ಡೈಮಂಡ್ ಲೀಗ್ನಲ್ಲಿ ಸರ್ವೇಶ್ ಕುಶಾರೆ ಇತಿಹಾಸ; ನೀರಜ್ ಚೋಪ್ರಾ, ವಿಕಾಸ್ ಗೌಡ ಸಾಲಿಗೆ ಸೇರ್ಪಡೆ!
ಮೊನಾಕೊ: ಮಹಾರಾಷ್ಟ್ರದ ಸರ್ವೇಶ್ ಕುಶಾರೆ ಡೈಮಂಡ್ ಲೀಗ್ನಲ್ಲಿ ಪೋಡಿಯಂ ಫಿನಿಶ್ ಕಂಡ ಮೊದಲ ಭಾರತೀಯ ಹೈಜಂಪರ್ ಎನಿಸಿದ್ದಾರೆ. ಅವರು ಪದಾರ್ಪಣೆಯ ಡೈಮಂಡ್ ಲೀಗ್ನಲ್ಲೇ (Diamond League) ಈ ಸಾಧನೆ ಮಾಡಿದ್ದಾರೆ. ಜತೆಗೆ ಡೈಮಂಡ್ ಲೀಗ್ನಲ್ಲಿ ಅಗ್ರ 3ರೊಳಗೆ ಸ್ಥಾನ ಪಡೆದ 4ನೇ ಭಾರತೀಯರೆನಿಸಿದ್ದಾರೆ.
31 ವರ್ಷದ ಸರ್ವೇಶ್ ಶುಕ್ರವಾರ ನಡೆದ ಮೊನಾಕೊ ಡೈಮಂಡ್ ಲೀಗ್ನಲ್ಲಿ 2.26 ಮೀ. ಎತ್ತರ ಜಿಗಿಯುವ ಮೂಲಕ 3ನೇ ಸ್ಥಾನ ಪಡೆದರು. ಅವರು 2 ವಾರಗಳ ಹಿಂದಷ್ಟೇ ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಅಂತರ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ 2.31 ಮೀ.ಗಳ ರಾಷ್ಟ್ರೀಯ ದಾಖಲೆ ಬರೆದಿದ್ದರು.
ಜಾವೆಲಿನ್ ತಾರೆ ನೀರಜ್ ಚೋಪ್ರಾ (2022ರಿಂದ 13 ಬಾರಿ), ಲಾಂಗ್ಜಂಪ್ ಪಟು ಮುರಳಿ ಶ್ರೀಶಂಕರ್ (2023) ಮತ್ತು ಮಾಜಿ ಡಿಸ್ಕಸ್ ಥ್ರೋ ಪಟು ವಿಕಾಸ್ ಗೌಡ (2015ರಿಂದ 2 ಬಾರಿ) ಡೈಮಂಡ್ ಲೀಗ್ನಲ್ಲಿ ಪೋಡಿಯಂ ಫಿನಿಷ್ ಕಂಡಿದ್ದ ಹಿಂದಿನ ಭಾರತೀಯರು.