ನ್ಯೂಸ್

ವೀರ ಯೋಧರಿಗೆ ನಮನ; ಕಾರ್ಗಿಲ್​ ಅಭಿವೃದ್ಧಿಯ ಹೊಳಪು

ಕಾರ್ಗಿಲ್ ವಿಜಯ ದಿನಕ್ಕೆ 26ನೇ ವರ್ಷದ ಸಂಭ್ರಮ. ಭಾರತೀಯ ಸೇನೆಯ ಶೌರ್ಯ, ಸಾಹಸಗಾಥೆ ಎಂದೆಂದಿಗೂ ಪ್ರೇರಣಾದಾಯಿ. ಭಾರತದ ವೀರಯೋಧರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವ ಜತೆಗೆ ಪಾಕಿಸ್ತಾನದ ವಿರುದ್ಧ ಭಾರತ ವಿಜಯ ಸಾಧಿಸಿದ ಸಂಭ್ರಮವನ್ನು ಆಚರಿಸುವ ಕ್ಷಣವೂ ಹೌದು. ರಾಷ್ಟ್ರಭಕ್ತಿ, ಭಾವೈಕ್ಯತೆಯನ್ನು ಜಾಗೃತಗೊಳಿಸಿದ ಕಾರ್ಗಿಲ್ ಯುದ್ಧ ‘ದೇಶ ಮೊದಲು’ ಎಂಬ ಉದಾತ್ತ ಭಾವಕ್ಕೆ ಜೀವತುಂಬಿತು. ಇಂಥ ಕಾರ್ಗಿಲ್ ಪ್ರದೇಶ ಈಗ ಸಾಕಷ್ಟು ಬದಲಾಗಿದೆ. ಅಭಿವೃದ್ಧಿಯ ಹೊಳಪು ಕಾಣುತ್ತಿದೆ. ಕೆಲ ಸಮಸ್ಯೆಗಳೂ ಇವೆ. ಈ ಕುರಿತಾದ ಮಾಹಿತಿ ಇಲ್ಲಿದೆ.

ಸಮಸ್ಯೆಗಳಿಂದ ಪರಿಹಾರದತ್ತ

ಜಮ್ಮು-ಕಾಶ್ಮೀರದ ಉತ್ತರಭಾಗಕ್ಕಿರುವ 14 ಸಾವಿರ ಚದರ ಕಿ.ಮೀ. ವ್ಯಾಪ್ತಿಯ ಚಿಕ್ಕ ಜಿಲ್ಲೆ ಕಾರ್ಗಿಲ್ ರಾಜಧಾನಿ ಶ್ರೀನಗರದಿಂದ 205 ಕಿ.ಮೀ. ದೂರದಲ್ಲಿದೆ. ಲಡಾಖ್ ವ್ಯಾಪ್ತಿಯಲ್ಲಿ ಇರುವುದೇ ಎರಡು ಜಿಲ್ಲೆಗಳು ಕಾರ್ಗಿಲ್ ಮತ್ತು ಲೇಹ್. ಲೇಹ್ ಮತ್ತು ಶ್ರೀನಗರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 1 ಕಾರ್ಗಿಲ್ ಮೂಲಕ ಹಾದುಹೋಗುತ್ತದೆ. ಈ ಪ್ರದೇಶದಲ್ಲಿ ಇರುವ ಏಕೈಕ ಹೆದ್ದಾರಿ ಇದಾಗಿದೆ. ಅಲ್ಲದೆ, ವಿಶ್ವದ ಅತ್ಯಂತ ಎತ್ತರದಲ್ಲಿರುವ ಯುದ್ಧಭೂಮಿ ಸಿಯಾಚಿನ್​ಗೂ ಈ ಹೆದ್ದಾರಿ ಸಂಪರ್ಕ ಕಲ್ಪಿಸುತ್ತದೆ. ಆದರೆ, ಚಳಿಗಾಲ ಆರಂಭವಾಯಿತು ಎಂದರೆ ಕಾರ್ಗಿಲ್ ಭೀಕರ ಹಿಮಪಾತದಿಂದ ಹೊರಜಗತ್ತಿನೊಡನೆ ಸಂಪರ್ಕ ಕಡಿದುಕೊಳ್ಳುತ್ತದೆ. ಆರು ತಿಂಗಳು ಹಿಮಾವೃತ್ತವಾಗುವ ಈ ಪ್ರದೇಶದಲ್ಲಿ ವಾಸಿಸುವವರು ಕಾರಾಗೃಹದಲ್ಲಿದ್ದಂತೆ! ಚಳಿಗಾಲದಲ್ಲಿ ಝೋಜಿಲಾ ಕಣಿವೆ ರಸ್ತೆ ಭಾಗ ಸಂಪೂರ್ಣ ಹಿಮಾವೃತ್ತವಾಗಿರುತ್ತದೆ.

