ನ್ಯೂಸ್

ಸಂಪಾದಕೀಯ: ಅದಾನಿ ಕಂಪನಿಗಳಲ್ಲಿ ಹೂಡಿಕೆ, ಸ್ವತಂತ್ರ ನಿರ್ಧಾರ ಎಂದ ಎಲ್​ಐಸಿ

ನವದೆಹಲಿ: ನಿರ್ದಿಷ್ಟ ಮಂಡಳಿಯ ಅನುಮೋದಿತ ನೀತಿಗಳ ಅನುಸಾರ ವಿವರವಾದ ಪರಿಶೀಲನೆಯ ನಂತರ, ಯಾರದೇ ಹಸ್ತಕ್ಷೇಪವಿಲ್ಲದೆ ಸ್ವತಂತ್ರವಾಗಿಯೇ ಅದಾನಿ ಸಮೂಹದ ಕಂಪನಿಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಭಾರತೀಯ ಜೀವ ವಿಮಾ ನಿಗಮ (ಎಲ್​ಐಸಿ) ಶನಿವಾರ ಸ್ಪಷ್ಟಪಡಿಸಿದೆ. ‘ವಾಷಿಂಗ್ಟನ್ ಪೋಸ್ಟ್’ನಲ್ಲಿ ಪ್ರಕಟವಾಗಿರುವ ವರದಿಗೆ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯುತ್ತರ ನೀಡಿರುವ ಎಲ್​ಐಸಿ, ‘ಕೇಂದ್ರ ಹಣಕಾಸು ಸಚಿವಾಲಯದಡಿ ಕಾರ್ಯ ನಿರ್ವಹಿಸುವ ಹಣಕಾಸು ಸೇವೆಗಳ ಇಲಾಖೆಯಾಗಲಿ ಅಥವಾ ಯಾವುದೇ ಇತರ ಸಂಸ್ಥೆಯಾಗಲಿ ಈ ಹೂಡಿಕೆ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡಿಲ್ಲ’ ಎಂದು ತಿಳಿಸಿದೆ.

ದೇಶದ ಅತಿ ದೊಡ್ಡ ವಿಮಾ ಕಂಪನಿಯಾದ ಎಲ್​ಐಸಿ ಹಲವು ದಶಕಗಳಿಂದ ಭಾರತೀಯ ಮತ್ತು ವಿದೇಶಿ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತ ಬಂದಿದೆ. ದೇಶದ ಪ್ರಮುಖ ಕಂಪನಿಗಳಲ್ಲಿ 2014ರಲ್ಲಿ 1.56 ಲಕ್ಷ ಕೋಟಿ ರೂ. ಇದ್ದ ಅದರ ಹೂಡಿಕೆ ಮೌಲ್ಯ ಈಗ 15.6 ಲಕ್ಷ ಕೋಟಿ ರೂ. ಆಗಿದ್ದು, 10 ಪಟ್ಟು ಬೆಳೆದಿದೆ. ‘ಪ್ರಸ್ತುತ ನೀತಿ, ಕಾಯ್ದೆ, ನಿಬಂಧನೆಗಳು ಮತ್ತು ನಿಯಮಗಳನ್ವಯ ಎಲ್ಲ ಪಾಲುದಾರರ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ಈ ಹೂಡಿಕೆ ಮಾಡಲಾಗಿದೆ’ ಎಂದು ಎಲ್​ಐಸಿ ವಿವರಿಸಿದೆ.

‘ವಾಷಿಂಗ್ಟನ್ ಪೋಸ್ಟ್ ವರದಿಯು ಪೂರ್ವಾಗ್ರಹಪೀಡಿತವಾಗಿದೆ. ಭಾರತದ ಹಣಕಾಸು ಕ್ಷೇತ್ರಕ್ಕೆ ಕಪ್ಪು ಮಸಿ ಬಳಿಯುವ ಉದ್ದೇಶ ಹೊಂದಿದೆ.

