?????? 
ನ್ಯೂಸ್

ಗಂಧನಹಳ್ಳಿ ಎಸ್‌ಬಿಐ ಶಾಖೆ ಸೀಲ್‌ಡೌನ್

ಕೆ.ಆರ್.ನಗರ: ಕರೊನಾ ಸೋಂಕು ದೃಢಪಟ್ಟ ಪೇದೆಯೊಬ್ಬರು ಭೇಟಿ ನೀಡಿದ್ದ ಕಾರಣಕ್ಕಾಗಿ ತಾಲೂಕಿನ ಗಂಧನಹಳ್ಳಿ ಗ್ರಾಮದ ಎಸ್‌ಬಿಐ ಶಾಖೆಯನ್ನು ಅಧಿಕಾರಿಗಳು ಸೋಮವಾರ ಸೀಲ್‌ಡೌನ್ ಮಾಡಿದ್ದಾರೆ.

ಮೈಸೂರಿನ ಕೆಎಸ್‌ಆರ್‌ಪಿಯಲ್ಲಿದ್ದ ತಾಲೂಕಿನ ಚಿಕ್ಕನಾಯಕನಹಳ್ಳಿ ಮತ್ತು ದೊಡ್ಡಕೊಪ್ಪಲು ಗ್ರಾಮದ ಇಬ್ಬರು ಪೇದೆಗಳನ್ನು ಬೆಂಗಳೂರಿನ ಪಾದರಾಯನಪುರಕ್ಕೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅಲ್ಲಿಂದ ಬಂದ ನಂತರ ಅವರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಕರೊನಾ ಸೋಂಕು ದೃಢಪಟ್ಟಿತ್ತು.

ಇಬ್ಬರು ಪೇದೆಗಳು ಕೋವಿಡ್ ಪರೀಕ್ಷಾ ಫಲಿತಾಂಶ ಬರುವ ಮುನ್ನ ಜೂನ್ 19ರಂದು ತಮ್ಮ ಊರುಗಳಿಗೆ ವಾಪಸ್ ಬಂದು ಕುಟುಂಬಸ್ಥರ ಜೊತೆ ಬೆರೆತಿದ್ದರು. ಈ ವೇಳೆ ಅವರಿಬ್ಬರ ವರದಿಯಲ್ಲಿ ಪಾಸಿಟಿವ್ ಬಂದಿದ್ದರಿಂದ ದೂರವಾಣಿ ಮೂಲಕ ಅವರಿಗೆ ಮಾಹಿತಿ ತಿಳಿಸಿ ವಾಪಸ್ ಕರೆಸಿಕೊಳ್ಳಲಾಗಿತ್ತು.

ವಿಷಯ ತಿಳಿದ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ಸೋಮವಾರ ಚಿಕ್ಕನಾಯಕನಹಳ್ಳಿಗೆ ಭೇಟಿ ನೀಡಿ ಪೇದೆಯ ಸಂರ್ಪರ್ಕಿತರ ಮಾಹಿತಿ ಪಡೆದಿದ್ದಾರೆ. ಇವರೊಂದಿಗೆ ಅಡಗೂರು-ದೊಡ್ಡಕೊಪ್ಪಲು ಗ್ರಾಮದಲ್ಲಿಯೂ ಪ್ರಾಥಮಿಕ ಸಂಪರ್ಕಿತರಾದ ಸೋಂಕಿತ ಪೇದೆಯ ತಾಯಿ, ಸಹೋದರಿ ಹಾಗೂ ಅಂಗನವಾಡಿ ಕಾರ್ಯಕರ್ತೆಯ ಗಂಟಲು ದ್ರವ ಪಡೆದು ಪರೀಕ್ಷೆಗೆ ಕಳುಹಿಸಿ ಎಲ್ಲರನ್ನೂ ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ದೊಡ್ಡಕೊಪ್ಪಲು ಗ್ರಾಮದ ಪೇದೆ ತನ್ನ ತಾಯಿಯೊಂದಿಗೆ ಗಂಧನಹಳ್ಳಿ ಗ್ರಾಮದ ಎಸ್‌ಬಿಐ ಶಾಖೆ ಮತ್ತು ಬ್ಯಾಂಕ್ ಮುಂದಿರುವ ಡಿಟಿಪಿ ಕೇಂದ್ರಕ್ಕೆ ಭೇಟಿ ನೀಡಿದ್ದರೆಂಬ ಮಾಹಿತಿ ಆಧಾರದ ಮೇಲೆ ಬ್ಯಾಂಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂವರು ಸಿಬ್ಬಂದಿ, ಡಿಟಿಪಿ ಸೆಂಟರ್‌ನ ಕೆಲಸಗಾರನನ್ನು ಪರೀಕ್ಷೆಗೆ ಒಳಪಡಿಸಿ, ಬ್ಯಾಂಕ್‌ಗೆ ಸ್ಯಾನಿಟೈಸರ್ ಮಾಡಿ ಸೀಲ್‌ಡೌನ್ ಮಾಡಿಸಿದರು.

ಈ ಸಂದರ್ಭ ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಆರ್.ಮಹೇಂದ್ರಪ್ಪ, ಗಂಧನಹಳ್ಳಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ವೀರಕುಮಾರ್ ರೆಡ್ಡಿ, ಪಿಎಸ್‌ಐ ವಿ.ಚೇತನ್, ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ, ಹಿರಿಯ ಆರೋಗ್ಯ ನಿರೀಕ್ಷಕ ಕೆ.ವಿ.ರಮೇಶ್, ಗ್ರಾಪಂ ಕಾರ್ಯದರ್ಶಿ ಸುರೇಂದ್ರಕುಮಾರ್, ಗ್ರಾಮ ಲೆಕ್ಕಿಗ ರವೀಂದ್ರ ಇನ್ನಿತರರು ಇದ್ದರು.

ಪೇದೆಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಪ್ರಾಥಮಿಕ ಸಂಪರ್ಕಿತರನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರ ಪರೀಕ್ಷಾ ವರದಿ ಬಂದ ನಂತರ ಈಗಾಗಲೇ ಪಟ್ಟಿ ಮಾಡಲಾಗಿರುವ ದ್ವಿತೀಯ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸಲಾಗುವುದು.
ಡಾ.ಕೆ.ಆರ್.ಮಹೇಂದ್ರಪ್ಪ ತಾಲೂಕು ಆರೋಗ್ಯಾಧಿಕಾರಿ