ಹಿಮಾಲಯದ ತಪ್ಪಲಲ್ಲಿ ಇರುವ ಈ ಜಿಲ್ಲೆ 1979ರಲ್ಲಿ ರಚನೆಯಾಗಿದ್ದು. ಇದಕ್ಕೂ ಮೊದಲು ಇದು ಲಡಾಖ್ ಜಿಲ್ಲೆಯ ಭಾಗವಾಗಿತ್ತು. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧ ಈ ಜಿಲ್ಲೆಯ ಹೆಸರನ್ನು ಪ್ರವರ್ಧಮಾನಕ್ಕೆ ತಂದಿದೆ. ಯುದ್ಧ ಭೂಮಿಯಾಗಿ ಗುರುತಿಸಲ್ಪಟ್ಟಿರುವ ಕಾರ್ಗಿಲ್ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇಲ್ಲಿನ ಜನರು ಅಗತ್ಯ ಸೌಲಭ್ಯಗಳಿಂದಲೇ ವಂಚಿತರಾಗಿದ್ದಾರೆ. ಈ ಪ್ರದೇಶ, ಭೌಗೋಳಿಕ, ಹವಾಮಾನ ಹೀಗೆ ಯಾವುದೇ ವಿಚಾರ ತೆಗೆದುಕೊಂಡರೂ ಎಲ್ಲವೂ ಇಲ್ಲಿ ಅತಿಯಾಗೇ ಇದೆ. ಇವುಗಳು ಕಾರ್ಗಿಲ್ ಜನರ ಜೀವನದ ಮೇಲೆ ಹಿಡಿತ ಸಾಧಿಸಿವೆ. ಬಾಲ್ಟಿಸ್, ಪುರಿಗ್ಪಾಸ್, ದಾರ್ಡ್ಸ್ ಮತ್ತು ಬ್ರೋಕ್ಪಾಸ್ ಮೊದಲಾದ ಸಾಂಪ್ರದಾಯಿಕ ಜನರ ಪಂಗಡ, ಪ್ರಕೃತಿಯ ವಿಕೋಪಗಳನ್ನು ಎದುರಿಸಿಕೊಂಡು ಇಲ್ಲಿ ನೆಲೆಸಿವೆ. ಇದಲ್ಲದೆ, ಇಲ್ಲಿರುವ ಜನರಲ್ಲಿ ಶಿಯಾ ಮುಸ್ಲಿಂ ಜನಾಂಗದವರೇ ಹೆಚ್ಚು. (ಇಲ್ಲಿನ ಒಟ್ಟು ಜನಸಂಖ್ಯೆ 1.50 ಲಕ್ಷದ ಆಸುಪಾಸು ) ಎರಡನೇ ಸ್ಥಾನದಲ್ಲಿ ಬೌದ್ಧರಿದ್ದಾರೆ.

ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಇಲ್ಲಿನ ಜನರ ಪ್ರಮುಖ ಉದ್ಯೋಗ. ಸರ್ಕಾರಿ ಉದ್ಯೋಗ, ವಾಣಿಜ್ಯ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಕೆಲವರಷ್ಟೇ ತೊಡಗಿಸಿಕೊಂಡಿದ್ದಾರೆ. ಚಳಿಗಾಲ ಬಂತೆಂದರೆ, ಸ್ಥಳೀಯರ ಪಾಲಿಗೆ ಅದು ನಷ್ಟವೇ. ಶಿಕ್ಷಣ, ಆರೋಗ್ಯ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಹೆಚ್ಚೇಕೆ, ಸರ್ವಾಂಗೀಣ ಅಭಿವೃದ್ಧಿಗೆ ಇದು ಹೊಡೆತ ನೀಡುತ್ತದೆ. ಶ್ರೀನಗರ -ಲೇಹ್ ರಾಷ್ಟ್ರೀಯ ಹೆದ್ದಾರಿಯ ಪ್ರವಾಸೋದ್ಯಮ ಸ್ವತಂತ್ರವಾಗಿದ್ದರೂ, ಲೇಹ್ ಜಿಲ್ಲೆಯ ಪ್ರವಾಸೋದ್ಯಮದಿಂದಾಗಿ ಕಾರ್ಗಿಲ್​ನ ಅರ್ಥವ್ಯವಸ್ಥೆಗೆ ಒಂದಿಷ್ಟು ಹಣದ ಹರಿವು ಹರಿಯುತ್ತದೆ. ಚಳಿಗಾಲದ ಅವಧಿಯಲ್ಲಿ ಈ ಭಾಗ ಹಿಮಾವೃತ್ತವಾಗುವುದರಿಂದ, ಇದನ್ನು ವಿಂಟರ್ ಸ್ಪೋರ್ಟ್ಸ್​ಗೆ ಬಳಸಿಕೊಳ್ಳಬಹುದು. ವಿಂಟರ್ ಸ್ಪೋರ್ಟ್ಸ್ ಆಯೋಜಿಸಿ ವಿಶ್ವದ ಜನರ ಗಮನ ಸೆಳೆಯಬಹುದು. ಸಮಸ್ಯೆಯನ್ನೂ ಅಭಿವೃದ್ಧಿಯ ಅವಕಾಶವನ್ನಾಗಿ ಬದಲಾಯಿಸಿಕೊಳ್ಳಬಹುದು.

ಬೇಸಿಗೆ ಅವಧಿಯಲ್ಲಿ, ಇಲ್ಲಿನ ಸ್ಥಳೀಯರು, ಅಷ್ಟೇ ಅಲ್ಲ ಸ್ಥಳೀಯಾಡಳಿತ ಕೂಡ ಚಳಿಗಾಲದ ಮೂಲಸೌಕರ್ಯ ಕ್ರೋಢಿಕರಿಸುವಲ್ಲಿ ವ್ಯಸ್ತವಾಗಿರುತ್ತದೆ. ಇದಕ್ಕಾಗಿಯೇ ಬಹು ಸಮಯ ಕಳೆದುಹೋಗಿರುತ್ತದೆ. ಉಳಿದ ಮಹತ್ವದ ಅಭಿವೃದ್ಧಿಗಳ ಕಡೆಗೆ ಗಮನ ಹರಿಸುವುದಕ್ಕೆ ಆಗುವುದಿಲ್ಲ. ಚಳಿಗಾಲದ ಅವಧಿಯಲ್ಲಿ ದಾಸ್ತಾನು ಮಾಡಿದ ಆಹಾರವನ್ನಷ್ಟೇ ಸೇವಿಸಬೇಕಾದ ಅನಿವಾರ್ಯತೆ ಇಲ್ಲಿನ ಜನರಿಗೆ. ಅದೊಂದು ಕಾಲದಲ್ಲಿ, ದೇಶ ವಿಭಜನೆಗೂ ಮೊದಲು, ಕಾರ್ಗಿಲ್ ವಾಣಿಜ್ಯ ವ್ಯವಹಾರಗಳ ಕೇಂದ್ರಬಿಂದುವಾಗಿತ್ತು. ಭಾರತ-ಪಾಕ್ ನಡುವಿನ ಕೊಂಡಿಯೂ ಆಗಿತ್ತು. ಆದರೆ, ಇದೀಗ ಸಂಪೂರ್ಣ ಕಡೆಗಣಿಸಲ್ಪಟ್ಟಿದೆ. ಚಳಿಗಾಲದಲ್ಲಿ -55 ಡಿಗ್ರಿ ಸೆಲ್ಸಿಯಸ್​ವರೆಗೂ ಅಕ್ಷರಶಃ ಕೊರೆಯುವ ಚಳಿ, ನಿರಂತರವಾಗಿ ಸುರಿಯುವ ಹಿಮ ಜನಜೀವನವನ್ನು ಸ್ತಬ್ಧಗೊಳಿಸುತ್ತದೆ. ಇಂಥ ಕ್ಲಿಷ್ಟಕರ ಸಂದರ್ಭದಲ್ಲೂ ರಸ್ತೆ ಮೇಲಿನ ಹಿಮವನ್ನು ಬದಿಗೆ ಸರಿಸಿ, ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಪ್ರಯತ್ನ ನಡೆಯುತ್ತಿರುವುದು ಗಮನಾರ್ಹ. ಬೇಸಿಗೆಯಲ್ಲಿ 35 ಡಿಗ್ರಿ ಸೆಲ್ಸಿಯಸ್​ವರೆಗೆ ತಾಪಮಾನವಿರುತ್ತದೆ.

