ಶಿಕಾರಿಪುರ: ಗುರು ಪರಂಪರೆ ಅದ್ಭುತವಾದದ್ದು. ಧರ್ಮೋತ್ಥಾನ, ಸಮಾಜದ ಉದ್ಧಾರವೇ ಗುರುಗಳ ಕಾಯಕ. ಗುರುವು ಸಮರ್ಪಣೆಯ ಸಂಕೇತ, ಸಾಧನೆಯ ಸಾಕ್ಷಿ ಸ್ವರೂಪ ಎಂದು ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಸಮೀಪದ ಕಾಳೇನಹಳ್ಳಿ ಶಿವಯೋಗಾಶ್ರಮದಲ್ಲಿ ಲಿಂಗೈಕ್ಯ ಶ್ರೀ ರುದ್ರಮುನಿ ಸ್ವಾಮೀಜಿ ಅವರ ಸ್ಮರಣೋತ್ಸವ ನಿಮಿತ್ತ ನೂತನ ಅನುಷ್ಠಾನ ಮಂದಿರ ಉದ್ಘಾಟಿಸಿದ ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಗುರು ಎಂದರೆ ಗುರಿ ಎಂದರ್ಥ. ಲಿಂಗೈಕ್ಯ ರುದ್ರಮುನಿ ಶಿವಯೋಗಿ ಅವರಂತಹ ಗುರುವನ್ನು ಪಡೆದ ಭಕ್ತರೇ ಧನ್ಯರು ಎಂದು ತಿಳಿಸಿದರು.
ಶಿವಯೋಗ ಮಂದಿರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಟುಗಳು ಬಿರುಬೇಸಿಗೆಯಲ್ಲಿ ತಂಗಲು, ಧರ್ಮೋತ್ಥಾನ ಕಾರ್ಯಗಳಿಗೆ ಪೂರಕವಾಗಿ ಹಾನಗಲ್‌ನ ಗುರು ಕುಮಾರಸ್ವಾಮಿಗಳು ದೂರದೃಷ್ಟಿಯಿಂದ ಕಾಳೇನಹಳ್ಳಿಯ ವೃಷಭಾವತಿ, ಕುಮದ್ವತಿ ನದಿ ಸಂಗಮದಲ್ಲಿ ಶಿವಯೋಗಾಶ್ರಮ ಸ್ಥಾಪಿಸಿದರು. ಅನುಭಾವಿಗಳು, ಸಹಜ ಶಿವಯೋಗಾನುಷ್ಠಾನದ ಮಹಾನುಭಾವ, ತಪೋನಿರತರು ಆದ ಲಿಂಗೈಕ್ಯ ಶ್ರೀ ರುದ್ರಮುನಿ ಸ್ವಾಮೀಜಿ ಅವರನ್ನು ಇಲ್ಲಿಗೆ ನೇಮಕ ಮಾಡಿದ್ದರು. ಗುರುಗಳ ಅಣತಿಯಂತೆ ಈ ಭೂಮಿಯನ್ನು ರುದ್ರಮುನಿ ಶ್ರೀಗಳು ಪುಣ್ಯದ ಮಣ್ಣಾಗಿಸಿದರು ಎಂದರು.
ಭಸ್ಮ ತಯಾರಿಕೆ, ಧಾರ್ಮಿಕ ಚಿಂತನ-ಮಂಥನ ಕಾರ್ಯಕ್ರಮ, ನಾಡಿನೆಲ್ಲೆಡೆಯಿಂದ ಆಗಮಿಸಿದ ಅನುಷ್ಠಾನ ಮೂರ್ತಿಗಳಿಗೆ ಅನುವು ಮಾಡಿಕೊಡುವುದು. ಕೋಟಿಗಟ್ಟಲೆ ಶಿವಪಂಚಾಕ್ಷರಿ ಜಪಯಜ್ಞ ಮಾಡಿರುವುದು ಲಿಂಗೈಕ್ಯ ಶ್ರೀ ರುದ್ರಮುನಿ ಸ್ವಾಮೀಜಿ ಅವರ ಶ್ರೇಷ್ಠತೆಯನ್ನು ತೋರುತ್ತದೆ. ಅವರು ಕೃಷಿ ಮತ್ತು ಕಾಯಕ ಪ್ರೇಮಿಯಾಗಿದ್ದು, ಈ ಸ್ಥಳವನ್ನು ಶಿವಯೋಗ ಮಂದಿರವಾಗಿ ಮಾಡಿರುವುದು ಶಿವಬಲ ಎಂದು ಹೇಳಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಶಿಕಾರಿಪುರ ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡಿದ್ದು, ನೀರಾವರಿ ಯೋಜನೆಗಳು ತಾಲೂಕಿಗೆ ವರದಾನವಾಗಿವೆ. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ ಅವರು ತಂದೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಇನ್ನೂ ಹೆಚ್ಚು ಅಧಿಕಾರ ದೊರೆಯಲಿ ಎಂದು ಆಶಿಸಿದರು.
