ನ್ಯೂಸ್

ಬಂಡವಾಳಶಾಹಿಗಳಿಂದ ಸರ್ಕಾರಿ ಜಾಗ ಉಳಿಸಿ

ಅವಿನಾಶ್ ಜೈನಹಳ್ಳಿ

ಬಗರಹುಕುಂ ಸಾಗುವಳಿ ಹೆಸರಿನಲ್ಲಿ ಸರ್ಕಾರಿ ಜಮೀನು ಬಂಡವಾಳಶಾಹಿ ಪಾಲಾಗುವುದನ್ನು ತಪ್ಪಿಸಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರ್ ಶಾಂತಕುಮಾರ್ ಒತ್ತಾಯಿಸಿದರು.
ಕಂದಾಯ ಇಲಾಖೆ ದಾಖಲಾತಿಗಳನ್ನು ಗಣಕೀಕರಣ ಮಾಡುವ ವೇಳೆ ಬಹಳಷ್ಟು ಕಂದಾಯ ನೌಕರರು ಸಂಬಂಧಿಕರ ಹೆಸರಿನಲ್ಲಿ ಸರ್ಕಾರಿ ಭೂಮಿಗಳ ದಾಖಲಾತಿ ಆರ್‌ಟಿಸಿ ಸೃಷ್ಟಿಸಿದ್ದಾರೆ. ಹಾಲಿ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲಿಬ್ಬಿಸಲು ವಾಮ ಮಾರ್ಗ ಬಳಸಿದ್ದಾರೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ತನಿಖೆ ನಡೆಸಿ ನೈಜ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸುವ ಕಾರ್ಯ ಕೈಗೊತ್ತಿಕೊಳ್ಳಲಿ. ಈಗ ನೀಡಿರುವ ಆದೇಶದಂತೆ ಬಗರಹುಕುಂ ಸಾಗುವಳಿ ಪತ್ರ ನೀಡಿದರೆ ನಿಜವಾಗಿ ಸಾಗುವಳಿ ಮಾಡುತ್ತಿರುವ ಲಕ್ಷಾಂತರ ರೈತರಿಗೆ ದ್ರೋಹವಾಗುತ್ತದೆ. ಈ ಬಗ್ಗೆ 18 ರಂದು ಕಂದಾಯ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಲಾಗುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾವೇರಿ ನದಿ ಭಾಗದ ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಹಾಗೂ ಕೇರಳ ರಾಜ್ಯದ ರೈತ ಮುಖಂಡರ ಸಭೆ 22 ರಂದು ಮೈಸೂರಿನಲ್ಲಿ ಆಯೋಜಿಸಲಾಗಿದೆ. ಕಾವೇರಿ ನೀರು ಸದ್ಬಳಕೆ, ಮೇಕೆದಾಟು ಜಲಾಶಯ ನಿರ್ಮಾಣ, ಕಾವೇರಿ ನದಿ ಕಲ್ಮಶ ತಡೆಗಟ್ಟುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ಕಿಂಟಾಲ್ 2,280 ರೂ.ಗೆ ಹೆಚ್ಚುವರಿ ರಾಜ್ಯ ಸರ್ಕಾರ 500 ಪ್ರೋತ್ಸಾಹಧನ ನೀಡಿ ಖರೀದಿ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಎಪಿಎಂಸಿಗಳಲ್ಲಿ ರಾಜ್ಯಾದ್ಯಂತ ರೈತರ ಸುಲಿಗೆ ನಡೆಯುತ್ತಿದೆ. ಕಾನೂನು ಬಾಹಿರವಾಗಿ ಶೇ.10 ಕಮಿಷನ್ ವಸೂಲಿ ಮಾಡುತ್ತಿದ್ದಾರೆ ಈ ಬಗ್ಗೆ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಎಪಿಎಂಸಿ ರಾಜ್ಯಮಟ್ಟದ ನಿರ್ದೇಶಕರಿಗೆ ದೂರು ಸಲ್ಲಿಸಲಾಗಿದೆ. ನಿರ್ಲಕ್ಷೃ ಮಾಡಿದರೆ ಅನಿವಾರ್ಯವಾಗಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಅತ್ತಳ್ಳಿ ದೇವರಾಜ್, ಪಿ.ಸೋಮಶೇಖರ್ ನೀಲಕಂಠಪ್ಪ, ಕಿರಗಸೂರು ಶಂಕರ, ಬರಡನಪುರ ನಾಗರಾಜ್, ಉಡಿಗಾಲ ರೇವಣ್ಣ, ಪರಶಿವಮೂರ್ತಿ, ಕೆಂಡಗಣ್ಣ ಸ್ವಾಮಿ, ಕಮಲಮ್ಮ, ಕೋಟೆ ರಾಜೇಶ್, ರಂಗರಾಜು, ಅಂಬಳೆ ಮಂಜುನಾಥ್, ಪ್ರಸಾದ್ ನಾಯಕ್, ಮಹಾಲಿಂಗ ನಾಯಕ, ಕುಳ್ಳೇಗೌಡ ಇತರರಿದ್ದರು.