ಅಭಿವೃದ್ಧಿ ಮಂಡಳಿ

ಲಡಾಖ್​ನ ಗುಡ್ಡಗಾಡು ಪ್ರದೇಶ ಅಭಿವೃದ್ಧಿ ಸ್ವಾಯತ್ತ ಮಂಡಳಿಯು (ಎಲ್​ಎಎಚ್​ಡಿಸಿ-ಕಾರ್ಗಿಲ್) ಕಾರ್ಗಿಲ್ ಜಿಲ್ಲೆಯಲ್ಲಿ 2003ರ ಜುಲೈನಲ್ಲಿ ಕಾರ್ಯಾರಂಭ ಮಾಡಿದೆ. ಈ ಅಭಿವೃದ್ಧಿ ಮಂಡಳಿಯು 30 ಕೌನ್ಸಿಲರ್​ಗಳನ್ನು ಹೊಂದಿದ್ದು, ಅದರಲ್ಲಿ 26 ಕೌನ್ಸಿಲರ್​ಗಳನ್ನು ಚುನಾಯಿಸಲಾಗುತ್ತದೆ ಮತ್ತು ಉಳಿದ 4 ಜನರನ್ನು ನಾಮನಿರ್ದೇಶನ ಮಾಡಲಾಗುತ್ತದೆ. ಕಾರ್ಗಿಲ್ ಜಿಲ್ಲೆ ಒಂಬತ್ತು ಆಡಳಿತಾತ್ಮಕ ಬ್ಲಾಕ್​ಗಳನ್ನು ಒಳಗೊಂಡಿದೆ.

ಅನುದಾನ ಹೆಚ್ಚಳ

ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ಲಡಾಖ್ ಬಜೆಟ್​ನ್ನು 1,100 ಕೋಟಿ ರೂ.ಗಳಿಂದ 6,000 ಕೋಟಿ ರೂ.ಗಳಿಗೆ ಹೆಚ್ಚಿಸಿದೆ. ಈ ಹಣವನ್ನು ಲಡಾಖ್ ಜನರ ಅಭಿವೃದ್ಧಿಗೆ ಮತ್ತು ಇಲ್ಲಿನ ಸೌಲಭ್ಯಗಳನ್ನು ಹೆಚ್ಚಿಸಲು ಬಳಸಲಾಗುತ್ತಿದೆ. ರಸ್ತೆಗಳು, ನೀರು, ಶಿಕ್ಷಣ, ವಿದ್ಯುತ್ ಸರಬರಾಜು ಮತ್ತು ಉದ್ಯೋಗದ ವಿಷಯದಲ್ಲಿ ಲಡಾಖ್ ಬದಲಾಗುತ್ತಿದೆ. ಕಾರ್ಗಿಲ್ ಸೇರಿದಂತೆ ಲಡಾಖ್ ಪ್ರದೇಶವನ್ನು 4 ಜಿ ನೆಟ್​ವರ್ಕ್​ನೊಂದಿಗೆ ಸಂಪರ್ಕಿಸುವ ಕೆಲಸವೂ ನಡೆಯುತ್ತಿದೆ.

