ಕರೊನಾ ಹಿನ್ನೆಲೆಯಲ್ಲಿ ಈ ವರ್ಷ ಸಿನಿಮಾ ಕೆಲಸಗಳಿಗೆ ಬ್ರೇಕ್ ಬಿದ್ದಿದೆ. ಶೂಟಿಂಗ್ ಶುರುವಾದರೂ, ಮೊದಲಿನ ಆ ಖುಷಿ ಇಲ್ಲ. ಇನ್ನು ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಯಂತೂ ಗೊತ್ತಿಲ್ಲದ ವಿಚಾರ. ಓಟಿಟಿ ಒಂದಷ್ಟು ಮನರಂಜನೆ ನೀಡಿದೆ ಎಂಬುದನ್ನು ಬಿಟ್ಟರೆ, ಸ್ಟಾರ್ ನಟರಿಂದ ಯಾವುದೇ ಮನರಂಜನೆ ಸಿಕ್ಕಿಲ್ಲ. ಆದರೂ, ಅಭಿಮಾನಿಗಳಿಗೆ ನಿರಾಸೆಯಾಗಬಾರದೆಂಬ ದೃಷ್ಟಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಹೊತ್ತು ಕಾಲ ಕಳೆಯುತ್ತಿದ್ದಾರೆ ಸ್ಟಾರ್ ನಟರು. ಒಂದಾದ ಮೇಲೊಂದರಂತೆ ಪೋಸ್ಟ್ ಹಾಕುತ್ತ ಅಭಿಮಾನಿಗಳ ಸಂಪರ್ಕದಲ್ಲಿದ್ದಾರೆ. ಇದೀಗ ಟಾಲಿವುಡ್ ನಟ ಮಹೇಶ್ ಬಾಬು ಜನ್ಮದಿನದ ನಿಮಿತ್ತ ಅಭಿಮಾನಿಗಳಿಗೆ ಉಡುಗೊರೆಯೊಂದನ್ನು ನೀಡಿದ್ದಾರೆ.
ಹೌದು, ಮಹೇಶ್ ಬಾಬು ಜನ್ಮದಿನದ ನಿಮಿತ್ತ ಪರಸುರಾಮ್ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಸರಕಾರು ವಾರು ಪಾಟ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಶುಭಕೋರಿದೆ. ಪೋಸ್ಟರ್ ಮೂಲಕವೇ ಕುತೂಹಲ ಮೂಡಿಸಿದ್ದ ಈ ಸಿನಿಮಾ, ಇದೀಗ ಮೋಷನ್ ಪೋಸ್ಟರ್ ಮೂಲಕ ಆ ಕುತೂಹಲವನ್ನು ದುಪಟ್ಟು ಮಾಡಿಕೊಂಡಿದೆ. ಇತ್ತ ಜನ್ಮದಿನದ ನಿಮಿತ್ತ ಮನೆ ಬಳಿಯೇ ಸಸಿ ನೆಡುವ ಮೂಲಕ, ಪರಿಸರ ಕಾಳಜಿಯ ಸಂದೇಶವನ್ನೂ ರವಾನಿಸಿದ್ದಾರೆ. ಗ್ರೀನ್ ಇಂಡಿಯಾ ಚಾಲೆಂಜ್ ಸ್ವೀಕರಿಸಿ, ಜೂ.ಎನ್ಟಿಆರ್, ದಳಪತಿ ವಿಜಯ್, ಶ್ರುತಿ ಹಾಸನ್ ಅವರಿಗೆ ಚಾಲೆಂಜ್ ಹಾಕಿದ್ದಾರೆ.
ಈಗಾಗಲೇ ಒಂದಷ್ಟು ಭಾಗದ ಶೂಟಿಂಗ್ ಸಹ ಮುಗಿಸಿಕೊಂಡಿರುವ ಚಿತ್ರತಂಡ, ಚಿತ್ರೀಕರಣಕ್ಕೆ ಮೊದಲಿನ ವಾತಾವರಣ ನಿರ್ಮಾಣವಾಗುವವರೆಗೂ ಶೂಟಿಂಗ್ನತ್ತ ಮುಖ ಮಾಡುವುದಿಲ್ಲವಂತೆ. ಕೆಲ ಮೂಲಗಳ ಪ್ರಕಾರ ಸೆಪ್ಟಂಬರ್ ಅಥವಾ ಅಕ್ಟೋಬರ್ನಲ್ಲಿ ಶೂಟಿಂಗ್ ಆರಂಭವಾಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.
ಇನ್ನು ಜನ್ಮದಿನದ ಪ್ರಯುಕ್ತ ಮನೆ ಬಳಿ ಯಾರೂ ಬರಬೇಡಿ ಎಂದು ಕೆಲ ದಿನಗಳ ಹಿಂದಷ್ಟೇ ಮಹೇಶ್ ಬಾಬು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ‘ನನ್ನೆನ್ನ ಅಭಿಮಾನಿಗಳಿಗೆ ಒಂದು ಕೋರಿಕೆ. ನಿಮ್ಮ ಆಶೀರ್ವಾದ ಸಿಕ್ಕಿರುವುದಕ್ಕೆ ನಾನು ಧನ್ಯ. ಜಗತ್ತಿನಾದ್ಯಂತ ಕರೊನಾ ಹಾವಳಿ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಅದ್ಧೂರಿ ಜನ್ಮದಿನ ಆಚರಿಸಿಕೊಳ್ಳುವುದು ಸರಿಯಲ್ಲ. ನಮ್ಮ ನಮ್ಮ ಜಾಗೃತೆಯೇ ಈ ಹೊತ್ತಲ್ಲಿ ತುಂಬ ಮಹತ್ವದ್ದು. ದಯಮಾಡಿ ನನ್ನ ಅಭಿಮಾನಿಗಳಿಗೆ ನಾನು ಕೇಳಿಕೊಳ್ಳುವುದೆನೆಂದರೆ, ನನ್ನ ಜನ್ಮದಿನದಂದು ಗುಂಪುಗೂಡಬೇಡಿ. ಆಚರಣೆ ಮಾಡಬೇಡಿ. ನಿಮ್ಮ ಹುಷಾರಲ್ಲಿ ನೀವಿರಿ ಎಂದಿದ್ದರು. (ಏಜೆನ್ಸೀಸ್)