ನ್ಯೂಸ್

ಇವಿಎಂ ಮಾದರಿ ರಾಜ್ಯ ​​​​ಸರ್ಕಾರದ ಸರ್ವರ್​ ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ; ಸತೀಶ್ ಜಾರಕಿಹೊಳಿ

ಬೆಳಗಾವಿ: ಕೇಂದ್ರ ಸರ್ಕಾರ ನಮ್ಮ ಸರ್ವರ್ ಹಾಗೂ ಸಿಸ್ಟಮ್​ಗಳನ್ನು ಇವಿಎಂ ಮಾದರಿಯಲ್ಲಿ ಹ್ಯಾಕ್ ಮಾಡಿದೆ. ಇದರಿಂದ ಗ್ಯಾರಂಟಿ ಯೋಜನೆ ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿದೆ. ಆನ್​ಲೈನ್​ನಲ್ಲಿ ಸಮಸ್ಯೆ ಹೆಚ್ಚಾದರೆ, ನೇರವಾಗಿ(ಆಫ್​ಲೈನ್) ಅರ್ಜಿ ಸ್ವೀಕಾರಿಸುತ್ತೇವೆ. ಇದರಿಂದ ಒಂದು ತಿಂಗಳು ತಡ ಆಗಬಹುದು, ಅದಕ್ಕಿಂತ ಹೆಚ್ಚೇನು ಆಗುವುದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

'ಸರಿಯಾದ ಯೋಜನೆ ರೂಪಿಸದೆ ಗ್ಯಾರಂಟಿ ಯೋಜನೆ ಜಾರಿಗೆ ತರುತ್ತಿದ್ದಾರೆ' ಎಂಬ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಕ್ಕೆ ಪ್ರತಿಕ್ರಿಯಿಸಿ ಸತೀಶ್ ಜಾರಿಕಿಹೊಳಿ ಮಾತನಾಡುತ್ತಾ, 'ಇವಿಎಂ ಮಾದರಿಯಲ್ಲಿ ಕೇಂದ್ರ ಸರ್ಕಾರ ಹ್ಯಾಕ್ ಮಾಡಿ ಸರ್ವರ್ ಡೌನ್ ಆಗುವಂತೆ ಮಾಡಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಇಲಾಖೆಯ ಸರ್ವರ್​ ಕೂಡ ಹ್ಯಾಕ್ ಆಗಿದೆ. ಇದನ್ನು ಸರಿಪಡಿಸಲು ಪ್ರಯತ್ನ ಮಾಡುತ್ತಿದ್ದೇವೆ. ಎಷ್ಟೇ ಹ್ಯಾಕ್ ಮಾಡಿದರೂ ನಮ್ಮ ಯೋಜನೆ ಜಾರಿಗೆ ತರುತ್ತೇವೆ'‌ ಎಂದರು. ಈ ಮೂಲಕ ಆನ್​ಲೈನ್ ಸರ್ವರ್ ಸಮಸ್ಯೆಗೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿದರು.

ಅರ್ಜಿ ಸಲ್ಲಿಕೆಗೆ ಸರ್ವರ್ ಡೌನ್; ಸೈಬರ್ ಕಳ್ಳರ ಬಗ್ಗೆ ಎಚ್ಚರ ಅಗತ್ಯ

ನಾ ಮುಂದು, ತಾ ಮುಂದು ಎನ್ನುತ್ತಾ ಗೃಹ ಜ್ಯೋತಿ ಯೋಜನೆಗೆ ಜನರು ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಈ ನಡುವೆ ಏಕಕಾಲದಲ್ಲಿ ಸುಮಾರು 5 ಕೋಟಿಗೂ ಅಧಿಕ ಜನರು ಅರ್ಜಿ ಸಲ್ಲಿಕೆ ಮಾಡಿದರೆ ಸೇವಾ ಸಿಂಧು ಪೋರ್ಟಲ್​ಗೆ ತಡೆಯುವ ಸಾಮರ್ಥ್ಯ ಇದೆಯಾ? ಎಂಬ ಪ್ರಶ್ನೆ ಉದ್ಭವಿಸಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಕಳ್ಳರು ಅಮಾಯಕ ಜನರನ್ನು ವಂಚಿಸಲು ಮುಂದಾಗಿದ್ದಾರೆ ಎಂದು ಸೈಬರ್ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಸೇವಾ ಸಿಂಧು ಪೋರ್ಟಲ್​ನಲ್ಲಿ ಎಲ್ಲರೂ ಏಕಕಾಲದಲ್ಲಿ ಲಾಗ್​ ಇನ್​ ಆಗುತ್ತಿರುವುದರಿಂದ ಸರ್ವರ್ ಸಮಸ್ಯೆ ಕಾಣುತ್ತಿದೆ. ಸರ್ವರ್ ಲೋಡ್ ಹೆಚ್ಚು ಮಾಡುವ ಪ್ರಯತ್ನ ಸರ್ಕಾರ ಮಾಡಬಹುದು. ಆದರೆ ಕೆಲವೇ ತಿಂಗಳಿಗಾಗಿ ಬ್ಯಾಂಡ್ ವಿಡ್ತ್ ಹೆಚ್ಚು ಮಾಡುವುದು ಕಷ್ಟ. ಇದೇ ಸಂದರ್ಭವನ್ನು ಬಳಸಿಕೊಂಡು ಜನರನ್ನು ಮೋಸದ ಬಲೆಗೆ ಬೀಳಿಸಲು ಸೈಬರ್ ವಂಚಕರು ಕಾಯುತ್ತಿದ್ದಾರೆ. ಹೀಗಾಗಿ ಎಲ್ಲರೂ ಎಚ್ಚರಿಕೆಯಿಂದ ಇರಬೇಕೆಂದು ಸೈಬರ್ ಕ್ರೈಂ ತಜ್ಞರು ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಸೈಬರ್ ಕ್ರೈಂ ತಪ್ಪಿಸುವುದು ಬಹಳ ಮುಖ್ಯವಾಗುತ್ತದೆ. ಮಾಹಿತಿ ಹಾಗೂ ದತ್ತಾಂಶ ಸೋರಿಕೆಯಾಗದಂತೆ ತಡೆಯಬೇಕು. ಮುಖ್ಯವಾಗಿ ನೋಂದಣಿ ಬಳಿಕ ಜನರಿಗೆ ಒಟಿಪಿ ಸಂಖ್ಯೆಯನ್ನು ಎಲ್ಲಿಯೂ ಹಂಚಿಕೊಳ್ಳಬಾರದು ಎಂಬ ಬಗ್ಗೆ ಅರಿವು ಮೂಡಿಸಬೇಕು ಎಂದು ಸೈಬರ್ ತಜ್ಞರು ಸಲಹೆ ನೀಡಿದ್ದಾರೆ.