ನ್ಯೂಸ್

ಪೌರಕಾರ್ಮಿಕರ ಶ್ರಮಕ್ಕೆ ಸಲಾಂ…!

ಕೆ.ಎಸ್.ಪ್ರಣವ್‌ಕುಮಾರ್ ಚಿತ್ರದುರ್ಗ: ಸಂಭ್ರಮದ ಮೆರವಣಿಗೆ ಮುಂದೆ ಸಾಗುತ್ತಿದ್ದಂತೆ, ಹಿಂದೆ ಕಸ ಉತ್ಪತ್ತಿ ಆಗುತ್ತಿತ್ತು. ಬರೋಬ್ಬರಿ 40 ಟನ್ ಕಸ. ಪ್ಲಾಸ್ಟಿಕ್ ಪೇಪರ್, ಲೋಟ, ಚಪ್ಪಲಿ ಸೇರಿ ಎಲ್ಲೆಂದರಲ್ಲಿ ಬಿದ್ದಿದ್ದ ಕಸದ ರಾಶಿ ಕಂಡು ಸಂಘಟಕರು, ಜನರು ಕೂಡ ಹೌಹಾರಿದ್ದರು. ಆದರೆ, ಕತ್ತಲು ಸರಿದು ಬೆಳಕು ಹರಿಯುವ ವೇಳೆಗೆ ತನ್ನ ಸೌಂದರ್ಯವನ್ನು ಕೋಟೆನಾಡು ಮರಳಿ ಪಡೆದಿತ್ತು…

ಹೌದು, ವಿಶ್ವ ಹಿಂದು ಪರಿಷದ್, ಬಜರಂಗದಳ ಹಾಗೂ ಹಿಂದು ಮಹಾಗಣಪತಿ ಉತ್ಸವ ಸಮಿತಿಯಿಂದ ಭಾನುವಾರ ನಡೆದ ಹಿಂದು ಮಹಾಗಣಪತಿ ಬೃಹತ್ ಶೋಭಾಯಾತ್ರೆ ಸಂದರ್ಭದಲ್ಲಿ ಬಿ.ಡಿ.ರಸ್ತೆಯ ಮಾರ್ಗದುದ್ದಕ್ಕೂ ಕಸದ ಗುಡ್ಡವೇ ನಿರ್ಮಾಣವಾಗಿತ್ತು.

ಮೆರವಣಿಗೆ ಸಾಗಿದ 4.5 ಕಿ.ಮೀ. ಪೈಕಿ 3 ಕಿಮೀ ವರೆಗೂ ತ್ಯಾಜ್ಯದ ರಾಶಿ ಬಿದ್ದಿತ್ತು. ಚಳ್ಳಕೆರೆ ಗೇಟ್‌ನಿಂದ ಕನಕ ವೃತ್ತದ ಮಾರ್ಗದುದ್ದಕ್ಕೂ ಕಸ ಕಣ್ಣಿಗೆ ರಾಚುತ್ತಿತ್ತು. ಪ್ರತಿ ವರ್ಷ ಶೋಭಾಯಾತ್ರೆ ಶನಿವಾರ ಆಯೋಜಿಸಲಾಗುತ್ತಿತ್ತು. ನಗರ ಸ್ವಚ್ಛತೆ ಕೈಗೊಳ್ಳಲು ಭಾನುವಾರ ರಜೆ ದಿನ ಸಹಕಾರವಾಗುತ್ತಿತ್ತು. ಆದರೆ, ಈ ಬಾರಿ ಭಾನುವಾರ ಶೋಭಾಯಾತ್ರೆ ನಡೆದಿದ್ದು ಪೌರಕಾರ್ಮಿಕರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿತ್ತು. ಸೋಮವಾರದ ಸಂತೆ ಜತೆಗೆ ಶಾಲಾ-ಕಾಲೇಜ್, ಕಚೇರಿಗಳಿಗೆ ಜನರ ಓಡಾಟ, ವಾಹನಗಳ ದಟ್ಟನೆ ಆಗಲಿದ್ದು, ಕಸದ ರಾಶಿ ತೆರವುಗೊಳಿಸುವುದು ಸವಾಲಾಗಿತ್ತು.

