ಸಿನಿಮಾ ಸೆಟ್ಟೇರಿದ ಬಳಿಕ ಒಂದೆರಡು ವರ್ಷಗಳಲ್ಲಿ ಬಿಡುಗಡೆಯಾಗುವುದು ಸಾಮಾನ್ಯ. ಅಪರೂಪದ ಸಂದರ್ಭಗಳಲ್ಲಿ ಕೆಲ ಸಿನಿಮಾಗಳು ಮೂರ್ನಾಲ್ಕು ವರ್ಷ ಸಮಯ ತೆಗೆದುಕೊಂಡಿದ್ದೂ ಇದೆ. ಇನ್ನು ಕೆಲ ಚಿತ್ರಗಳು ಪ್ರಾರಂಭವಾದರೂ, ಕಾರಣಾಂತರಗಳಿಂದ ರಿಲೀಸ್ ಆಗುವುದೇ ಇಲ್ಲ. ಹಾಗೆ ಡಬ್ಬ ಸೇರಿದ ಅದೆಷ್ಟೋ ಚಿತ್ರಗಳಿವೆ. ಆದರೆ, ಕೆಲವೊಮ್ಮೆ ವರ್ಷಗಳ ನಂತರ ಆ ಸಿನಿಮಾಗಳಿಗೆ ಅದೃಷ್ಟ ಕೈಹಿಡಿಯುತ್ತದೆ.
ಅಂತಹ ಅದೃಷ್ಟ ಈಗ ಬಾಲಿವುಡ್ ಸಿನಿಮಾ ಸಾಜಿದ್ ಅಲಿ ನಿರ್ದೇಶನದ "ವೋ ಭಿ ದಿನ್ ಥೇ' ಚಿತ್ರಕ್ಕೆ ಒಲಿದಿದೆ. ಬರೋಬ್ಬರಿ 11 ವರ್ಷಗಳ ನಂತರ ಈ ಚಿತ್ರ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗಿದೆ. ಅಂದಹಾಗೆ, "ದಿಲ್ ಬೆಚಾರಾ', "ರಾಷ್ಟ್ರ ಕವಚ್ ಓಂ', "ಧಕ್ ಧಕ್' ಮತ್ತು "ಖಡಕ್ ಸಿಂಗ್' ಖ್ಯಾತಿಯ ನಟಿ ಸಂಜನಾ ಸಂಘಿ ನಾಯಕಿಯಾಗಿ ನಟಿಸಿದ್ದ ಮೊದಲ ಚಿತ್ರವಿದು.
ಈ ಬಗ್ಗೆ ಸಂಭ್ರಮ ವ್ಯಕ್ತಪಡಿಸಿರುವ ಸಂಜನಾ, "ನಾನಾಗ 12ನೇ ತರಗತಿಯಲ್ಲಿದ್ದೆ. ಆ ಸಮಯದಲ್ಲಿ 3 ತಿಂಗಳ ಕಾಲ ಜಮ್ಶೇಡ್ಪುರಕ್ಕೆ ಶೂಟಿಂಗ್ಗೆ ತೆರಳಬೇಕಿತ್ತು. 12 ತಾಸುಗಳ ಶಿಫ್ಟ್ನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಅದಕ್ಕೂ ಮುನ್ನ ಮತ್ತು ಚಿತ್ರೀಕರಣದ ಬಳಿಕ, ನಿತ್ಯವೂ ಓದುತ್ತಿದ್ದೆ. ಪರೀಕ್ಷೆಯಲ್ಲಿ ಶೇಕಡಾ 96.50 ಅಂಕ ಪಡೆದೆ. ಈ ಸಿನಿಮಾ ನನಗೆ ಅತ್ಯುತ್ತಮ ಫ್ರೆಂಡ್ಸ್ ನೀಡಿದೆ. 11 ವರ್ಷಗಳ ನಂತರ ಬಿಡುಗಡೆಯಾಗುತ್ತಿರುವ ಖುಷಿಯಿದೆ' ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.