ಪ್ರವಾಸೋದ್ಯಮಕ್ಕೆ ಅಚ್ಛೇ ದಿನ್

ಹಿಂದಿನ ಕೆಲ ವರ್ಷಗಳಲ್ಲಿ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಆಮೂಲಾಗ್ರವಾಗಿ ಬದಲಾವಣೆ ಕಂಡಿದೆ. ಹಿಮಾವೃತ ಪರ್ವತಗಳು, ಹಸಿರಿನ ಪರಿಸರ, ಪುರಾತನ ಮಠ-ಮಂದಿರಗಳು, ಮಸೀದಿಗಳು, ಬೌದ್ಧ ವಿಹಾರಗಳನ್ನು ನೋಡಲು ದೇಶ-ವಿದೇಶದ ಜನರು ಕಾರ್ಗಿಲ್ ಮತ್ತು ಲೇಹ್ ಜಿಲ್ಲೆಗಳಿಗೆ ಭೇಟಿ ನೀಡುತ್ತಾರೆ. ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ತಕ್ಕದಾಗಿ ಮೂಲಸೌಕರ್ಯಗಳೂ ವಿಕಾಸಗೊಂಡಿವೆ. ಮಾತ್ರವಲ್ಲ, ಇದರಿಂದ ಸ್ಥಳೀಯ ಆರ್ಥಿಕತೆಗೆ ಬಲ ಬಂದಿದೆ.

ಸೇನಾ ಸುಧಾರಣೆ

ಸೇನಾ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗಿದೆ. ಸುರಕ್ಷೆ, ಬೇಹುಗಾರಿಕೆ ಮಾಹಿತಿ, ಗಡಿ ರಕ್ಷಣೆ ಮತ್ತು ಸೇನೆಯ ಆಧುನೀಕರಣದ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅದರ ಫಲಿತಾಂಶ ಕಾರ್ಗಿಲ್ ಮತ್ತು ದ್ರಾಸ್ ಪ್ರದೇಶದಲ್ಲಿ ಕಂಡುಬರುತ್ತಿದೆ. ಕಾರ್ಗಿಲ್ ಯುದ್ಧದ ಬಳಿಕ ಸೇನಾಪಡೆಗಳನ್ನು ಮತ್ತಷ್ಟು ಬಲಪಡಿಸಲು 2019ರಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಹುದ್ದೆಯನ್ನು ಸೃಷ್ಟಿಸಲಾಗಿದೆ. ಸೇನಾ ಕಾರ್ಯತಂತ್ರವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಇದು ಸಹಕಾರಿಯಾಗಿದೆ. ರಾಷ್ಟ್ರೀಯ ಸುರಕ್ಷಾ ನೀತಿಯನ್ನೂ ಪುನರ್ ವಿಮಶಿಸಲಾಗಿದ್ದು, ಪಾರಂಪರಿಕ ಮತ್ತು ಆಕಸ್ಮಿಕ ಅಪಾಯಗಳನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯತಂತ್ರ ಹೆಣೆಯಲಾಗಿದೆ. ಸೇನಾ ಗಸ್ತು ಪ್ರದೇಶದಲ್ಲಿ ಸೈನಿಕರಿಗೆ ಮೂಲಸೌಕರ್ಯ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಅವಶ್ಯವಿದ್ದಲ್ಲಿ ರಸ್ತೆ, ಸುರಂಗ, ಹೆದ್ದಾರಿ ನಿರ್ಮಾಣ ಕಾರ್ಯಗಳು ಹಿಂದೆದಿಗಿಂತ ವೇಗವಾಗಿ ನಡೆಯುತ್ತಿವೆ.

ಏನೆಲ್ಲ ಬದಲಾವಣೆ?

1. ದೇಶದ ಗಡಿಯೊಳಗೆ ನುಗ್ಗಲು ಪಾಕಿಸ್ತಾನದ ಸೈನಿಕರು ಬಳಸಿದ್ದ ಕಳ್ಳಮಾರ್ಗಗಳನ್ನು ಗುರುತಿಸಿ, ಅವುಗಳಿಗೆ ಗ್ರಿಡ್​ಗಳನ್ನು ಅಳವಡಿಸಲಾಗಿದೆ.

2. 26 ವರ್ಷದ ಹಿಂದಿದ್ದ ಸೇನೆಗಿಂತ ಮೂರು ಪಟ್ಟು ಹೆಚ್ಚು ಸೇನೆಯನ್ನು ನಿಯೋಜಿಸಲಾಗಿದೆ.

