ನ್ಯೂಸ್

ಸನಾತನ ಧರ್ಮವು ಭಾರತವನ್ನು ನಾಶ ಮಾಡಿದೆ; ಎನ್​ಸಿಪಿ ಶಾಸಕ ಜಿತೇಂದ್ರ ವಿವಾದಾತ್ಮಕ ಹೇಳಿಕೆ |Jitendra Awhad

Jitendra Awhad: ಸನಾತನ ಧರ್ಮವು ಭಾರತವನ್ನು ನಾಶ ಮಾಡಿದೆ. ಸನಾತನ ಧರ್ಮ ಎಂಬುದು ಎಂದಿಗೂ ಇರಲಿಲ್ಲ. ಅದೊಂದು ವಿಕೃತ ಸಿದ್ಧಾಂತ. ನಾವು ಹಿಂದೂ ಧರ್ಮದ ಅನುಯಾಯಿಗಳು ಎಂದು ಎನ್​ಸಿಪಿ ಶರದ್ ಪವಾರ್ ಬಣದ ಶಾಸಕ ಜಿತೇಂದ್ರ ಅವ್ಹಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

2008ರ ಮಾಲೆಗಾಂವ್ ಬಾಂಬ್ ಸ್ಫೋಟದ 7 ಆರೋಪಿಗಳನ್ನು ಎನ್​ಐಎ ವಿಶೇಷ ಕೋರ್ಟ್ ಖುಲಾಸೆಗೊಳಿಸಿದ ನಂತರ ಕೇಸರಿ ಭಯೋತ್ಪಾದನೆ ಎಂಬ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಶಾಸಕ ಜಿತೇಂದ್ರ ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರಿಗೆ ಪಟ್ಟಾಭಿಷೇಕವನ್ನು ನಿರಾಕರಿಸಿ ಅವಮಾನ ಮಾಡಲು ಸನಾತನ ಧರ್ಮವೇ ಕಾರಣ. ಸಮಾಜ ಸುಧಾರಕ ಜ್ಯೋತಿರಾವ್ ಪುಲೆಯವರನ್ನು ಹತ್ಯೆ ಮಾಡಲು ಪ್ರಯತ್ನಿಸಿದ್ದು ಸನಾತನ ಧರ್ಮದ ಅನುಯಾಯಿಗಳು ಎಂದು ಆರೋಪಿಸಿದ್ದಾರೆ.

ಜ್ಯೋತಿರಾವ್ ಪುಲೆ ಪತ್ನಿ ಸಾವಿತ್ರಿ ಬಾಯಿ ಪುಲೆ ಮೇಲೆ ಸೆಗಣಿನ ಎರಚಿದ್ದು, ಶಾಹು ಮಹಾರಾಜರನ್ನು ಕೊಲ್ಲಲು ಸಂಚು ರೂಪಿಸಿದ್ದು, ಡಾ.ಬಿ.ಆರ್.ಅಂಬೇಡ್ಕರ್​ಗೆ ನೀರು ಕುಡಿಯಲು, ಶಾಲೆಗೆ ಹೋಗಲು ಅವಕಾಶ ನೀಡದೇ ಇದ್ದದ್ದು ಇದೇ ಸನಾತನ ಧರ್ಮ. ಡಾ.ಅಂಬೇಡ್ಕರ್ ಸನಾತನ ಧರ್ಮವನ್ನು ವಿರೋಧಿಸಿದರು. ಮನುಸ್ಮೃತಿಯನ್ನು ಸುಟ್ಟು ಹಾಕಿ, ಅದರ ಸಂಪ್ರದಾಯಗಳನ್ನು ತಿರಸ್ಕರಿಸಿದರು. ಸನಾತನ ಧರ್ಮ ಮತ್ತು ಅದರ ಸಿದ್ಧಾಂತವನ್ನು ವಿಕೃತ ಎಂದು ಕರೆಯಲು ಸಹ ಜನ ಹಿಂಜರಿಯಬಾರದು ಎಂದು ಹೇಳಿದ್ದಾರೆ.

