‘ಬ್ಲೂ ಡ್ರಮ್‌ ಕೊಲೆ’ಪ್ರಕರಣದಲ್ಲಿ ಮರಣದಂಡನೆ ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ಗೆ ಅಪರಾಧಿಗಳ ಮೇಲ್ಮನವಿ  
ನ್ಯೂಸ್

ಸೌರಭ್ ‘ಬ್ಲೂ ಡ್ರಮ್’ ಕೊಲೆ ಕೇಸ್: ಗಲ್ಲು ಶಿಕ್ಷೆಯಿಂದ ಬಚಾವಾಗಲು ಹೈಕೋರ್ಟ್‌ ಮೊರೆ ಹೋದ ಅಪರಾಧಿಗಳು | Blue Drum Murder Case

ಉತ್ತರ ಪ್ರದೇಶದ ಮೀರತ್‌ನಲ್ಲಿ ಸಂಚಲನ ಸೃಷ್ಟಿಸಿದ್ದ ಸೌರಭ್ ರಜಪೂತ್ ‘ಬ್ಲೂ ಡ್ರಮ್’ ಕೊಲೆ ಪ್ರಕರಣದ ದೋಷಿಗಳು, ತಮಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಅಲಹಾಬಾದ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

‘ಬ್ಲೂ ಡ್ರಮ್‌’ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದ ಆರೋಪಿಗಳು

ಗಲ್ಲು ಶಿಕ್ಷೆ ತೀರ್ಪನ್ನು ರದ್ದು ಕೋರಿ ಅಲಹಾಬಾದ್ ಹೈಕೋರ್ಟ್‌ಗೆ ಮೇಲ್ಮನವಿ

ಅಕ್ಟೋಬರ್ 14 ರಂದು ಮರಣದಂಡನೆ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯ

ಮುಂದಿನ ವಾರ ಅಲಹಾಬಾದ್ ಹೈಕೋರ್ಟ್‌ನ ದ್ವಿಪೀಠದಲ್ಲಿ ಅರ್ಜಿ ವಿಚಾರಣೆ ಸಾಧ್ಯತೆMeerut

Meerut Murder Case: ದೇಶವ್ಯಾಪಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಉತ್ತರ ಪ್ರದೇಶದ ಮೀರತ್‌ನ ಸೌರಭ್ ರಜಪೂತ್ ‘ಬ್ಲೂ ಡ್ರಮ್’ ಹತ್ಯೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಮುಸ್ಕಾನ್ ರಸ್ತೋಗಿ ಮತ್ತು ಸಾಹಿಲ್ ಶುಕ್ಲಾ, ಆ ತೀರ್ಪನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಹೂಡಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ್ದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಸೆಪ್ಟೆಂಬರ್ 30 ರಂದು ಇಬ್ಬರನ್ನೂ ಅಪರಾಧಿಗಳೆಂದು ನಿರ್ಣಯಿಸಿ, ಅಕ್ಟೋಬರ್ 14 ರಂದು ಮರಣದಂಡನೆ ಹಾಗೂ ತಲಾ 50,000 ರೂ. ದಂಡ ವಿಧಿಸಿ ತೀರ್ಪು ನೀಡಿತ್ತು. ಇದೀಗ ಆ ಆದೇಶವನ್ನು ರದ್ದುಪಡಿಸಿ ತಮ್ಮನ್ನು ಖುಲಾಸೆಗೊಳಿಸುವಂತೆ ಕೋರಿ ಅಪರಾಧಿಗಳು ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದು, ಮುಂದಿನ ವಾರ ದ್ವಿಪೀಠದಲ್ಲಿ ಇದರ ವಿಚಾರಣೆ ನಡೆಯುವ ಸಾದ್ಯತೆಯಿದೆ.

ಏನಿದು 'ಬ್ಲೂ ಡ್ರಮ್' ಕೊಲೆ ಪ್ರಕರಣ?

ಮೀರತ್‌ನ ಬ್ರಹ್ಮಪುರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೌರಭ್ ರಜಪೂತ್ ಎಂಬುವವರನ್ನು ಕೊಲೆ ಮಾಡಲಾಗಿತ್ತು. ಸೌರಭ್ ಅವರ ಮೃತದೇಹವನ್ನು ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಇಟ್ಟು, ಅದಕ್ಕೆ ಸಿಮೆಂಟ್ ಮತ್ತು ಕಾಂಕ್ರೀಟ್ ತುಂಬಿ ಸಾಕ್ಷ್ಯ ನಾಶಪಡಿಸಲು ಯತ್ನಿಸಲಾಗಿತ್ತು. ಈ ಪೈಶಾಚಿಕ ಕೃತ್ಯ ಬಯಲಿಗೆ ಬಂದಾಗ ಸಾರ್ವಜನಿಕರಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅಪರಾಧಿಗಳು ಸಾಕ್ಷ್ಯ ನಾಶಪಡಿಸಿದ ಆರೋಪವೂ ಸಾಬೀತಾಗಿತ್ತು.

ಅಪರಾಧಿಗಳ ವಾದವೇನು?

ನ್ಯಾಯಾಲಯ ನೀಡಿದ ತೀರ್ಪು ಕಾನೂನುಬಾಹಿರ ಮತ್ತು ಅನಿಯಂತ್ರಿತವಾಗಿದೆ ಎಂದು ಅಪರಾಧಿಗಳು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ನಿಯಮಗಳ ಅಡಿಯಲ್ಲಿ ತಮಗೆ ನೀಡಲಾಗಿರುವ ಶಿಕ್ಷೆಯನ್ನು ರದ್ದುಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ರಾಜಧಾನಿ ಬೆಂಗಳೂರಿನಲ್ಲಿ ಮುಂದುವರಿದ ಜಿಟಿಜಿಟಿ ಮಳೆ: ಸಿಲಿಕಾನ್ ಸಿಟಿ ಫುಲ್​ ಕೂಲ್ ಕೂಲ್! | Bangalore Rain

ಅಲ್ಲದೆ, ಪ್ರಾಸಿಕ್ಯೂಷನ್ ಯಾವುದೇ ಆಧಾರವಿಲ್ಲದೆ ಕೇವಲ ಸಾಂದರ್ಭಿಕ ಸಾಕ್ಷ್ಯ ಹಾಗೂ ಊಹಾಪೋಹಗಳ ಮೇಲೆಯೇ ತೀರ್ಪು ನೀಡಿದೆ, ಆರೋಪಗಳನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು ಅಪರಾಧಿಗಳು ವಾದಿಸಿದ್ದಾರೆ. (ಏಜೆನ್ಸೀಸ್​)