ಮುಂಬೈ: ಪ್ರಸ್ತುತ ಹಿಂದಿಯ ಬಿಗ್ ಬಾಸ್ ಸೀಸನ್ 18ರಲ್ಲಿ ಸಖತ್ ಬಿಜಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan), ವಾರಾಂತ್ಯದ ಸಂಚಿಕೆಯಲ್ಲಿ 'ದಬಾಂಗ್' ಚಿತ್ರದ ನಿರ್ದೇಶಕ ಅಭಿನವ್ ಕಶ್ಯಪ್ಗೆ ಪರೋಕ್ಷ ಟಾಂಗ್ ಕೊಟ್ಟ ಕಾರಣ, ಇದೀಗ ಅಭಿನವ್ ಮತ್ತೊಮ್ಮೆ ನಟನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಲ್ಮಾನ್ ಅಭಿನಯಿಸಲಿರುವ ಮುಂಬರುವ 'ಬ್ಯಾಟಲ್ ಆಫ್ ಗಾಲ್ವಾನ್' ಚಿತ್ರದಲ್ಲಿ ಸೈನಿಕನ ಪಾತ್ರದಲ್ಲಿ ಖಾನ್ ಕಾಣಿಸಿಕೊಳ್ಳಲಿದ್ದಾರೆ. ಈ ವಿಚಾರವನ್ನು ಉಲ್ಲೇಖಿಸಿ ಕಿಡಿಕಾರಿರುವ ಅಭಿನವ್, "ಒಬ್ಬ ಕ್ರಿಮಿನಲ್ ಹೇಗೆ ಯೋಧನ ಪಾತ್ರದಲ್ಲಿ ನಟಿಸಲು ಸಾಧ್ಯ? ಅಂದು ದಬಾಂಗ್ ಚಿತ್ರವನ್ನು ಹೈಜಾಕ್ ಮಾಡಿ ಕೆಲಸದ ವಾತಾವರಣವನ್ನು ವಿಷಮಯವಾಗಿ ಸೃಷ್ಟಿಸಿದ್ದು ಆತ. ಅದೇ ಇಂದು ನೋಡಿದ್ರೆ ಸಕ್ಸಸ್ನ ಕ್ರೆಡಿಟ್ ತೆಗೆದುಕೊಳ್ಳುತ್ತಾರೆ. ದಬಾಂಗ್ ಸೀಕ್ವೆಲ್ನಿಂದ ನನ್ನನ್ನು ಹೊರಗುಳಿಯುವಂತೆ ಮಾಡಿದ್ದು ಸಲ್ಮಾನ್" ಎಂದಿದ್ದಾರೆ.
"ಸಲ್ಮಾನ್ ಈಗಾಗಲೇ ತನ್ನ ಜೀವನವನ್ನು ಸಂಪೂರ್ಣವಾಗಿ ಹಾಳು ಮಾಡಿಕೊಂಡಿದ್ದಾನೆ. ಅದು ಏನೇ ಮಾಡಿದ್ರು ಸರಿಯಾಗುವುದಿಲ್ಲ. ನಾನು ನನ್ನ ಹೃದಯದಿಂದ ಸತ್ಯ ಹೇಳಿದ್ದೀನಿ. ಹಾಗಾಗಿ, ಆತ ಇಲ್ಲಿ ಬೇಸರ ಪಟ್ಟುಕೊಳ್ಳುವ ಮಾತಿಲ್ಲ. ದಬಾಂಗ್ ಮೂಲಕ ಆತನಿಗೆ ಒಂದು ಸೂಪರ್ಹಿಟ್ ಕೊಟ್ಟೆ. ಅಂದು ಒಂದು ಚಿತ್ರಕ್ಕಾಗಿ ನನ್ನನ್ನು ಬೇಡಿಕೊಂಡ ಸಲ್ಮಾನ್. ಅಂತೆಯೇ, ದಬಾಂಗ್ನಲ್ಲಿ ಆತನಿಗೆ ಅವಕಾಶ ನೀಡಿದೆ. ಆದ್ರೆ, ಅದಾದ ಬಳಿಕ ನನ್ನ ಬೆನ್ನಿಗೆ ಚೂರಿ ಇರಿದ. ನನ್ನ ವಿರುದ್ಧ ಎಷ್ಟು ವಿಷಕಾರಿದ್ದರೋ, ಅದನ್ನೇ ನಾನೀಗ ವಾಪಾಸ್ ಕೊಡ್ತಿದ್ದೀನಿ" ಎಂದು ಕಿಡಿಕಾರಿದ್ದಾರೆ,(ಏಜೆನ್ಸೀಸ್).