ಶಿವಮೊಗ್ಗ: ವೈಷ್ಣೋದೇವಿ ಯಾತ್ರಾರ್ಥಿಗಳ ಮೇಲೆ ಉಗ್ರಗಾಮಿಗಳು ನಡೆಸಿದ ಪೈಶಾಚಿಕ ಕೃತ್ಯ ಅಮಾನವೀಯ. ಉಗ್ರಗಾಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಮುಖಂಡರು ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಜಮ್ಮು-ಕಾಶ್ಮೀರ ಕತ್ರಾದಿಂದ ಶಿವಖೋಡಿಗೆ ತೆರಳುತ್ತಿದ್ದ ಹಿಂದು ಭಕ್ತರಿದ್ದ ವೈಷ್ಣೋದೇವಿ ಯಾತ್ರಾರ್ಥಿಗಳ ಬಸ್‌ನ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. 10 ಅಮಾಯಕ ಹಿಂದು ಯಾತ್ರಿಕರು ಮರಣ ಹೊಂದಿದ್ದಾರೆ. 40ಕ್ಕೂ ಹೆಚ್ಚು ಯಾತ್ರಿಕರು ತೀವ್ರ ಗಾಯಗೊಂಡಿದ್ದಾರೆ. ಕೃತ್ಯದಿಂದ ದೇಶದ ಜನ ಅಘಾತಗೊಂಡಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.
370ನೇ ವಿಧಿ ರದ್ದುಪಡಿಸಿದ ನಂತರ ಜಮ್ಮು-ಕಾಶ್ಮೀರ ಪ್ರವಾಸಿಗರ ತಾಣವಾಗಿದೆ. ಆದರೆ ಈಗ ನಡೆದಿರುವ ಉಗ್ರರ ಅಟ್ಟಹಾಸ ಗಮನಿಸಿದರೆ ಆ ಭಾಗವಿನ್ನೂ ಭಯೋತ್ಪಾದನೆಯಿಂದ ಮುಕ್ತವಾಗಿಲ್ಲ ಎಂಬ ಭಯ ಆವರಿಸಿದೆ. ಈ ಕೃತ್ಯದಲ್ಲಿ ಪಾಕಿಸ್ತಾನದ ಹಸ್ತಕ್ಷೇಪ ಸ್ಪಷ್ಟವಾಗಿದೆ. ಭಾರತದ ಪ್ರಧಾನಿ ಪ್ರಮಾಣ ವಚನದ ಸ್ವೀಕರಿಸುವ ಸಮಯದಲ್ಲಿ ಇಂತಹ ಹೇಯ ಕೃತ್ಯ ಮಾಡಿರುವ ಭಯೋತ್ಪಾದಕರು ದೇಶದ ಸ್ವಾಯತ್ತತ್ತೆಗೆ ಸವಾಲೊಡ್ಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉಗ್ರ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಹಿಂದುಗಳ ರಕ್ಷಣೆ ಮಾಡಬೇಕು. ವಿಧ್ವಂಸಕ ಕೃತ್ಯಗಳಿಗೆ ಕಾರಣವಾದ ಉಗ್ರ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿಎಚ್‌ಪಿ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ, ಜಿಲ್ಲಾ ಕಾರ್ಯದರ್ಶಿ ನಾರಾಯಣ್ ವರ್ಣೇಕರ್, ಬಜರಂಗದಳ ಸಂಯೋಜಕ ವಡಿವೇಲು ರಾಘವನ್ ಮತ್ತಿತರರು ಇದ್ದರು.