ಹಾವೇರಿ: ರಾಣೇಬೆನ್ನೂರು ತಾಲೂಕಿನ ಇಟಗಿ-ಮುದೇನೂರ ಗ್ರಾಮದ ಬಳಿ ಮರಳು ತುಂಬಿದ್ದ ಟಿಪ್ಪರ್ ಲಾರಿಗೆ ಗುರುವಾರ ಒಂದೇ ಕುಟುಂಬ ನಾಲ್ವರು ಬಲಿಯಾಗಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಮತ್ತು ಮೃತರ ಸಂಬಂಧಿಕರು ಛಿದ್ರಛಿದ್ರವಾಗಿ ಬಿದ್ದಿದ್ದ ಮೃತದೇಹಗಳ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು. ಅಲ್ಲದೆ, ಮರಳು ಸಾಗಿಸುತ್ತಿದ್ದ ಟಿಪ್ಪರ್ಲಾರಿಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದರು.
ಏನದು ಘಟನೆ?: ಮುದೇನೂರು ಗ್ರಾಮದ ಸಿದ್ದಪ್ಪ ಹನುಮಂತಪ್ಪ ನಾಗೇನಹಳ್ಳಿ (38) ಮತ್ತು ಅನಸೂಯ(32) ದಂಪತಿಯು ತಮ್ಮ ಇಬ್ಬರು ಮಕ್ಕಳಾದ ವನಿತಾ(11) ಹಾಗೂ ಮಗಳು ಸುನಿತಾ(9) ಜತೆ ಬೈಕ್ನಲ್ಲಿ ಹಿರೇಕೆರೂರ ದುರ್ಗಮ್ಮ ದೇವಿ ಜಾತ್ರೆಗೆ ಹೋಗಿದ್ದರು. ಗುರುವಾರ ಮಧ್ಯಾಹ್ನ ಗ್ರಾಮಕ್ಕೆ ವಾಪಸ್ ಬರುತ್ತಿದ್ದರು. ಇದನ್ನೂ ಓದಿರಿ ಕೂಲಿ ಕೆಲಸ ಮುಗಿಸಿಕೊಂಡು ಟ್ರ್ಯಾಕ್ಟರ್ನಲ್ಲಿ ಮನೆಗೆ ಹೊರಟವರ ಪ್ರಾಣ ಹೊತ್ತೊಯ್ದ ಜವರಾಯ!
ಮಾರ್ಗಮಧ್ಯೆ ಇವರು ಸಂಚರಿಸುತ್ತಿದ್ದ ಬೈಕ್ಗೆ ಮರಳು ತುಂಬಿದ್ದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದ್ದು, ಬೈಕ್ನಲ್ಲಿದ್ದ ಅಪ್ಪ-ಅಮ್ಮ-ಮಕ್ಕಳು ಸೇರಿ ನಾಲ್ವರು ಸ್ಥಳದಲ್ಲೇ ದುರ್ಮರಣಕ್ಕೀಡಾದರು. ನಾಲ್ವರ ಮೃತದೇಹಗಳು ಒಂದೊಂದು ದಿಕ್ಕಿನಲ್ಲಿ ಬಿದ್ದಿದ್ದು, ಕೆಲಭಾಗಗಳು ನಜ್ಜುಗುಜ್ಜಾಗಿದ್ದವು. ಅಪಘಾತದ ಭೀಕರತೆ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ನಮಗೆ ನ್ಯಾಯ ಬೇಕು. ಅಮಾಯಕರ ಸಾವಿಗೆ ಮರಳು ತುಂಬಿದ್ದ ರಕ್ಕಸ ಟಿಪ್ಪರ್ ಲಾರಿಯೇ ಕಾರಣ. ಜಿಲ್ಲೆಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯಲು ಹೇಗೆ ಬಿಟ್ಟಿದ್ದೀರಿ? ಎಂದು ಮೃತರ ಸಂಬಂಧಿಕರು ಪೊಲೀಸರಿಗೆ ತರಾಟೆ ತೆಗೆದುಕೊಂಡರು. ಅಲ್ಲದೆ, ಟಿಪ್ಪರ್ ಲಾರಿಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದರು. ತಕ್ಷಣವೇ ಪೊಲೀಸರು ಪ್ರತಿಭಟನಾನಿರತರನ್ನ ತಡೆದರು. ಜಿಲ್ಲಾಧಿಕಾರಿ ಹಾಗೂ ಮರಳಿನ ಪಾಯಿಂಟ್ನವರು ಸ್ಥಳಕ್ಕೆ ಬರಬೇಕು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿ ಹಲವು ಅಧಿಕಾರಿಗಳು ಭೇಟಿ ನೀಡಿದ್ದರು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