ಮುಂಬೈ: ಪ್ರಸ್ತುತ ಹಿಂದಿಯ ಬಿಗ್ ಬಾಸ್ ಸೀಸನ್ 18ರಲ್ಲಿ ಸಖತ್ ಬಿಜಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ವಿರುದ್ಧ ‘ದಬಾಂಗ್’ ಚಿತ್ರದ ನಿರ್ದೇಶಕ ಅಭಿನವ್ ಕಶ್ಯಪ್ ಮತ್ತೊಮ್ಮೆ ಆರೋಪ ಎಸಗಿದ್ದಾರೆ. ಹಲವು ವರ್ಷಗಳಿಂದ ಸಲ್ಮಾನ್ ಜತೆಗಿರುವ ಜಿದ್ದನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿರುವ ಕಶ್ಯಪ್, ನೇರವಾಗಿ ಹಾಗೂ ಕೆಲವೊಮ್ಮೆ ಪರೋಕ್ಷ ಟಾಂಗ್ ಕೊಡುತ್ತಲೇ ಬಂದಿದ್ದಾರೆ.
ಇದೀಗ ಮತ್ತೆ ಸಲ್ಲು ವಿರುದ್ಧ ನಾಲಿಗೆ ಹರಿಬಿಟ್ಟಿರುವ ಅಭಿನವ್, "ಸಲ್ಮಾನ್ಗೆ ಸಹ ನಟರ ಪಾತ್ರದ ಮೇಲೂ ಕಣ್ಣಿತ್ತು. ಆಯಾ ಕಲಾವಿದರಿಗೆ ನೀಡಲಾದ ಪಾತ್ರದ ಅವಧಿ ಕಂಡರೆ ಆತನಿಗೆ ಸಹಿಸಲು ಆಗುತ್ತಿರಲಿಲ್ಲ. ಹೀಗಾಗಿಯೇ, ಕೆಲವರ ರೋಲ್ಗಳನ್ನು ಕಟ್ ಮಾಡುತ್ತಿದ್ದ. ಸಿನಿಮಾದ ಒಂದು ದೃಶ್ಯದಲ್ಲಿ ಓಂ ಪುರಿ ಅವರ ಕಾಲಿಗೆ ಬೀಳುವ ಸನ್ನಿವೇಶವಿತ್ತು. ಇದಕ್ಕೆ ಒಪ್ಪದ ಸಲ್ಮಾನ್, ನಾನು ಕಾಲಿಗೆಲ್ಲ ಬೀಳುವುದಿಲ್ಲ ಎಂದು ಹಿಂದೇಟು ಹಾಕಿದ" ಎಂದಿದ್ದಾರೆ.
ಬಾಲಿವುಡ್ನ 'ಥಿಕಾನಾ'ಗೆ ನೀಡಿದ ಸಂದರ್ಶನದಲ್ಲಿ, "ದಬಾಂಗ್ ಚಿತ್ರವು ಆರಂಭದಲ್ಲಿ 2.45 ಗಂಟೆಗಳಷ್ಟು ಉದ್ದವಿತ್ತು. ಆದರೆ, ಸಲ್ಮಾನ್ ಅದನ್ನು ಕಡಿತಗೊಳಿಸುವಂತೆ ನನ್ನನ್ನು ಒತ್ತಾಯಿಸಿದ. ಆಗ 2 ಗಂಟೆ 20 ನಿಮಿಷಕ್ಕೆ ಇಳಿಸಿದೆ. ಇಲ್ಲಿ ನಟನಿಗೆ ಸಿನಿಮಾದ ರನ್ಟೈಮ್ನಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಬದಲಿಗೆ ಚಿತ್ರದಲ್ಲಿದ್ದ ಬೇರೆ ಪಾತ್ರಗಳೊಂದಿಗೆ ಭಾರೀ ಸಮಸ್ಯೆಯಿತ್ತು. ಅರ್ಬಾಜ್ ಅವರ ಸಂಪೂರ್ಣ ಪಾತ್ರವನ್ನು ಕಡಿತಗೊಳಿಸಿದ" ಎಂದು ದೂರಿದ್ದಾರೆ.
ಇದನ್ನೂ ಓದಿ: ‘ಜುಗಾರಿ ಕ್ರಾಸ್’ನಲ್ಲಿ ರಾಜ್ ಬಿ. ಶೆಟ್ಟಿ : ಗುರುದತ್ ಗಾಣಿಗ ನಿರ್ದೇಶನದಲ್ಲಿ ಸಿನಿಮಾ ಆಗಲಿದೆ ಪೂಚಂತೇ ಕಾದಂಬರಿ
"ದಬಾಂಗ್'ನಲ್ಲಿ ಹಿರಿಯ ನಟ ಓಂ ಪುರಿ ಅವರಿಗೆ 5ರಿಂದ 6 ಸೀನ್ಗಳಿತ್ತು. ಅವರಿಗೆ ನೀಡಿದ ಪಾತ್ರವು ಅಷ್ಟೇ ಚೆನ್ನಾಗಿತ್ತು. ಇದನ್ನೆಲ್ಲ ಪುರಿ ಅವರಿಗೆ ನಾನು ವಿವರಿಸಿದಾಗ ಅವರು ನಟಿಸಲು ಒಪ್ಪಿಕೊಂಡರು. ಆದರೆ, ಸಲ್ಮಾನ್ ಖಾನ್ಗೆ ಇದು ಕಿಂಚಿತ್ತು ಇಷ್ಟವಿರಲಿಲ್ಲ. ಹೀಗಾಗಿಯೇ ಅವರನ್ನು ಚಿತ್ರದಿಂದ ಕೈಬಿಡುವಂತೆ ಒತ್ತಾಯಿಸಿದ್ದ. ಅಷ್ಟಕ್ಕೆ ಸುಮ್ಮನಾಗದೆ, ನನ್ನಿಂದ ಸುಮಾರು 6 ಬಾರಿ ಸ್ಕ್ರಿಪ್ಟ್ ಅನ್ನು ಮತ್ತೆ ಬರೆಸಿದ. ಅದು ಆತನಿಗೆ ತಕ್ಕಂತೆ" ಎಂದು ಆರೋಪಿಸಿದ್ದಾರೆ,(ಏಜೆನ್ಸೀಸ್).