ಕೆ.ಆರ್.ಪೇಟೆ: ಲೋಕಾಯನ ಕಲ್ಚರಲ್ ಫೌಂಡೇಶನ್-ಅಕ್ಕಿಹೆಬ್ಬಾಳು, ಹೇಮಾವತಿ ಹೊನ್ನಾರು ವೇದಿಕೆ-ಅಕ್ಕಿಹೆಬ್ಬಾಳು ಮತ್ತು ಧಾತ್ರಿ ರಂಗಸಂಸ್ಥೆ ಸಿರಿಗೆರೆ ಸಹಯೋಗದಲ್ಲಿ ಅಕ್ಕಿಹೆಬ್ಬಾಳು ಸರ್ಕಾರಿ ಪ್ರೌಢಶಾಲಾ ರಂಗಮಂದಿರದಲ್ಲಿ ಜ.3 ಮತ್ತು 4ರಂದು ಸಂಕ್ರಾಂತಿ ರಂಗೋತ್ಸವ ಎಂಬ ಶೀರ್ಷಿಕೆಯಡಿ ಎರಡು ದಿನಗಳ ಕಾಲ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಲೋಕಾಯನ ಸಂಸ್ಥೆಯ ಸಂಚಾಲಕ ಮೊಹಮ್ಮದ್ ಅಜರುದ್ದೀನ್ ತಿಳಿಸಿದ್ದಾರೆ.
ಜ.3 ರಂದು ಬೆಳಗ್ಗೆ 11ಗಂಟೆಗೆ ಡಾ. ರಾಜಪ್ಪ ದಳವಾಯಿ ರಚನೆ ಮಾಡಿರುವ ‘ಭಾರತದ ಪ್ರಜೆಗಳಾದ ನಾವು’ ನಾಟಕವನ್ನು ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಜೈನಹಳ್ಳಿ ವಿದ್ಯಾರ್ಥಿಗಳು ಅಭಿನಯಿಸಿದ್ದಾರೆ. ಈ ವಿಶೇಷ ಪ್ರದರ್ಶನ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಅದೇ ದಿನ ಸಂಜೆ 7:30ಕ್ಕೆ ಬಿ.ಎಸ್.ಅಶ್ವತ್ಥ್ ರಚನೆ ಮಾಡಿರುವ ಶ್ರೀಕೃಷ್ಣ ಸಂಧಾನ ಎಂಬ ನಾಟಕವನ್ನು ಧಾತುರಂಗ ಸಂಸ್ಥೆಯ ಕಲಾವಿದರು ಅಭಿನಯಿಸುತ್ತಿದ್ದಾರೆ. 4 ರಂದು ಬೆಳಗ್ಗೆ 11 ಗಂಟೆಗೆ ವಿದ್ಯಾರ್ಥಿಗಳಿಗಾಗಿ ಡಾ.ಎಂ.ಭೈರೇಗೌಡ ರಚನೆ ಮಾಡಿರುವ ಸರಸತಿಯಾಗಲೊಲ್ಲೆ ಎಂಬ ನಾಟಕ ಪ್ರದರ್ಶನವಿದೆ. ಅದೇ ದಿನ ಸಂಜೆ 7:30ಕ್ಕೆ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚನೆ ಮಾಡಿರುವ ಮೋಳಿಗೆ ಮಾರಯ್ಯ ಎಂಬ ನಾಟಕದ ಪ್ರದರ್ಶನವಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.