ನ್ಯೂಸ್

ಶಬರಿಮಲೆಯಲ್ಲಿ ಸೌಲಭ್ಯಕಲ್ಪಿಸದೆ ಯಾತ್ರೆ ಬೇಡ

ವಿಜಯವಾಣಿ ಸುದ್ದಿಜಾಲ ಮಂಗಳೂರು
ಕರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಶಬರಿಮಲೆ ಯಾತ್ರೆಯನ್ನು ಮುಂದೂಡಬೇಕು, ಅಲ್ಲಿ ಮೂಲಸೌಕರ್ಯ ಕೊರತೆಯೊಂದಿಗೆ ಯಾತ್ರೆ ಪ್ರಾರಂಭಿಸಿದ್ದು ಸರಿಯಾದ ಕ್ರಮವಲ್ಲ ಎಂದು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ(SASS) ದ.ಕ ಜಿಲ್ಲಾ ಶಾಖೆ ಒತ್ತಾಯಿಸಿದೆ.
ಸಮಾಜದ ಅಧ್ಯಕ್ಷ ಗಣೇಶ್‌ ಕೆ.ಪೊದುವಾಳ್‌ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ಶಬರಿಮಲೆ ಯಾತ್ರೆ ವಿಚಾರವಾಗಿ ಕೇರಳ ಸರ್ಕಾರವು ಪಂದಳ ರಾಜವಂಶ, ಅರ್ಚಕರು ಮತ್ತು ಅಲ್ಲಿನ ಹಿಂದು ಮುಖಂಡರ ಜೊತೆ ಚರ್ಚಿಸದೆ ಯಾತ್ರೆ ಪ್ರಾರಂಭಿಸಿದೆ, ಆ ಮೂಲಕ ಶಬರಿಮಲೆಯ ಸಂಪ್ರದಾಯವನ್ನು ಗಾಳಿಗೆ ತೂರಿದೆ ಎಂದು ಆರೋಪಿಸಿದರು.
ಶಬರಿಮಲೆಯ ಸಂಪ್ರದಾಯವಾದ ಪಂಪಾ ನದಿಯಲ್ಲಿ ಸ್ನಾನ ಮಾಡುವುದು ಹಾಗೂ ಹರಕೆ ರೂಪದಲ್ಲಿ ತುಪ್ಪದ ಕಾಯಿಯ ಅಭಿಷೇಕವನ್ನೂ ನಿಷೇಧಿಸಿದೆ. ಪಂಪಾ ನದಿಯಲ್ಲಿ ಮೀಯುವ ಬದಲು ನೀಲಕ್ಕಲ್‌ನಲ್ಲಿ ಶವರ್‌ ಸೌಲಭ್ಯ ನೀಡಲಾಗಿದೆ, ಆದರೆ ಪಂಪೆಯಲ್ಲಿ ಸ್ನಾನ ಮಾಡಿದರಷ್ಟೇ ಭಕ್ತಾದಿಗಳಿಗೆ ಅನುಕೂಲ. ಕೇವಲ ಆದಾಯದ ಉದ್ದೇಶವಿಟ್ಟುಕೊಂಡು ಸರ್ಕಾರ ಈ ಯಾತ್ರೆ ಪ್ರಾರಂಭಿಸಿದೆಯೇ ಹೊರತು ಅನುಕೂಲವನ್ನು ಕಲ್ಪಿಸಿಲ್ಲ ಎಂದು ಇತ್ತೀಚೆಗಷ್ಟೇ ಯಾತ್ರೆ ತೆರಳಿ ಬಂದಿರುವ ಉಳ್ಳಾಲದ ಅಯ್ಯಪ್ಪ ಭಕ್ತ ಸುಧೀರ್‌ ಬಂಗೇರ ತಿಳಿಸಿದರು.
ಶಬರಿಮಲೆ ಯಾತ್ರೆ ಸದ್ಯ ಸೂಕ್ತವಲ್ಲ, ಹಾಗಾಗಿ ಅದನ್ನು ಸ್ಥಗಿತಗೊಳಿಸಬೇಕು ಎಂದು ಎಸ್‌ಎಎಸ್‌ಎಸ್‌ ವತಿಯಿಂದ ಕೇರಳದ ಗವರ್ನರ್‌ರವರಿಗೆ ಶೀಘ್ರ ಮನವಿ ಸಲ್ಲಿಸಲಾಗುವುದು ಎಂದು ಪೊದುವಾಳ್‌ ತಿಳಿಸಿದರು.
ಕಾರ್ಯದರ್ಶಿ ಶರತ್‌ ಕೊಂಬಾರ್‌, ಗೌರವಾಧ್ಯಕ್ಷ ವಿಶ್ವನಾಥ್‌ ಕಾಯರ್‌ಪಲ್ಕೆ, ಕಾತ್ಯಾಯಿನಿ, ಮೋಹನ್‌ ಬರ್ಕೆ ಹಾಜರಿದ್ದರು.