ರಾತ್ರಿ 10 ಗಂಟೆಗೆ ಗಣಪತಿ ಚಂದ್ರವಳ್ಳಿ ತಲುಪಿ ವಿಸರ್ಜನೆಗೊಳ್ಳುತ್ತಿದ್ದಂತೆ ಪೊಲೀಸ್ ಪಡೆ ನಿರಾಳರಾಗುತ್ತಿದ್ದಂತೆ, ಇತ್ತ ಪೌರಕಾರ್ಮಿಕರು ಸೋಮವಾರ ಮುಂಜಾನೆ 4 ಗಂಟೆಗೆ ಸಕಲ ಸಿದ್ಧತೆಗಳೊಂದಿಗೆ ರಸ್ತೆಗಿಳಿದು, ಸೇನಾನಿಗಳ ರೀತಿ ಕತ್ತಲು ಸರಿದು ಬೆಳಕು ಹರಿಯುವ ವೇಳೆಗೆ ಸ್ವಚ್ಛತೆ ಕಾರ್ಯ ಬಹುತೇಕ ಪೂರ್ಣಗೊಳಿಸಿದ್ದರು. ಲಘು ಉಪಾಹಾರಕ್ಕೆ ಸ್ವಲ್ಪ ಬಿಡುವು ಮಾಡಿಕೊಂಡ ಬಳಿಕ ಮತ್ತೆ ಅಲ್ಲಲ್ಲಿ ಉಳಿದಿದ್ದ ಅಲ್ಪಸ್ವಲ್ಪ ಕಸವನ್ನು ಸ್ವಚ್ಛಗೊಳಿಸಿ ಕೋಟೆನಾಡು ಸುಂದರತೆಗೆ ಶ್ರಮಿಸಿದರು.

ಜೈನಧಾಮ, ಬಾಲಕರ ಸರ್ಕಾರಿ ಪಪೂ ಕಾಲೇಜು, ಮದಕರಿನಾಯಕ, ಅಂಬೇಡ್ಕರ್, ಗಾಂಧಿ, ಸಂಗೊಳ್ಳಿರಾಯಣ್ಣ, ಕನಕ ವೃತ್ತ, ಹೊಳಲ್ಕೆರೆ ರಸ್ತೆ ಹೀಗೆ ಎಂಟತ್ತು ಭಾಗಗಳಾಗಿ ತಂಡಗಳನ್ನು ವಿಂಗಡಿಸಲಾಗಿತ್ತು.

ಒಂದೊಂದು ತಂಡದಲ್ಲಿ 8, 10, 15 ಮಂದಿಯಂತೆ 100 ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು. ಮಹಿಳೆಯರು ಕಸ ಗುಡಿಸಿ ಒಂದೆಡೆ ಶೇಖರಿಸುತ್ತಿದ್ದರೆ, ಪುರುಷರು 25 ಕೆ.ಜಿ, 50 ಕೆ.ಜಿ ಚೀಲಗಳಲ್ಲಿ ತುಂಬಿ ಟಿಪ್ಪರ್, ಟ್ರ್ಯಾಕ್ಟರ್, ಟಾಟಾ ಏಸ್ ವಾಹನಗಳಲ್ಲಿ ಕಸ ಏರಿಸುತ್ತಿದ್ದರು.

ಪ್ರತಿ ವಾಹನದಲ್ಲೂ ಒಮ್ಮೆಗೆ 2 ಟನ್‌ನಂತೆ ರಸ್ತೆಗೆ ಇಳಿದಿದ್ದ 10 ವಾಹನಗಳು ತಲಾ ಎರಡು ಬಾರಿ ಕಸ ಸಂಗ್ರಹಿಸಿದವು. ಬೆಳಗ್ಗೆ 10ರ ವೇಳೆಗೆ 40 ಟನ್ ಕಸ ಸಂಗ್ರಹಿಸಲಾಯಿತು.

ಕೇವಲ 6 ಗಂಟೆಯೊಳಗೆ ಪೌರಕಾರ್ಮಿಕರು ನಗರ ಸ್ವಚ್ಛಗೊಳಿಸಿದ್ದರಿಂದ ವಾಯುವಿಹಾರ, ಹಣ್ಣು, ತರಕಾರಿ, ಸೊಪ್ಪು ಖರೀದಿಗೆ ಬಂದಿದ್ದ ನಾಗರಿಕರು, ಪೌರಕಾರ್ಮಿಕರ ಕಾರ್ಯಕ್ಕೆ ಮೆಚ್ಚುಗೆ ಮೂಲಕ ಸಲಾಂ ವ್ಯಕ್ತಪಡಿಸುತ್ತಿದ್ದು ಸಾಮಾನ್ಯವಾಗಿತ್ತು.

ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿದ್ದ ಕೆಲವರು ವಾಹನ ನಿಲ್ಲಿಸಿ, ಪೌರಕಾರ್ಮಿಕರತ್ತ ಕೈಬೀಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದ ದೃಶ್ಯಗಳು ಕಂಡು ಬಂದಿತು.