ಶಿವಯೋಗಾಶ್ರಮದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶಿಕಾರಿಪುರ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ, ತಿಪ್ಪಾಯಿಕೊಪ್ಪದ ಶ್ರೀ ಮಹಂತ ಸ್ವಾಮೀಜಿ ಉಪಸ್ಥಿತರಿದ್ದರು. ರಾಜ್ಯ ವೀರಶೈವ ಮಹಾಸಭಾದ ನಿರ್ದೇಶಕ ಎನ್.ವಿ.ಈರೇಶ್, ತಾಲೂಕು ಅಧ್ಯಕ್ಷ ಸುಧೀರ್, ಕುಮಾರಸ್ವಾಮಿ ಹಿರೇಮಠ, ಸುನಂದಮ್ಮ ಲೋನಿ, ಹರಿಹರದ ಮುರುಗೇಶಪ್ಪ, ಡಾ. ಶ್ರೀನಿವಾಸ್, ಕೆ.ಜಿ.ರುದ್ರಪ್ಪಯ್ಯ, ಕಾಳೇನಹಳ್ಳಿ, ಕಪ್ಪನಹಳ್ಳಿಯ ಗ್ರಾಮಸ್ಥರು, ಭಕ್ತರು ಹಾಜರಿದ್ದರು.
ಯುಗಪುರುಷ ಲಿಂಗೈಕ್ಯ ಸಿದ್ದಗಂಗಾ ಮಠದ ಶ್ರೀಗಳು ಕಾಯಕ, ದಾಸೋಹ, ಅರಿವು, ಅಕ್ಷರಗಳ ಸಂದೇಶದ ಜತೆ ನುಡಿದಂತೆ ನಡೆದು ತೋರಿಸಿದ ಜಗದ್ವಿಖ್ಯಾತ ಮಹಾಪುರುಷರು ಎಂದು ಶಿವಯೋಗಾಶ್ರಮದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಸಿದ್ದಗಂಗಾ ಮಠದಲ್ಲಿ ಸಾವಿರಾರು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಅಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ಉತ್ತಮ ಬದುಕು ರೂಪಿಸಿಕೊಳ್ಳುತ್ತಿದ್ದಾರೆ. ಭಾವ-ಅನುಭಾವಗಳ ಪ್ರತಿರೂಪ ಆಗಿದ್ದ ಪೂಜ್ಯರು ಶರಣ ತತ್ವದ ಸಂಕೇತವಾಗಿದ್ದರು. ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಸೇವೆ ಮಾಡಿದರು. ಉಸಿರಿರುವವರೆಗೆ ಸಮಾಜಕ್ಕಾಗಿ ಸೇವೆ ಸಲ್ಲಿಸಿ ಬದುಕು ಸಾರ್ಥಕ ಮಾಡಿಕೊಂಡರು ಎಂದು ತಿಳಿಸಿದರು. ಇಂದಿನ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಸಿದ್ದಗಂಗಾ ಮಠವನ್ನು ಮುನ್ನಡೆಸುತ್ತಿದ್ದು, ಜನಪರ ಕಾಳಜಿಯೇ ಪೂಜ್ಯರ ಮಂತ್ರವಾಗಿದೆ ಎಂದರು.
