ಬೆಂಗಳೂರು: ಮಾನ್ವಿತಾ ಕಾಮತ್ ಸದ್ದಿಲ್ಲದೆ ಸೋಮವಾರ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬೇರೆ ಸಂದರ್ಭದಲ್ಲಾಗಿದ್ದರೆ, ಇದೊಂದು ಸಂಭ್ರಮದ ಕ್ಷಣ. ಆದರೆ, ಇಡೀ ದೇಶ ಲಾಕ್ಡೌನ್ ಎಫೆಕ್ಟ್ನಲ್ಲಿರುವುದರಿಂದ, ಮಾನ್ವಿತಾ ಬಹಳ ಸರಳವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಗತ್ಯವಿರುವವರಿಗೆ ತಮ್ಮ ಶಕ್ತ್ಯಾನುಸಾರ ಊಟ ಹಂಚಿ ಬಂದಿದ್ದಾರೆ.
ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ‘ಈ ಬಾರಿ ಸೆಲೆಬ್ರೇಷನ್ ಅಂತೇನಿಲ್ಲ. ಗುಟ್ಟಹಳ್ಳಿಯಲ್ಲಿ ಅಗತ್ಯವಿರುವವರಿಗೆ ಆಹಾರ ಹಂಚುವ ಮೂಲಕ ಸರಳವಾಗಿ ಆಚರಿಸಿಕೊಂಡಿದ್ದೇನೆ. ಅದು ಬಿಟ್ಟು ಇನ್ನೇನಿಲ್ಲ’ ಎನ್ನುತ್ತಾರೆ ಮಾನ್ವಿತಾ. ಇನ್ನು ಕ್ವಾರಂಟೈನ್ ದಿನಗಳನ್ನು ಅವರು ಹೇಗೆ ಕಳೆಯುತ್ತಿದ್ದಾರೆ ಎಂಬ ಪ್ರಶ್ನೆಗೆ, ‘ಸಿನಿಮಾ ಮತ್ತು ವೆಬ್ ಸೀರೀಸ್ಗಳನ್ನು ನೋಡುತ್ತಾ, ಕಥೆಗಳನ್ನು ಬರೆಯುತ್ತಾ, ಪುಸ್ತಕಗಳನ್ನು ಓದುತ್ತಾ ಕಳೆಯುತ್ತಿದ್ದೇನೆ. ಹಾಗೆ ನೋಡಿದರೆ, ಇದು ಎಲ್ಲರ ದಿನಚರಿ ಆಗಿಬಿಟ್ಟಿದೆ. ಮನೆಯಲ್ಲೇ ಇದ್ದು ಇದ್ದು ನನಗೇನು ಅಂತ ಬೇಸರವಾಗಿಲ್ಲ, ಏನೋ ಕಳೆದುಕೊಳ್ಳುತ್ತಿದ್ದೀನಿ ಅಂತ ಅನಿಸುತ್ತಿಲ್ಲ’ ಎಂಬುದು ಅವರ ಅಭಿಪ್ರಾಯ.
ಮಾನ್ವಿತಾ ಹೇಳುವಂತೆ, ನಮ್ಮಿಂದ ಈ ಜಗತ್ತಿಗೆ ಏನು ಕೊಡುವುದಕ್ಕೆ ಸಾಧ್ಯವೋ, ಅದನ್ನು ಕೊಡುವುದಕ್ಕೆ ಇದು ಅದ್ಭುತವಾದ ಸಮಯವಂತೆ. ‘ಈ ಭೂಮಿಗೆ ಈಗ ಅಗತ್ಯವಾಗಿ ಬೇಕಾಗಿರುವುದು ಪ್ರೀತಿ. ನೆಗೆಟಿವಿಟಿ, ದ್ವೇಷ ಇದೆಲ್ಲವನ್ನು ಪಕ್ಕಕ್ಕಿಟ್ಟು ಕಲೆಗೆ, ಪ್ರೀತಿಗೆ ಹೆಚ್ಚು ಬೆಲೆ ಕೊಡಬೇಕು. ಆ ವಿಂಗ್, ಈ ವಿಂಗ್ ಎಂದು ಕಚ್ಚಾಡುವ ಬದಲು, ಪ್ರೀತಿಯೆಂಬ ವಿಂಗ್ (ರೆಕ್ಕೆ) ಕಟ್ಟಿಕೊಂಡು, ಇನ್ನೂ ಎತ್ತರಕ್ಕೆ ಹಾರುವ ಪ್ರಯತ್ನ ಮಾಡಬೇಕು’ ಎನ್ನುತ್ತಾರೆ ಮಾನ್ವಿತಾ.