ನ್ಯೂಸ್

ಇವರಿದ್ದರೆ ಮಾತ್ರ ನನ್ನ ಬಯೋಪಿಕ್​ನಲ್ಲಿ ನಾನೇ ನಟಿಸುತ್ತೀನಿ! ಶಾಕಿಂಗ್ ಹೇಳಿಕೆ ನೀಡಿದ ಸಾನಿಯಾ ಮಿರ್ಜಾ

ಮುಂಬೈ: ಭಾರತೀಯ ಹೆಸರಾಂತ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಬಗ್ಗೆ ಹೆಚ್ಚಿನ ಪರಿಚಯ ಅಗತ್ಯವಿಲ್ಲ. ಕೇವಲ ತಮ್ಮ ಆಟದಿಂದ ಮಾತ್ರವಲ್ಲದೇ ಸೌಂದರ್ಯದಿಂದಲೂ ನೋಡುಗರ ಮನಗೆದ್ದಿರುವ ಸಾನಿಯಾ, ಇತ್ತೀಚೆಗಷ್ಟೇ ತಮ್ಮ ವೈವಾಹಿಕ ಜೀವನದಲ್ಲಿ ಉಂಟಾದ ತೊಡಕುಗಳಿಂದ ದೂರ ಉಳಿದಿದ್ದು, ನಮಗೆಲ್ಲಾ ತಿಳಿದೇ ಇದೆ. ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಮಲಿಕ್​ರಿಂದ ವಿಚ್ಛೇದನ ಪಡೆದ ಬಳಿಕ ಅತೀವ ನೋವಿನಲ್ಲಿದ್ದ ಸಾನಿಯಾ, ಹೆಚ್ಚಾಗಿ ಯಾವುದೇ ಖಾಸಗಿ ಕಾರ್ಯಕ್ರಮಗಳಿಗೂ ಆಗಮಿಸಿರಲಿಲ್ಲ. ಆದ್ರೆ, ಇದೀಗ ಕಡೆಗೂ ಫ್ಯಾನ್ಸ್​ಗಳ ಮುಂದೆ ಮಿರ್ಜಾ ಹಾಜರಾಗಿರುವುದನ್ನು ಕಂಡು ಅನೇಕರು ಆಶ್ಚರ್ಯಚಕಿತರಾಗಿದ್ದಾರೆ.

ಪ್ರಸ್ತುತ ತಮ್ಮ ವೈಯಕ್ತಿಕ ಜೀವನದಲ್ಲಿ ಏರಿಳಿತಗಳನ್ನು ಎದುರಿಸುತ್ತಿರುವ ಸಾನಿಯಾ, ಶೋಯಿಬ್ ಮಲಿಕ್‌ರಿಂದ ವಿಚ್ಛೇದನ ಪಡೆದ ನಂತರ ದುಬೈನಲ್ಲಿ ತಮ್ಮ ಮಗನೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಇನ್ನು ಈ ಮಧ್ಯೆ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾನಿಯಾ ಮಿರ್ಜಾ, ನನ್ನ ಬಯೋಪಿಕ್ ಮಾಡಿದರೆ, ಖಂಡಿತವಾಗಿ ನಾನೇ ಆ ಸಿನಿಮಾದಲ್ಲಿ ನಟಿಸಲು ಬಯಸುತ್ತೇನೆ. ಆದರೆ, ಒಂದೇ ಒಂದು ಕಂಡಿಷನ್ ಎಂದಿದ್ದಾರೆ.

ನನ್ನ ಬಯೋಪಿಕ್​ನಲ್ಲಿ ಬಾಲಿವುಡ್​ ನಟ ಶಾರುಖ್ ಖಾನ್ ಅಥವಾ ಅಕ್ಷಯ್​ ಕುಮಾರ್​ ನಟಿಸಿದರೆ, ಖಂಡಿತ ನಾನು ಅಭಿನಯಿಸಲು ಉತ್ಸಾಹದಿಂದ ಮುಂದಾಗ್ತೀನಿ. ಅದರಲ್ಲೂ ನನಗೆ ಅಕ್ಷಯ್​ ಎಂದರೆ ಬಹಳ ಇಷ್ಟ. ಹಾಗಾಗಿ ಅವರು ನಟಿಸಿದರೆ, ಪ್ರಾಯಶಃ ನಾನೇ ನಟಿಸುತ್ತೇನೆ ಎಂದಿದ್ದಾರೆ. ಸದ್ಯ ಸಾನಿಯಾ ಮಿರ್ಜಾರ ಈ ಹೇಳಿಕೆ ಅವರ ಅಭಿಮಾನಿಗಳಲ್ಲಿ ಭಾರೀ ಸಂತಸ ತಂದಿದ್ದು, ಅಸಲಿಗೆ ಅಕ್ಷಯ್ ಕುಮಾರ್​ ನಟಿಸುತ್ತಾರಾ ಎಂಬುದೇ ಇದೀಗ ದೊಡ್ಡ ಪ್ರಶ್ನೆಯಾಗಿ ಕಾಡಿದೆ,(ಏಜೆನ್ಸೀಸ್).