ಜಗತ್ತು ಅಚ್ಚರಿ ಪಡುವಂತೆ ನಿಸ್ವಾರ್ಥದಿಂದ ಶಿಕ್ಷಣ, ಅನ್ನ ದಾಸೋಹ ನೀಡುತ್ತಿರುವ ಕ್ಷೇತ್ರ ಸಿದ್ದಗಂಗಾ ಮಠ. ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಶ್ರೀ ಮಠವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿದ್ದಾರೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. ಸದಾ ಸಮಾಜಮುಖಿ, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಭಕ್ತರನ್ನು ಹರಸಿ ಹಾರೈಸಿದ್ದಾರೆ. ಸಿದ್ದಗಂಗಾ ಶ್ರೀಗಳ ಆಗಮನದಿಂದ ಮನಸ್ಸುಗಳು ಪಾವನವಾಗಿವೆ ಎಂದು ತಿಳಿಸಿದರು. ಪ್ರತಿ ವಾರ ತಾಯಿಯ ಜತೆಯಲ್ಲಿ ಕಾಳೇನಹಳ್ಳಿ ಮಠಕ್ಕೆ ಕುಟುಂಬ ಸಮೇತರಾಗಿ ಬರುತ್ತಿದ್ದೇವು. ಲಿಂಗೈಕ್ಯ ರುದ್ರಮುನಿ ಶ್ರೀಗಳು ಎಂದರೆ ನನ್ನ ತಂದೆ, ಅಮ್ಮನಿಗೆ ವಿಶೇಷ ಗೌರವ. ನಮ್ಮ ರಾಜಕೀಯ ಏಳಿಗೆಗೆ ಶ್ರೀಗಳ ಆಶೀರ್ವಾದವೂ ಕಾರಣ. ಹಾನಗಲ್ ಕುಮಾರಸ್ವಾಮಿ, ಲಿಂಗೈಕ್ಯ ರುದ್ರಮುನಿ ಹಾಗೂ ರೇವಣಸಿದ್ದ ಸ್ವಾಮೀಜಿಗಳ ಆಶಯದಂತೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಶಿವಯೋಗಾಶ್ರಮವನ್ನು ಮುನ್ನಡೆಸುತ್ತಿದ್ದಾರೆ. ಅವರ ತಪಸ್ಸಿನ ಫಲ, ಸಂಕಲ್ಪದ ಫಲಕ್ಕೆ ಅಪಾರ ಶಕ್ತಿಯಿದೆ. ಶಿವಯೋಗಾಶ್ರಮ ಅಭಿವೃದ್ಧಿಯಾಗಿ ಜನಮನ ಸೆಳೆಯುತ್ತಿದೆ. ಈ ಮಣ್ಣಿಗೆ ಪೂಜ್ಯರು ತಪಸ್ಸಿನ ಧಾರೆ ಎರೆದಿದ್ದಾರೆ ಎಂದರು.
ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಶಿಕಾರಿಪುರಕ್ಕೆ ಆಗಮಿಸಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸ್ವಗೃಹದಲ್ಲಿ ಪೂಜಾ ಕಾರ್ಯಗಳನ್ನು ನಡೆಸಿದರು. ನಂತರ ಶಿವಯೋಗಾಶ್ರಮದಲ್ಲಿ ಲಿಂಗೈಕ್ಯ ಶ್ರೀ ರುದ್ರಮುನಿ ಸ್ವಾಮೀಜಿ, ಲಿಂಗೈಕ್ಯ ಶ್ರೀ ರೇವಣಸಿದ್ದ ಸ್ವಾಮೀಜಿ ಅವರ ಗದ್ದುಗೆ ದರ್ಶನ ಮಾಡಿದರು. ಶ್ರೀ ಮಠದ ಮುಂಭಾಗದಲ್ಲಿ ಸಿದ್ದಗಂಗಾ ಮಠದ ಶ್ರೀಗಳನ್ನು ಶಿವಯೋಗಾಶ್ರಮದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಮಾಲಾರ್ಪಣೆ ಮಾಡಿ ನಮಿಸಿ ಬರಮಾಡಿಕೊಂಡರು.