ನ್ಯೂಸ್

ಬಿಜೆಪಿಯ ಮರಳು ನೀತಿಯೇ ಸಮಸ್ಯೆಗೆ ಕಾರಣ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಆರೋಪ

ಹರೀಶ ಎಂ.

ಮಂಗಳೂರು: ಬಿಜೆಪಿ ಆಡಳಿತಾವಧಿಯ ಮರಳು ನೀತಿಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಮರಳು ಸಮಸ್ಯೆ ಎದುರಾಗಲು ಕಾರಣವಾಗಿದೆ. ಇದರಲ್ಲಿ ಕಾಂಗ್ರೆಸ್ ಸರ್ಕಾರದ ತಪ್ಪಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹೇಳಿದ್ದಾರೆ.


ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಳು ಸಮಸ್ಯೆಗೆ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ಶಾಸಕರು ಹೇಳುತ್ತಿದ್ದಾರೆ. ಯು.ಟಿ. ಖಾದರ್ ಸಚಿವರಾಗಿದ್ದಾಗ ಸ್ಯಾಂಡ್ ಬಜಾರ್ ಆಪ್ ಮಾಡಿ ಕಡಿಮೆ ಬೆಲೆಗೆ ಕ್ಲಪ್ತ ಸಮಯದಲ್ಲಿ ಮರಳು ಸಿಗುವಂತೆ ಮಾಡಿದ್ದರು. ಬಿಜೆಪಿ ಅವಧಿಯಲ್ಲಿ ಅದನ್ನು ನಿಲ್ಲಿಸಿದ್ದು ಯಾಕೆ? ಮೊದಲ ಬಾರಿಗೆ ಅದೂ ಡ್ರೆಜ್ಜಿಂಗ್ ಮೂಲಕ ಸೇತುವೆ ಅಡಿಯ ನಿಬರ್ಂಧಿತ ಪ್ರದೇಶದಲ್ಲಿ ಮರಳುಗಾರಿಕೆ ನಡೆದಿದ್ದು ಬಿಜೆಪಿಯ ನಾಲ್ಕು ವರ್ಷಗಳ ಆಡಳಿತ ಅವಧಿಯಲ್ಲೆ? ಎಂಬುದನ್ನು ಅವರು ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.


ಆಸ್ಕರ್ ಫನಾರ್ಂಡಿಸ್ ಕೇಂದ್ರ ಸಚಿವರಾಗಿದ್ದಾಗ ಸಿಆರ್‌ಝಡ್‌ನ ಕೆಲವು ನಿಯಮಗಳನ್ನು ಸರಳೀಕರಣ ಮಾಡಿದ್ದರು. ಆದರೆ 10 ವರ್ಷ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಈ ಬಗ್ಗೆ ಯಾವ ಪ್ರಯತ್ನವನ್ನೂ ಮಾಡಿಲ್ಲ. ಈಗ ಆರೋಪ ಮಾಡುವ ಬಿಜೆಪಿ ಶಾಸಕರು ತಮ್ಮ ಸರ್ಕಾರವೇ ಅಧಿಕಾರದಲ್ಲಿದ್ದಾಗ ಈ ಬಗ್ಗೆ ಒಂದು ಸಲವಾದರೂ ನಿಯೋಗ ತೆರಳಿ ಪ್ರಶ್ನೆ ಮಾಡಿದ್ದರೇ ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.


ಬಿಜೆಪಿ ಅವಧಿಯಲ್ಲಿ ಸ್ವತಃ ರಾಜ್ಯಾಧ್ಯಕ್ಷರು 2 ಸಾವಿರ ರೂಪಾಯಿಗೆ ಒಂದು ಲೋಡ್ ಮರಳು ನೀಡುವುದಾಗಿ ಹೇಳಿದ್ದರು. ಅದನ್ನು ಅನುಷ್ಠಾನ ಮಾಡಿದ್ದಾರಾ? ಈಗ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.


ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುತ್ತಿಲ್ಲ ಎಂದು ಬಿಜೆಪಿ ಶಾಸಕರು ದೂರಿದ್ದಾರೆ. ಆದರೆ ಚುನಾವಣೆ ಪೂರ್ವದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಬಗ್ಗೆ ಮಾತನಾಡಬೇಡಿ. ಹಿಂದುತ್ವ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷರೇ ಹೇಳಿದ್ದರು. ಈಗ ಯಾಕೆ ಬಿಜೆಪಿಗೆ ಅಭಿವೃದ್ಧಿ ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.


ಕಾಂಗ್ರೆಸ್ ಮುಖಂಡರಾದ ಪದ್ಮನಾಭ ನರಿಂಗಾನ, ಟಿ.ಕೆ. ಸುಧೀರ್, ಗಣೇಶ್ ಪೂಜಾರಿ, ಅಬ್ದುಲ್ ಸಲೀಂ, ಶುಭೋದಯ ಆಳ್ವ, ಪ್ರಕಾಶ್ ಸಾಲ್ಯಾನ್, ಲಾರೆನ್ಸ್ ಡಿಸೋಜ, ಸುಭಾಶ್ ಶೆಟ್ಟಿ, ನೀರಜ್ ಪಾಲ್, ಯೋಗೇಶ್ ಕುಮಾರ್ ಇದ್ದರು.