ಎಲ್​ಐಸಿಯು ಸಣ್ಣ ಸಂಸ್ಥೆಯಲ್ಲ. ಒಂದೇ ಉದ್ದೇಶ ಇಟ್ಟುಕೊಂಡು ನಡೆಯುವ ಕಂಪನಿಯೂ ಅಲ್ಲ. 41 ಲಕ್ಷ ಕೋಟಿ ರೂ.ಗೂ ಹೆಚ್ಚು ಸ್ವತ್ತು ಹೊಂದಿರುವ ಭಾರತದ ಅತಿ ದೊಡ್ಡ ಸಾಂಸ್ಥಿಕ ಹೂಡಿಕೆದಾರ ಸಂಸ್ಥೆ ಇದು. 351 ಪಬ್ಲಿಕ್ ಲಿಸ್ಟೆಡ್ ಷೇರುಗಳೂ ಸೇರಿದಂತೆ ನೂರಾರು ಕಂಪನಿಗಳಲ್ಲಿ ಹೂಡಿಕೆ ಮಾಡುತ್ತದೆ. ಸರ್ಕಾರಿ ಬಾಂಡ್​ಗಳು ಮತ್ತು ಕಾರ್ಪೆರೇಟ್ ದೇಣಿಗೆಯನ್ನೂ ದೊಡ್ಡ ಪ್ರಮಾಣದಲ್ಲಿ ಹೊಂದಿದೆ. ಅದರ ಪೋರ್ಟ್​ಫೋಲಿಯೋ ಅತ್ಯಂತ ವೈವಿಧ್ಯಮಯವಾಗಿದೆ. ಅಮೆರಿಕದ ಪ್ರಸಿದ್ಧ ಕಂಪನಿಗಳಾದ ಬ್ಲಾ್ಯಕ್​ರಾಕ್, ಅಪೊಲೊ, ಜಪಾನ್​ನ ಅತಿದೊಡ್ಡ ಬ್ಯಾಂಕುಗಳಾದ ಮಿಜುಹೋ, ಎಂಯುಎಫ್​ಜಿ, ಜರ್ಮನಿಯ ಎರಡನೇ ಅತಿದೊಡ್ಡ ಬ್ಯಾಂಕ್ ಡಿಝುಡ್ ಸೇರಿದಂತೆ ಅನೇಕ ಜಾಗತಿಕ ಹೂಡಿಕೆದಾರರು ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿದ್ದಾರೆ. ಅದೊಂದು ವಿಶ್ವಾಸಾರ್ಹ ಕಂಪನಿಯಾದ ಕಾರಣವೇ ನಾವೂ ಹೂಡಿಕೆ ಮಾಡಿದ್ದೇವೆ’ ಎಂದು ಎಲ್​ಐಸಿ ತಿಳಿಸಿದೆ.

ಎಲ್​ಐಸಿ ಅದಾನಿ ಷೇರುಗಳಲ್ಲಿ ಶೇ. 4 (60,000 ಕೋಟಿ ರೂ.), ರಿಲಯನ್ಸ್ ನಲ್ಲಿ ಶೇ. 6.94 (1.33 ಲಕ್ಷ ಕೋಟಿ ರೂ.), ಐಟಿಸಿ ಲಿಮಿಟೆಡ್​ನಲ್ಲಿ ಶೇ. 15.86 (82,800 ಕೋಟಿ ರೂ.), ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಶೇ. 4.89 (64,725 ಕೋಟಿ ರೂ.), ಎಸ್​ಬಿಐನಲ್ಲಿ ಶೇ. 9.59 (79,361 ಕೋಟಿ ರೂ.), ಟಿಸಿಎಸ್​ನಲ್ಲಿ ಶೇ. 5.02 (5.7 ಲಕ್ಷ ಕೋಟಿ ರೂ.) ಹೂಡಿಕೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.