ನಗರಸಭೆ ಪೌರಾಯುಕ್ತೆ ರೇಣುಕಾ, ಪರಿಸರ ಇಂಜಿನಿಯರ್ ಜಾಫರ್, ಆರೋಗ್ಯ ನಿರೀಕ್ಷಕರಾದ ಸರಳಾ, ಭಾರತಿ, ನಿರ್ಮಲಾ, ನಾಗರಾಜ್, ಬಾಬುರೆಡ್ಡಿ, ಬಸವರಾಜ್, ನೈರ್ಮಲ್ಯ ಸೂಪರ್ ವೈಸರ್ಸ್‌, ವಾಹನ ಚಾಲಕರು, ನಗರಸಭೆ ಸಿಬ್ಬಂದಿ ಇದ್ದರು.

ಪರಿಸರ ಕಾಳಜಿ ಮೆರೆದರು: ವಿವಿಧ ಸಮಾಜ, ಸಂಘ-ಸಂಸ್ಥೆಗಳು, ವರ್ತಕರು, ದಾನಿಗಳು ಮಾರ್ಗ ಮಧ್ಯೆ ಪ್ರಸಾದ, ತಂಪು ಪಾನೀಯ ವಿತರಿಸಲು ಈ ಬಾರಿಯೂ ಹೆಚ್ಚಾಗಿ ಅಡಿಕೆ ತಟ್ಟೆ, ಪೇಪರ್ ಪ್ಲೇಟ್ ಮತ್ತು ಕಪ್‌ಗಳನ್ನು ಬಳಸಿದ್ದು, ಪರಿಸರ ಕಾಳಜಿಗೆ ಸಾಕ್ಷಿಯಾಗಿತ್ತು. ಈ ಪೈಕಿ 35 ಟನ್ ಕಸ ಸಂಗ್ರಹವಾಯಿತು. ದಾರಿಯುದ್ದಕ್ಕೂ ಅಲ್ಲಲ್ಲಿ ಬಿದ್ದಿದ್ದ 4 ಟನ್ ಚಪ್ಪಲಿಗಳನ್ನು ಪ್ರತ್ಯೇಕಿಸಲಾಯಿತು.

ಸಂಪರ್ಕ ಕಲ್ಪಿಸಿದ ಬೆಸ್ಕಾಂ ನೌಕರರು: ಹಿಂದು ಮಹಾಗಣಪತಿ ಮೂರ್ತಿ ಬೃಹದಾಕಾರದಲ್ಲಿದ್ದ ಹಾಗೂ ಜನಸಾಗರವೇ ಸೇರಿದ್ದ ಕಾರಣ ವಿದ್ಯುತ್ ತಂತಿಗಳು ತಗುಲಿ, ಅನಾಹುತ ಉಂಟಾಗಬಹುದು ಎಂಬ ಮುಂಜಾಗ್ರತಾ ಕ್ರಮವಾಗಿ ಬಿ.ಡಿ.ರಸ್ತೆಯ ಹಲವೆಡೆ ತಂತಿಗಳ ಸಂಪರ್ಕ ಕಡಿತಗೊಳಿಸಲಾಗಿತ್ತು. ಸೋಮವಾರ ರಸ್ತೆಗಿಳಿದ ಬೆಸ್ಕಾಂ ಸಿಬ್ಬಂದಿ ಬೆಳಗ್ಗೆ 6ರಿಂದ 10ರವರೆಗೂ ಕಂಬಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ನಿರತರಾದರು.

ಪ್ಲಾಸ್ಟಿಕ್ ಬಾಟಲಿಗಳು ಕಣ್ಮರೆ: ಒಂದು ಟನ್‌ಗಿಂತಲೂ ಹೆಚ್ಚು ಪ್ಲಾಸ್ಟಿಕ್ ನೀರಿನ ಬಾಟಲಿಗಳು ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿದ್ದವು. ಆದರೆ, ಭಾನುವಾರ ರಾತ್ರಿಯೇ ಚಿಂದಿ ಆಯುವವರು ಸಂಪೂರ್ಣ ಸಂಗ್ರಹಿಸಿದ್ದ ಪರಿಣಾಮ ಪೌರಕಾರ್ಮಿಕರಿಗೆ ಒಂದೂ ಪ್ಲಾಸ್ಟಿಕ್ ಬಾಟಲಿ ಸಿಗಲಿಲ್ಲ.