ನ್ಯೂಸ್

ಜೂ.22ರಂದು ಸಿಂಧೂರ ವೀರರಿಗೆ ನಮನ

ಶಿವಮೊಗ್ಗ: ತುಂಗಾ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್‌ನಿಂದ ಸಲ್ಯೂಟ್ ಎಂಬ ವಿಶೇಷ ಕಾರ್ಯಕ್ರಮವನ್ನು ಜೂ.22ರಂದು ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಬಳ್ಳೆಕೆರೆ ಸಂತೋಷ್ ಹೇಳಿದರು.

ಸಿಂಧೂರ ವೀರರಿಗೊಂದು ನಮನ ಸಲ್ಲಿಸುವ ಕಾರ್ಯಕ್ರಮ ಇದಾಗಿದ್ದು, ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಭಾರತೀಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ನಿಷ್ಠಾವಂತ ಸೇನಾ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಸನ್ಮಾನಿಸಲಾಗುವುದು. ಜತೆಗೆ ಹುತಾತ್ಮರ ಕುಟುಂಬಕ್ಕೆ ಗೌರವ ಸಮರ್ಪಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಿರಿಯ ಪತ್ರಕರ್ತ ಅಜಿತ್ ಹನುಮಕ್ಕನವರ್ ದಿಕ್ಸೂಚಿ ಭಾಷಣ ಮಾಡುವರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಉದ್ಘಾಟಿಸುವರು. ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಬಿ.ಕೆ.ಸಂಗಮೇಶ್ವರ್, ಐಜಿಪಿ ಡಾ. ರವಿಕಾಂತೇಗೌಡ, ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಭಾಗವಹಿಸುವರು ಎಂದರು.

ಪ್ರಮುಖರಾದ ವಿನಯ್, ಉಮೇಶ್, ಮಲ್ಲಿಕಾರ್ಜುನ ಸ್ವಾಮಿ, ಪೃಥ್ವಿಗೌಡ, ಉಮಾ ಶಂಕರ್, ಗಿರಿರಾಜ್, ಅವಿನಾಶ್, ಧ್ರುವಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.