ಅಯೋಗ್ಯ 2 
ನ್ಯೂಸ್

Ayogya 2- ನಾಯಕನ ಇಂಟ್ರೊ ಹಾಡಿನಲ್ಲಿ ಸತೀಶ್​ ಭರ್ಜರಿ ಸ್ಟೆಪ್ಸ್​

Ayogya 2 -
"ಅಯೋಗ್ಯ' ಯಶಸ್ಸಿನ ಬಳಿಕ ಸತೀಶ್​ ನೀನಾಸಂ, ರಚಿತಾ ರಾಮ್​ ಮತ್ತು ನಿರ್ದೇಶಕ ಮಹೇಶ್​ ಮತ್ತೆ ಒಂದಾಗಿದ್ದು, ಸದ್ಯ "ಅಯೋಗ್ಯ 2' ಮೂಲಕ ಸದ್ದು ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಚಿತ್ರದ ಮೊದಲ "ಮುದ್ದು ಮುದ್ದು ಪುಟ್ಟಲಕ್ಷ್ಮೀ' ಸಾಂಗ್​ ಬಿಡುಗಡೆಯಾಗಿದ್ದು, ಯೂಟ್ಯೂಬ್​ನಲ್ಲಿ 50 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದು ವೈರಲ್​ ಆಗಿದೆ. ಬುಧವಾರ (ಜು. 8) ಆ ಯಶಸ್ಸನ್ನು ಕೇಕ್​ ಕಟ್​ ಮಾಡುವುದರೊಂದಿಗೆ ಆಚರಿಸಿದೆ ಚಿತ್ರತಂಡ, ಅದರ ಜತೆಗೆ ನಾಯಕ ಸತೀಶ್​ ನೀನಾಸಂರನ್ನು ಪರಿಚಯಿಸುವ "ಅಣ್ಣ ಬಂದ್ರೆ' ಎಂಬ ಮಾಸ್​ ಪೆಪ್ಪಿ ಸಾಂಗ್​ ರಿಲೀಸ್​ ಮಾಡಿದೆ. ಅರ್ಜುನ್​ ಜನ್ಯ ಸಂಗೀತ, "ಭರ್ಜರಿ' ಚೇತನ್​ ಕುಮಾರ್​ ಸಾಹಿತ್ಯ ಮತ್ತು "ಟಗರು ಬಂತು ಟಗರು' ಖ್ಯಾತಿಯ ಅಂತೋಣಿ ದಾಸನ್​ ಧ್ವನಿಯಲ್ಲಿ ಮೂಡಿಬಂದಿದೆ. ಮಾಸ್ಟರ್​ ಸಂತೋಷ್​ ನೃತ್ಯ ನಿರ್ದೇಶನದಲ್ಲಿ ನೂರಾರು ಡಾನ್ಸರ್​ಗಳ ನಡುವೆ ಸತೀಶ್​ ಕೂಡ ಭರ್ಜರಿಯಾಗೇ ಸ್ಟೆಪ್ಸ್​ ಹಾಕಿದ್ದಾರೆ. ನಿರ್ದೇಶಕ ಮಹೇಶ್​, ""ಅಯೋಗ್ಯ' ಚಿತ್ರದ ಆಡಿಯೋ ಹಕ್ಕುಗಳು 9 ಲಕ್ಷಕ್ಕೆ ಬಿಕರಿಯಾಗಿದ್ದವು. ಇದೀಗ, "ಅಯೋಗ್ಯ 2' ಚಿತ್ರದ ಹಾಡುಗಳನ್ನು ನೋಡಿ, ಕೇಳಿ ಆನಂದ್​ ಆಡಿಯೋದವರು ಒಳ್ಳೆ ಮೊತ್ತ ಅರ್ಥಾತ್​ ₹2 ಕೋಟಿಗೆ ಖರೀದಿಸಿದ್ದಾರೆ. "ಅಯೋಗ್ಯ' ಕಥೆ ಎಲ್ಲಿಗೆ ಮುಗಿದಿತ್ತೋ, ಈ ಸೀಕ್ವೆಲ್​ ಅದರ ಮರುದಿನದಿಂದಲೇ ಪ್ರಾರಂಭವಾಗುತ್ತದೆ. ಹಳೆಯ ಪಾತ್ರಗಳ ಜತೆಗೆ ಕೆಲ ಹೊಸ ಪಾತ್ರಗಳೂ ಬರುತ್ತವೆ. "ಅಯೋಗ್ಯ' ಕ್ಲೆಮ್ಯಾಕ್ಸ್​ನಲ್ಲಿ ಗ್ರಾಮ ಪಂಚಾಯ್ತಿ ಸದಸ್ಯನಾಗುವ ಸಿದ್ದೇಗೌಡ, ಮುಂದೆ ಏನೆಲ್ಲ ಸವಾಲುಗಳನ್ನು ಎದುರಿಸುತ್ತಾನೆ ಎಂಬುದೇ ಈ ಸೀಕ್ವೆಲ್​ ಒನ್​ಲೈನ್​' ಎಂದು ಮಾಹಿತಿ ನೀಡುತ್ತಾರೆ. ಸತೀಶ್​, ರಚಿತಾ ಜತೆ ರವಿಶಂಕರ್​, ಸಾಧು ಕೋಕಿಲ,ತಬಲ ನಾಣಿ, ಸುಂದರರಾಹ್​, ಶಿವರಾಜ್​ ಕೆ.ಆರ್​. ಪೇಟೆ, ಅರುಣ ಬಾಲರಾಜ್​, ಗಿರಿ ಶಿವಣ್ಣ, ಮಂಜು ಪಾವಗಡ ಪ್ರಮುಖ ತಾರಾಗಣದಲ್ಲಿದ್ದಾರೆ. ಮಾಸ್​ ಚಿತ್ರಗಳಿಗೆ ಹೆಸರಾದ ಮಾಸ್ತಿ ಉಪ್ಪಾರಳ್ಳಿ ಸಂಭಾಷಣೆ, "ಶಾಖಾಹಾರಿ' ಖ್ಯಾತಿಯ ವಿಶ್ವಜಿತ್​ ರಾವ್​ ಛಾಯಾಗ್ರಹಣ, ಸುರೇಶ್​ ಆಮುರ್ಗಂ ಸಂಕಲನ ಮತ್ತು ಅರ್ಜುನ್​ ರಾಜ್​ ಸಾಹಸದಲ್ಲಿ "ಅಯೋಗ್ಯ 2' ಮೂಡಿಬಂದಿದ್ದು, ಇದೇ ಆ.7ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

ಸತೀಶ್​ ಪುತ್ರಿ ಡೆಬ್ಯೂ

"ಅಣ್ಣ ಬಂದ್ರೆ' ಹಾಡಿನ ಮೂಲಕ ಸತೀಶ್​ ನೀನಾಸಂ ಪುತ್ರಿ ಮನಸ್ವಿತಾ ಕೂಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಹಾಡಿನಲ್ಲಿ ಕೆಲ ಕಾಲ ಅಪ್ಪನಂತೆಯೇ ಕಾಸ್ಟ್ಯೂಮ್​ ಧರಿಸಿ, ಅವರ ಜತೆಗೆ ಕುಣಿದು ಕುಪ್ಪಳಿಸಿದ್ದಾರೆ. ಈ ಹಾಡಿನ ಮೂಲಕ ಇದೇ ಮೊದಲ ಬಾರಿಗೆ ಬಿಗ್​ ಸ್ಕ್ರೀನ್​ಗೆ ಮನಸ್ವಿತಾ ಬಿಗ್​ ಸ್ಕ್ರೀನ್​ಗೆ ಎಂಟ್ರಿ ಕೊಟ್ಟಿರುವುದು ವಿಶೇಷ.