ನಿರ್ಮಾಣಕ್ಕೆ ಸಹಕಾರ ನೀಡಬೇಕೆಂದು ಶಾಸಕ ಕೆ.ಎಸ್.ಈಶ್ವರಪ್ಪ ಅವರನ್ನು ಶ್ರೀ ಸವಿತಾನಂದನಾಥ ಸ್ವಾಮೀಜಿ ಒತ್ತಾಯಿಸಿದರು.
ಸಹಕಾರ ನೀಡುವುದಾಗಿ ಈಶ್ವರಪ್ಪ ಭರವಸೆ
ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಸವಿತಾ ಸಮಾಜದ ಶ್ರೀಗಳ ಬೇಡಿಕೆಗಳ ಈಡೇರಿಕೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆಯಿತ್ತರು. ಶಿವಮೊಗ್ಗ ವಿದ್ಯಾನಗರದಲ್ಲಿರುವ ಸವಿತಾ ಸಮಾಜದ ನಿವೇಶನದಲ್ಲಿ ಸಮುದಾಯ ಭವನ, ಇಲ್ಲವೇ ಹಾಸ್ಟೆಲ್ ನಿರ್ಮಾಣ ಮಾಡುವುದಾದರೆ ಅಗತ್ಯ ಅನುದಾನವನ್ನು ಸರ್ಕಾರದಿಂದ ಕೊಡಿಸುವುದಾಗಿ ಶಾಸಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಶ್ರೀಗಳ ಬೇಡಿಕೆಯಂತೆ ಸರ್ಕಾರದಿಂದ ಐದು ಕೋಟಿ ರೂ. ಅನುದಾನ ಕೊಡಿಸಲು ಪ್ರಮಾಣಿಕ ಪ್ರಯತ್ನ ನಡೆಸಲಾಗುವುದು. ಸವಿತಾ ಸಮಾಜದಿಂದ ಭೂಮಿ ಖರೀದಿಸಿದರೆ ಉಳಿದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಅನುದಾನ ಪಡೆಯಬಹುದು. ಸ್ವಂತ ಭೂಮಿ ಇಲ್ಲದೇ ಇದ್ದರೆ ಅನುದಾನ ಬಿಡುಗಡೆ ಮಾಡುವುದು ಕಷ್ಟವಾಗುತ್ತದೆ ಎಂದರು.
ಸದಾನಂದ ಗೌಡರು ಸಿಎಂ ಆಗಿದ್ದ ಸಂದರ್ಭದಲ್ಲಿ ಹಿಂದುಳಿದ ಸಮಾಜದ ಅನೇಕ ಮಠಾಧೀಶರು ನನ್ನ ಬಳಿ ಬಂದು, ಧಾರ್ಮಿಕ ಕಾರ್ಯಕ್ಕೆ ನೆರವು ನೀಡುವಂತೆ ಕೋರಿದರು. ಆ ಸಂದರ್ಭದಲ್ಲಿ 39 ಮಠಗಳಿಗೆ 100 ಕೋಟಿ ರೂ. ಅನುದಾನ ನೀಡಲಾಗಿತ್ತು. ಹೀಗಾಗಿ ಅನೇಕ ಮಠಗಳು ಅಭಿವೃದ್ಧಿ ಹೊಂದಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿವೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು
ಸಮಾಜದಲ್ಲಿ ಹಿಂದುಳಿದವರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಶಿಕ್ಷಣಕ್ಕೆ ನೆರವು ನೀಡುವುದೇ ಸವಿತಾ ಶಿಕ್ಷಣ ಸೇವಾ ಟ್ರಸ್ಟ್‌ನ ಮುಖ್ಯ ಉದ್ಧೇಶ. ಇದರ ಮೊದಲ ಕಾರ್ಯವಾಗಿ ಎಸ್‌ಎಸ್‌ಎಲ್‌ಸಿಯಲ್ಲಿ ಅಧಿಕ ಅಂಕ ಪಡೆದ 35 ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 15 ಮಂದಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಜೆ.ಶಿವಪ್ರಸಾದ್ ತಿಳಿಸಿದರು.
ಹಿಂದುಳಿದವರು ಸಮಾಜದ ಮುಖ್ಯ ವಾಹಿನಿಗೆ ಬರಲು ಶಿಕ್ಷಣ, ಸಂಘಟನೆ, ಹೋರಾಟ ಅವಶ್ಯ ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಇಂದು ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ನಾವು ಅಭಿವೃದ್ಧಿಪಥದಲ್ಲಿ ಸಾಗಬೇಕಿದೆ ಎಂದರು.
ಕುಲಕಸುಬು ಬಿಡಬೇಡಿ
ಇಂದು ಬೇರೆ ಸಮುದಾಯದವರು ನಮ್ಮ ಕುಲಕಸುಬು ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಅತ್ಯಂತ ಕಡಿಮೆ ಹಣಕ್ಕೆ ನಮ್ಮವರು ಕ್ಷೌರಿಕ ವೃತ್ತಿ ಮಾಡುತ್ತಿದ್ದರು. ಆದರೆ ಇಂದು ಇದರಲ್ಲಿ ಆದಾಯವಿದೆ. ಹೀಗಾಗಿ ನಮ್ಮ ಮಕ್ಕಳು ಎಷ್ಟೇ ವಿದ್ಯಾವಂತರಾದರೂ ಕುಲಕಸುಬನ್ನು ಬಿಡಬಾರದು ಎಂದು ಭದ್ರಾವತಿಯ ಆಪ್ ಮುಖಂಡ ಆನಂದ್ ಹೇಳಿದರು.