ಸಾಗರ: ಶಾಂಕರ ತತ್ವಗಳು ಸದಾ ನಮ್ಮನ್ನು ಸನ್ಮಾರ್ಗದಲ್ಲಿ ಸಾಗಿಸುತ್ತದೆ. ಶಂಕರಾಚಾರ್ಯರ ಸ್ತೋತ್ರ ಸಾಹಿತ್ಯ ಹೆಚ್ಚು ಪರಿಣಾಮಕಾರಿ. ಉಪನಿಷತ್, ಬ್ರಹ್ಮಸೂತ್ರ, ಭಗವದ್ಗೀತೆಯನ್ನು ಶಾಂಕರರು ತಮ್ಮ ಕೃತಿಗಳಲ್ಲಿ ಮೂಡಿಸಿದ್ದಾರೆ ಎಂದು ಶಂಕರ ಕೃತಿ ಲೇಖಕ ಡಾ. ಗಣಪತಿ ಭಟ್ ಹೇಳಿದರು.
ನಗರದ ಬ್ರಾಸಂ ಸಭಾಭವನದಲ್ಲಿ ಭಾನುವಾರ ರಾಷ್ಟ್ರೋತ್ಥಾನ ಬಳಗದಿಂದ ಹಮ್ಮಿಕೊಂಡಿದ್ದ ಶಂಕರ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಂಕರ ಕೃತಿಯಲ್ಲಿ 74 ಶಾಸಗಳು, 1500ಕ್ಕೂ ಹೆಚ್ಚು ಶ್ಲೋಕಗಳಿವೆ. ಶಂಕರಾಚಾರ್ಯರ ತತ್ವಗಳು, ಶ್ಲೋಕಗಳನ್ನು ನಮ್ಮ ಮಾತೃಭಾಷೆಯಲ್ಲಿ ಓದಬೇಕು ಎನ್ನುವವರಿಗೆ ಹೆಚ್ಚು ಅನುಕೂಲವಾಗಿದೆ. ಸನಾನತ ಹಿಂದು ಧರ್ಮವನ್ನು ಸಂರಕ್ಷಿಸುವಲ್ಲಿ ಶಂಕರಾಚಾರ್ಯರ ಪಾತ್ರ ಪ್ರಮುಖವಾದುದು. ಅವರ ಪ್ರೇರಣೆಯಿಂದಾಗಿ ಈ ಕೃತಿ ರಚಿಸಲು ಸಾಧ್ಯವಾಗಿದೆ ಎಂದರು.
ಪಠ್ಯಪುಸ್ತಕ ರಚನಾ ಸಮಿತಿ ಮಾಜಿ ಅಧ್ಯಕ್ಷ ರೋಹಿತ ಚಕ್ರತೀರ್ಥ ಮಾತನಾಡಿ, ಹಿಂದುಗಳಿಗಾಗಿ ಇರುವ ಜಗತ್ತಿನ ಏಕೈಕ ರಾಷ್ಟ್ರ ಭಾರತವನ್ನು ರಕ್ಷಣೆ ಮಾಡಿಕೊಳ್ಳಬೇಕು. ಜಗತ್ತಿನಲ್ಲಿ ಬೇರೆಬೇರೆ ಧರ್ಮದವರಿಗೆ ಅವರದೇ ಆದ ಧರ್ಮ ಪ್ರತಿಪಾದನೆ ಮಾಡಲು ರಾಷ್ಟ್ರಗಳಿವೆ. ಆದರೆ ಹಿಂದುಗಳು ಭಾರತ ನಮ್ಮ ದೇಶ ಎಂದು ಧೈರ್ಯದಿಂದ ಹೇಳಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಮನಸ್ಥಿತಿ ಬದಲಾಗಬೇಕು ಎಂದರು.
ರಾಷ್ಟ್ರೋತ್ಥಾನ ಬಳಗದ ಮಾಜಿ ಅಧ್ಯಕ್ಷ ಪರಮೇಶ್ವರ ಭಟ್ ದಂಪತಿಯನ್ನು ಸನ್ಮಾನಿಸಲಾಯಿತು. ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಎಸ್.ಆರ್.ಭಟ್ ಬಡ್ತಿ, ಸುಷ್ಮಾ ಗಣೇಶ್‌ಪ್ರಸಾದ್, ರಾಜೇಂದ್ರ, ಆರ್.ಎಸ್.ಗಿರಿ, ಬಿ.ಜಿ.ಶ್ರೀಧರ್, ಮಹೇಶ್ ಇತರರಿದ್ದರು.