3. ಗಡಿಗುಂಟ ಇರುವ ಸ್ಥಳಗಳು ಮತ್ತು ಕಣಿವೆ ಪ್ರದೇಶದ ಕೆಲವು ಸ್ಥಳಗಳ ನಡುವೆ ಸಂಪರ್ಕ ಏರ್ಪಡಿಸಲಾಗಿದೆ.

4. ಚಳಿಗಾಲದಲ್ಲಿ ಹಿಮಾವೃತ್ತವಾಗಿದ್ದರೂ ಪೋಸ್ಟ್​ಗಳು ಖಾಲಿ ಇರುವುದಿಲ್ಲ. ಎಲ್​ಒಸಿ ಹತ್ತಿರ ಪ್ರದೇಶದಲ್ಲಿ ಬಹಳಷ್ಟು ಹೆಲಿಪ್ಯಾಡ್​ಗಳನ್ನು ನಿರ್ವಿುಸಲಾಗಿದೆ.

5. ಹೊಸ ಯುದ್ಧಸಾಮಗ್ರಿ ಪಾಯಿಂಟ್​ಗಳನ್ನು ಸೇನೆ ನಿರ್ವಿುಸಿದೆ. ಜತೆಗೆ ಮೀಸಲು ಯುದ್ಧಸಾಮಗ್ರಿ ಪಾಯಿಂಟ್​ಗಳನ್ನು ಪರಿಷ್ಕರಿಸಲಾಗಿದೆ. ಈ ಎಲ್ಲ ಸ್ಥಳಗಳಲ್ಲಿ ಫಿರಂಗಿ ಬಂದೂಕುಗಳು ಲಭ್ಯ ಇರುವಂತೆ ನೋಡಿಕೊಳ್ಳಲಾಗುತ್ತಿದೆ.

6. ಕಾರ್ಗಿಲ್ ಯುದ್ಧದ ಬಳಿಕ ಕಾರ್ಗಿಲ್ ಪರಿಶೀಲನಾ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಗುರುತಿಸಿದ ಎಲ್ಲ ಸವಾಲುಗಳಿಗೆ ಕಾಲಾನುಕ್ರಮದಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ. ರಸ್ತೆ ಸಂಪರ್ಕ ಸೇರಿ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲಾಗಿದೆ. ಆಪ್ಟಿಕಲ್ ಫೈಬರ್ ಕೇಬಲ್ ಬಳಕೆಯಿಂದಾಗಿ ಈ ಹಿಂದೆಂದಿಗಿಂತಲೂ ಸಂವಹನ ಹೆಚ್ಚು ಪರಿಣಾಮಕಾರಿಯಾಗಿದೆ.

7. ಮಾನವರಹಿತ ಕಣ್ಗಾವಲು ವ್ಯವಸ್ಥೆಯನ್ನು ಬಳಸಿಕೊಳ್ಳಲಾಗುತ್ತಿದೆ. ಉಪಗ್ರಹಗಳ ಸೇವೆ ಪಡೆಯಲಾಗುತ್ತಿದೆ.

8. ಸ್ಥಳೀಯ ಸಾರ್ವಜನಿಕರ ಜತೆಗೆ ಹೆಚ್ಚು ಸೌಹಾರ್ದ ಸಂಬಂಧ ಕಾಪಾಡಿಕೊಳ್ಳಲಾಗುತ್ತಿದೆ.

9. 15 ವರ್ಷಗಳ ಹಿಂದೆ ಇಲ್ಲಿ ದೂರವಾಣಿ ಸಂಪರ್ಕವೇ ಇರಲಿಲ್ಲ. ಆದರೆ, ಈಗ ಮೊಬೈಲ್ ಫೋನ್, ಬ್ರಾಡ್​ಬ್ಯಾಂಡ್ ಸಂಪರ್ಕವೂ ಲಭ್ಯ ಇದೆ.

10. ಹೊಸ ಶಾಲೆಗಳು ನಿರ್ಮಾಣವಾಗುತ್ತಿವೆ, ಕಾಲೇಜ್​ಗಳು ಆರಂಭಗೊಂಡಿವೆ. ನೂತನ ಶೈಕ್ಷಣಿಕ ಸಂಸ್ಥೆಗಳು ತಲೆಎತ್ತಿವೆ.