ಶಾಸಕ ಜಿತೇಂದ್ರ ಹೇಳಿಕೆಗೆ ಬಿಜೆಪಿ ವಾಗ್ದಾಳಿ

ಶಾಸಕ ಜಿತೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಸಂಬಿತ್ ಪಾತ್ರ, "ನಾವು ಸಹಿಷ್ಣುಗಳು, ಅದಕ್ಕಾಗಿ ಸುದ್ದಿಗೋಷ್ಠಿ ಮೂಲಕ ಅವರ ಹೇಳಿಕೆಯನ್ನು ಟೀಕಿಸುತ್ತಿದ್ದೇವೆ. ಒಂದು ವೇಳೆ ಅವರು ಇಸ್ಲಾಂ ಧರ್ಮದ ಬಗ್ಗೆ ಮಾತನಾಡಿದ್ದರೆ, ಶಾಂತಿಯುತವಾದ ಉತ್ತರ ಸಿಗುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಜಿತೇಂದ್ರ ಹೇಳಿಕೆ ಎನ್​ಸಿಪಿ ಪಕ್ಷದ ಅಧಿಕೃತ ನಿಲುವನ್ನು ಪ್ರತಿಬಿಂಬಿಸುತ್ತದೆಯೇ, ಇಲ್ಲ ವೈಯಕ್ತಿಕ ಹೇಳಿಕೆಯೋ? ಈ ಬಗ್ಗೆ ಪಕ್ಷದ ಮುಖ್ಯಸ್ಥರಾದ ಶರದ್ ಪವಾರ್ ಮತ್ತು ಅವರ ಪುತ್ರಿ ಸಂಸದೆ ಸುಪ್ರಿಯಾ ಸುಳೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಶಾಸಕ ಜಿತೇಂದ್ರ ಅವ್ಹಾದ್ ಯಾರು?

1980 ರ ದಶಕದಲ್ಲಿ ಶುಲ್ಕ ಹೆಚ್ಚಳ ವಿರೋಧಿ ಪ್ರತಿಭಟನೆಗಳ ಸಮಯದಲ್ಲಿ ವಿದ್ಯಾರ್ಥಿ ನಾಯಕರಾಗಿ ಅವ್ಹಾದ್ ರಾಜಕೀಯ ಜೀವನವನ್ನು ಆರಂಭಿಸಿದ್ದಾರೆ. ನಂತರ ಕಾಂಗ್ರೆಸ್‌ನ ವಿದ್ಯಾರ್ಥಿ ವಿಭಾಗವಾದ NSUI ಯ ಶ್ರೇಣಿಯಲ್ಲಿ ಬೆಳೆದಿದ್ದು, 2002 ರಿಂದ 2008 ರವರೆಗೆ ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದರು.

2009ರಿಂದ ಮುಂಬ್ರಾ -ಕಲ್ವಾ ಕ್ಷೇತ್ರದಿಂದ ನಿರಂತರವಾಗಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾಗುತ್ತ ಬಂದಿದ್ದಾರೆ. ಕಾಂಗ್ರೆಸ್-ಎನ್‌ಸಿಪಿ ಮತ್ತು ಮಹಾ ವಿಕಾಸ್ ಅಘಾಡಿ ಸರ್ಕಾರಗಳೆರಡರಲ್ಲೂ ವಸತಿ, ವೈದ್ಯಕೀಯ ಶಿಕ್ಷಣ, ಅಲ್ಪಸಂಖ್ಯಾತ ಅಭಿವೃದ್ಧಿ ಮತ್ತು ಔಕಾಫ್‌ನಂತಹ ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವ್ಹಾದ್ ಸಾಮಾಜಿಕ-ಧಾರ್ಮಿಕ ಚಳುವಳಿಗಳಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ ಮತ್ತು ಒಬಿಸಿ ವಂಜಾರಿ ಸಮುದಾಯಕ್ಕೆ ಸೇರಿದವರು. (ಏಜೆನ್ಸೀಸ್)