ನ್ಯೂಸ್

ವೀರ ಸಾವರ್ಕರ್​ ವಿರೋಧಿಸುವವರನ್ನು ಎರಡು ದಿನ ಅಂಡಮಾನ್​ ಜೈಲಿನಲ್ಲಿಡಬೇಕು; ಶಿವಸೇನಾ ಮುಖಂಡ ಸಂಜಯ್​ ರಾವತ್​ ಕಿಡಿ

ಮುಂಬೈ: ವೀರ ಸಾವರ್ಕರ್​ ಅವರಿಗೆ ಭಾರತ ರತ್ನ ನೀಡಲು ವಿರೋಧಿಸುವವರನ್ನು ಅಂಡಮಾನ್​ ಜೈಲಿನಲ್ಲಿ ಎರಡು ದಿನ ಇಡಬೇಕು ಎಂದು ಶಿವಸೇನಾ ಮುಖಂಡ ಸಂಜಯ್​ ರಾವತ್​ ಕಿಡಿ ಕಾರಿದ್ದಾರೆ.

ಸಾವರ್ಕರ್​ ಅವರನ್ನು ವಿರೋಧಿಸುವವರು ಯಾವ ಪಕ್ಷದವರೇ ಆಗಲಿ, ಯಾವ ಸಿದ್ಧಾಂತದವರೇ ಆಗಲಿ ಅವರನ್ನು ಸಾವರ್ಕರ್​ ಅವರನ್ನು ಬ್ರಿಟಿಷರು ಇರಿಸಿದ್ದ ಅಂಡಮಾನ್​ ಜೈಲಿನಲ್ಲಿ ಇಡಬೇಕು. ಆಗ ಅವರಿಗೆ ಗೊತ್ತಾಗುತ್ತದೆ, ಸಾವರ್ಕರ್​ ಅವರ ದೇಶಕ್ಕೆ ಕೊಡುಗೆ ಏನು ಎಂದು ಎಂದಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್​ ಅವರಿಗೆ ಭಾರತ ರತ್ನ ನೀಡಬೇಕು ಮತ್ತು ಬೇಡ ಎಂದು ವಾದ ವಿವಾದಗಳು ಎದ್ದಿವೆ. ಈ ಮೊದಲು ರಾಹುಲ್​ ಗಾಂಧಿ ವೀರ ಸಾವರ್ಕರ್​ ಬಗ್ಗೆ ಸಲ್ಲದ ಮಾತುಗಳನ್ನಾಡಿ ವಿವಾದಕ್ಕೊಳಗಾಗಿದ್ದರು.

ಇದಕ್ಕೆ ವೀರ ಸಾವರ್ಕರ್​ ಮೊಮ್ಮಗ ರಂಜಿತ್​ ಸಾವರ್ಕರ್​ ರಾಹುಲ್ ಗಾಂಧಿಯವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ರಾಹುಲ್​ ಗಾಂಧಿಯವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಸಾರ್ವಜನಿಕವಾಗಿ ಥಳಿಸಬೇಕು. ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ರಾಹುಲ್​ ಗಾಂಧಿ ದೇಶ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ರಾಹುಲ್​ ಗಾಂಧಿ ಇಂತಹ ಅವಹೇಳನ ಮಾಡುತ್ತಿರುವುದು ಇದೇ ಮೊದಲ ಬಾರಿಗೆ ಅಲ್ಲ. ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಸರ್ಕಾರದ ಬಳಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ರಂಜಿತ್​ ಹೇಳಿದರು. (ಏಜೆನ್ಸೀಸ್​)