ಭದ್ರಾವತಿಯಲ್ಲಿ ಆಯೋಜಿಸಿದ್ದ ಕರ್ನಾಟಕ ಸ್ಟಾರ್ ಸಿಂಗರ್ ಸೀಸನ್-2 ಗ್ರಾೃಂಡ್ ಫಿನಾಲೆ ಕಾರ್ಯಕ್ರಮವನ್ನು ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್.ಕುಮಾರ್ ಉದ್ಘಾಟಿಸಿದರು. ಮಣಿ, ಲತಾ ಚಂದ್ರಶೇಖರ್, ಚನ್ನಪ್ಪ, ಬಿ.ಎ.ಮಂಜುನಾಥ್ ಇತರರಿದ್ದರು.  
ನ್ಯೂಸ್

ಸವದತ್ತಿಯ ಸಂತೋಷ್‌ಗೆ ಸ್ಟಾರ್ ಸಿಂಗರ್ ಪ್ರಶಸ್ತಿ

ಭದ್ರಾವತಿ: ಕರ್ನಾಟಕ ಸ್ಟಾರ್ ಸಿಂಗರ್-2025 ಸೀಸನ್-2 ರಾಜ್ಯಮಟ್ಟದ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆಯಲ್ಲಿ ಸವದತ್ತಿಯ ಸಂತೋಷ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಸಂಘದ ಐದನೇ ವಾರ್ಷಿಕೋತ್ಸವದ ಅಂಗವಾಗಿ ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘ ಮತ್ತು ಶ್ರೀ ಬಸವೇಶ್ವರ ಧರ್ಮಸಂಸ್ಥೆ ಆಶ್ರಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಭದ್ರಾವತಿಯಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.

ಬೆಳಗಾವಿ ಜಿಲ್ಲೆ ಸವದತ್ತಿಯ ಸಂತೋಷ್ ಪ್ರಥಮ ಬಹುಮಾನ 25 ಸಾವಿರ ರೂ., ಶಿವಮೊಗ್ಗದ ಸುಪ್ರಜಾ ಜಿ. ಕಾಮತ್ ದ್ವಿತೀಯ ಬಹುಮಾನ 15 ಸಾವಿರ ರೂ. ಹಾಗೂ ಭದ್ರಾವತಿಯ ಚಂದನಾ ತೃತೀಯ ಬಹುಮಾನ 10 ಸಾವಿರ ರೂ. ನಗದು ಬಹುಮಾನ ಪಡೆದರು.

ಫೈನಲ್ ಮತ್ತು ಗ್ರಾೃಂಡ್ ಫಿನಾಲೆಯಲ್ಲಿ ತೀರ್ಪುಗಾರರಾಗಿ ದಕ್ಷಿಣ ಭಾರತದ ಖ್ಯಾತ ಗಾಯಕರಾದ ಅಜಯ್ ವಾರಿಯರ್ ಮತ್ತು ಉಷಾ ಕೋಕಿಲ, ಸಹ ತೀರ್ಪುಗಾರರಾಗಿ ವಿದ್ವಾನ್ ಮಹೇಂದ್ರ ಗೋರೆ ಮತ್ತು ಚನ್ನಗಿರಿಯ ಶಶಿಕಿರಣ್ ಭಾಗವಹಿಸಿದ್ದರು.

ಹಿರಿಯ ಕಲಾವಿದರಾದ ಧನಪಾಲ್ ಸಿಂಗ್ ರಜಪೂತ್ ಅವರಿಗೆ ಜಯಶೀಲನ್ ಪ್ರಶಸ್ತಿ, ಅಂತಾರಾಷ್ಟ್ರೀಯ ಕೀಬೋರ್ಡ್ ವಾದಕ ದೀಪಕ್ ಜಯಶೀಲನ್ ಅವರಿಗೆ ಗೀತಾಂಜಲಿ ಶ್ರೀನಿವಾಸ್ ಪ್ರಶಸ್ತಿ, ಜೀವಮಾನ ಸಾಧನೆ ಮಾಡಿದ ಸಂಘದ ಗೌರವಾಧ್ಯಕ್ಷ, ಹಿರಿಯ ಕಲಾವಿದ ಬಿ.ಲೋಕನಾಥ್ ಅವರಿಗೆ ಡಾ. ಎಸ್.ಪಿ ಬಾಲಸುಬ್ರಹ್ಮಣ್ಯಂ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂಘದ 10 ಹಿರಿಯ ಕಲಾವಿದರು, ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಕಲಾವಿದರ ಮಕ್ಕಳನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮವನ್ನು ನಗರ ಕಾಂಗ್ರೆಸ್ ಅಧ್ಯಕ್ಷ ಎಸ್.ಕುಮಾರ್ ಉದ್ಘಾಟಿಸಿದರು. ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ ಬಿ.ಎ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಉಪಾಧ್ಯಕ್ಷ ಮಣಿ, ಸದಸ್ಯೆ ಲತಾ ಚಂದ್ರಶೇಖರ್, ಚನ್ನಪ್ಪ, ಬಗರ್‌ಹುಕುಂ ಸಮಿತಿ ತಾಲೂಕು ಅಧ್ಯಕ್ಷ ಎಸ್.ಮಣಿಶೇಖರ್, ಶಿವಕುಮಾರ್, ಭೋವಿ ಸಮಾಜದ ಅಧ್ಯಕ್ಷ ಶಿವು ಪಾಟೀಲ ಇತರರಿದ್ದರು.