ನ್ಯೂಸ್

ಕೇಂದ್ರ ಸಚಿವ ನಿತಿನ್​ ಗಡ್ಕರಿಯನ್ನು ಭೇಟಿಯಾದ ಸತೀಶ್​ ಜಾರಕಿಹೊಳಿ; ಹೆದ್ದಾರಿ ಯೋಜನೆಗಳ ಕುರಿತು ಸುದೀರ್ಘ ಚರ್ಚೆ

ನವದೆಹಲಿ: ಕರ್ನಾಟಕ ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಸಂಬಂಧಿಸಿದ 20 ಯೋಜನೆಗಳಿಗೆ ಅನುಮೋದನೆ ನೀಡುವಂತೆ ಕೇಂದ್ರ ರಸ್ತೆ ಹಾಗೂ ಭೂ ಸಾರಿಗೆ ಇಲಾಖೆ ಸಚಿವ ನಿತಿನ್​ ಗಡ್ಕರಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಕೇಂದ್ರ ಸಚಿವ ನಿತಿನ್​ ಗಡ್ಕರಿ ಭೇಟಿ ಬಳಿಕ ಮಾತನಾಡಿದ ಸತೀಶ್​ ಜಾರಕಿಹೊಳಿ ಕಳೆದ ಹತ್ತು ವರ್ಷಗಳಿಂದ ಬಾಕಿ ಉಳಿದಿದ್ದ ಯೋಜನೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ. ರಾಯಚೂರು ರಿಂಗ್​ ರಸ್ತೆ, ಬೆಂಗಳೂರು ರಿಂಗ್​ ರೋಡ್​, ಶಿರಾಡಿ ಘಾಟ್ ಸುರಂಗ ಮಾರ್ಗ ಸೇರಿದಂತೆ ಹಲವು ಯೋಜನೆಗಳಿಗೆ ಅನುಮೋದನೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ​

ಶಿರಾಡಿ ಘಾಟ್​ನಲ್ಲಿ ಸುರಂಗ ನಿರ್ಮಾಣಕ್ಕೆ ಅರಣ್ಯ ಇಲಾಖೆ ಒಪ್ಪಿಗೆ ಸೂಚಿಸಿಲ್ಲ. ಇದರ ಹೊರತ್ತಾಗಿಯೂ ಕೇಂದ್ರ ಸರ್ಕಾರ ಹೆಚ್ಚಿನ ಆಸಕ್ತಿ ವಹಿಸಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳು ಬಾಕಿ ಉಳಿದಿವೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಬಗ್ಗೆಯೂ ಮಾತನಾಡಲಾಗಿದೆ.

ರಾಯಚೂರು, ಗದಗ ಹಾಗೂ ಶಿವಮೊಗ್ಗದಲ್ಲಿ ರಿಂಗ್​ ರಸ್ತೆ, ಚಿಕ್ಕಬಳ್ಳಾಪುರ, ನವಲಗುಂದದಲ್ಲಿ ಬೈಪಾಸ್​ ರಸ್ತೆ ಬೆಳಗಾವಿ-ಗೋಕಾಕ್ ನಡುವಿನ​ ಎಲಿವೇಟೆಡ್​ ಕಾರಿಡಾರ್​ ನಿರ್ಮಾಣಕ್ಕೆ ಸಹ ಒಪ್ಪಿಗೆ ನೀಡುವಂತೆ ಕೇಳಲಾಗಿದೆ. ಈ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಜಿಎಸ್​ಟಿಯನ್ನು ಭರಿಸುವ ವಿಚಾರದಲ್ಲಿ ಸಹಕಾರ ನೀಡಲಿದ್ದೇವೆ ಎಂದು ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ ತಿಳಿಸಿದ್ದಾರೆ.

ಸಭೆಯಲ್ಲಿ ಸಂಸದರಾದ ಬಿ.ವೈ.ರಾಘವೇಂದ್ರ, ಜಿ.ಎಂ. ಸಿದ್ದೇಶ್ವರ, ಜಿ.ಎಸ್​. ಬಸವರಾಜು, ಉಮೇಶ್​​ ಜಾಧವ್​ ಸೇರಿದಂತೆ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.