11. ಜಿ-20 ಶೃಂಗಸಭೆಗೆ ಸಂಬಂಧಿಸಿದಂತೆ ಮಹತ್ವದ ಸಭೆಗಳು, ಶೃಂಗಗಳು ಜಮ್ಮು-ಕಾಶ್ಮೀರದಲ್ಲಿ ಆಯೋಜನೆಯಾದ ಬಳಿಕ ಇಲ್ಲಿನ ಬದಲಾವಣೆಯ ಸ್ಪಷ್ಟ ಚಿತ್ರಣ ಅಂತಾರಾಷ್ಟ್ರೀಯ ವಲಯಕ್ಕೂ ಮನದಟ್ಟಾಗಿದೆ. ಇಡೀ ಪ್ರದೇಶ ಅಭಿವೃದ್ಧಿಯತ್ತ ಮುಖ ಮಾಡಿರುವುದು ಹೂಡಿಕೆ ನಿಟ್ಟಿನಲ್ಲಿಯೂ ಪ್ರಾಮುಖ್ಯ ಪಡೆದಿದೆ.

ದೇಶಕ್ಕಾಗಿ ಮಾಡಿದ ತ್ಯಾಗಗಳು ಅಮರ ಎಂಬುದನ್ನು ಕಾರ್ಗಿಲ್ ವಿಜಯ್ ದಿವಸ್ ನಮಗೆ ನೆನಪಿಸುತ್ತದೆ. ದಿನಗಳು, ತಿಂಗಳುಗಳು, ವರ್ಷಗಳು, ದಶಕಗಳು, ಶತಮಾನಗಳು ಕಳೆದು, ಋತುಗಳು ಬದಲಾಗುತ್ತವೆ, ಆದರೆ ರಾಷ್ಟ್ರದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸುವವರ ಹೆಸರುಗಳು ಅಳಿಸಲಾಗದವು. ನಮ್ಮ ಸಶಸ್ತ್ರ ಪಡೆಗಳ ಧೈರ್ಯಶಾಲಿ ವೀರರಿಗೆ ಈ ದೇಶವು ಶಾಶ್ವತವಾಗಿ ಋಣಿಯಾಗಿದೆ. ಈ ರಾಷ್ಟ್ರವು ಅವರಿಗೆ ಕೃತಜ್ಞವಾಗಿದೆ. | ನರೇಂದ್ರ ಮೋದಿ ಪ್ರಧಾನಿ (25ನೇ ವರ್ಷದ ಕಾರ್ಗಿಲ್ ವಿಜಯ ದಿನದಲ್ಲಿ ಹೇಳಿದ್ದು)

ಪ್ರಗತಿಯಲ್ಲಿ ಶಿಂಕುನ್ ಲಾ ಸುರಂಗ

ಲಡಾಖ್​ನಲ್ಲಿ ಅಭಿವೃದ್ಧಿ ಕಾರ್ಯಗಳು ವೇಗ ಪಡೆದಿದ್ದು, ಇದರ ಲಾಭ ಕಾರ್ಗಿಲ್ ಜಿಲ್ಲೆಗೂ ಸಿಗಲಿದೆ. ಶಿಂಕುನ್ ಲಾ ಸುರಂಗದ ನಿರ್ಮಾಣ ಪ್ರಾರಂಭವಾಗಿದೆ. ಈ ಶಿಂಕುನ್ ಲಾ ಸುರಂಗದ ಮೂಲಕ ಲಡಾಖ್ ವರ್ಷದುದ್ದಕ್ಕೂ, ಎಲ್ಲ ಋತುಗಳಲ್ಲಿ ದೇಶದ ಇತರ ಭಾಗಗಳೊಂದಿಗೆ ಸಂಪರ್ಕದಲ್ಲಿರುತ್ತದೆ. 4.1 ಕಿ.ಮೀ. ಉದ್ದದ ಈ ಸುರಂಗಮಾರ್ಗವನ್ನು ನಿಮು-ಪಡುಮ್​ದರ್ಚಾ ರಸ್ತೆಯಲ್ಲಿ ಸುಮಾರು 15,800 ಅಡಿ ಎತ್ತರದಲ್ಲಿ ನಿರ್ವಿುಸಲಾಗುತ್ತಿದ್ದು, ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.