ನ್ಯೂಸ್

ದಿವಾಳಿ ಅರ್ಜಿ ವಾಪಸ್; ಸಲ್ಮಾನ್‌ಗೆ ಎನ್‌ಸಿಎಲ್‌ಎಟಿಯಿಂದ ಅನುಮತಿ

ನವದೆಹಲಿ: ಜೆರಾಯ್ ಫಿಟ್‌ನೆಸ್ ವಿರುದ್ಧ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್ ಎಟಿ) ಮುಂದೆ ದಾಖಲಿಸಿದ್ದ ದಿವಾಳಿತನದ ಅರ್ಜಿಯನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಬುಧವಾರ ಹಿಂಪಡೆದಿದ್ದಾರೆ. 7.24 ಕೋಟಿ ರೂ. ವಿವಾದವನ್ನು ಒಪ್ಪಂದದ ಷರತ್ತುಗಳ ಆಧಾರದಲ್ಲಿ ಇತ್ಯರ್ಥಗೊಳಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಸಲ್ಮಾನ್ ಖಾನ್ ಪರ ವಕೀಲರು ಡಿಮ್ಯಾಂಡ್ ಡ್ರಾಫ್ಟ್‌ನ್ನು ಒಪ್ಪಿಗೆ ಷರತ್ತುಗಳ ಪ್ರಕಾರ ಸ್ವೀಕರಿಸಲಾಗಿದೆ ಎಂದು ತಿಳಿಸಿ, ಅರ್ಜಿ ಹಿಂಪಡೆಯಲು ಅನುಮತಿ ಕೋರಿದರು. ಎನ್ ಸಿಎಲ್‌ಎಟಿ ಅಧ್ಯಕ್ಷ ನ್ಯಾ. ಅಶೋಕ್ ಭೂಷಣ್ ಅವರ ಪೀಠ, ಸಲ್ಮಾನ್ ಮತ್ತು ಜೆರಾಯ್ ನಡುವಿನ ಒಪ್ಪಂದ ದಾಖಲಿಸಿಕೊಂಡು ಅರ್ಜಿ ಹಿಂಪಡೆಯಲು ಅನುಮತಿಸಿತು.

ಸಲ್ಮಾನ್ ಸ್ಥಾಪಿಸಿದ 'ಬೀಯಿಂಗ್ ಸ್ಟಾಂಗ್' ಫಿಟ್‌ನೆಸ್ ಉಪಕರಣ ಬ್ಯಾಂಡ್‌ಗೆ ಸಂಬಂಧಿಸಿದ ವಿವಾದ ಇದು. ಜೆರಾಯ್ ಜತೆ 2018ರಲ್ಲಿ ಒಪ್ಪಂದವಾಗಿತ್ತು. ಕೋವಿಡ್ -19ರಿಂದ ಉಂಟಾದ ವ್ಯಾಪಾರ ಸಮಸ್ಯೆಯಿಂದಾಗಿ ರಾಯಲ್ಟಿ ಪಾವತಿ ಪರಿಷ್ಕರಿಸಲಾಗಿತ್ತು. ಆದರೆ, ಜೆರಾಯ್ 7.24 ಕೋಟಿ ರೂ. ಪಾವತಿಸಲು ವಿಫಲವಾದಾಗ, ಸಲ್ಮಾನ್ 2024ರ ಸೆಪ್ಟೆಂಬರ್‌ನಲ್ಲಿ ಡಿಮ್ಯಾಂಡ್ ನೋಟಿಸ್ ಕಳುಹಿಸಿ, ಎನ್‌ಸಿಎಲ್‌ಎಟಿಗೆ ಅರ್ಜಿ ಸಲ್ಲಿಸಿದ್ದರು. ಎನ್ ಸಿಎಲ್‌ಎಟಿ ಮೇ 2025ರಲ್ಲಿ ಅರ್ಜಿಯನ್ನು ವಿವಾದಿತ ಎಂದು ತಿರಸ್ಕರಿಸಿತ್ತು. ಈಗ, ಒಪ್ಪಂದದ ಮೂಲಕ ಇತ್ಯರ್ಥವಾಗಿ, ಸಲ್ಮಾನ್ ಅರ್ಜಿಯನ್ನು ಹಿಂಪಡೆದಿದ್ದಾರೆ.