ನ್ಯೂಸ್

'ಸಲಾರ್'​ ಭಾಗ 1 'ಉಗ್ರಂ' ರಿಮೇಕಾ? ಪ್ರಶಾಂತ್ ನೀಲ್​ ಬಿಚ್ಚಿಟ್ರು ರೋಚಕ ಸಂಗತಿ!

ಬೆಂಗಳೂರು: ಕನ್ನಡ ಚಿತ್ರರಂಗದ ಅದ್ಬುತ ನಿರ್ದೇಶಕ, 'ಕೆಜಿಎಫ್' ಖ್ಯಾತಿಯ ಪ್ರಶಾಂತ್​ ನೀಲ್​ ಇದೀಗ ಭಾರತೀಯ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಟಾಲಿವುಡ್​ನ ರೆಬೆಲ್​ ಸ್ಟಾರ್​ ಪ್ರಭಾಸ್​ ಜತೆಗಿನ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಪ್ಯಾನ್ ಇಂಡಿಯಾ 'ಸಲಾರ್'​ ಭಾಗ 1ರ ರಿಲೀಸ್​ ಕೆಲಸದಲ್ಲಿ ಸದ್ಯ ಸಂಪೂರ್ಣವಾಗಿ ನಿರತರಾಗಿದ್ದಾರೆ.

ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿರುವ 'ಸಲಾರ್'​ ಭಾಗ 1, ಪ್ರಭಾಸ್​ ಅಭಿಮಾನಿಗಳಲ್ಲಿ ಹಾಗೂ ಸಿನಿಪ್ರೇಕ್ಷಕರಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇವೆಲ್ಲದರ ನಡುವೆ ಕನ್ನಡ ಚಿತ್ರಪ್ರೇಮಿಗಳಿಗೆ ಕಳೆದ ಹಲವು ದಿನಗಳಿಂದ ದೊಡ್ಡ ಗೊಂದಲವೊಂದು ಕಾಡುತ್ತಿದೆ. ಪ್ರಶಾಂತ್ ಅವರು ಈ ಹಿಂದೆ ನಿರ್ದೇಶಿಸಿದ್ದ ಬ್ಲಾಕ್​ಬಸ್ಟರ್​ 'ಉಗ್ರಂ' ಚಿತ್ರದ ಮುಂದುವರಿದ ಕಥೆಯನ್ನೇ 'ಸಲಾರ್'​ನಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ ಎಂಬ ಅನುಮಾನಗಳು ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ.

'ಉಗ್ರಂ' ಚಿತ್ರದ ಮುಂದುವರಿದ ಕಥೆ ಈಗ 'ಸಲಾರ್​' ಒಳಗೊಂಡಿದೆ ಎಂದು ಅನೇಕರು ಅಭಿಪ್ರಾಯಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ಸಲಾರ್​ ಸಿನಿಮಾದ ಯಾವುದೇ ಹೊಸ ಅಪ್ಡೇಟ್​ ಬಂದರೂ ಅಲ್ಲಿ ಈ ಒಂದು ಸಂಗತಿಯನ್ನು ಮುನ್ನೆಲೆಗೆ ತರುತ್ತಿದ್ದರು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಈ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚೆಗಷ್ಟೇ 'ಸಲಾರ್‌' ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡ ಪ್ರಶಾಂತ್ ನೀಲ್, ಕಥಾಹಂದರ ಕುರಿತಂತೆ ಒಂದಷ್ಟು ವಿಷಯಗಳನ್ನು ಹೇಳುತ್ತಿರುವಾಗ ರೋಚಕ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ.

"ಇದು​ ಇಬ್ಬರು ಸ್ನೇಹಿತರ ನಡುವಿನ ಸಿನಿಮಾ. ಆತ್ಮೀಯರು ದೊಡ್ಡ ಶತ್ರುಗಳಾಗಿ ಬದಲಾಗುವ ಕಥೆ. ಸ್ನೇಹವೇ ಇಲ್ಲಿ ಪ್ರಮುಖ ಅಂಶ. ಸ್ನೇಹಿತರ ಮಧ್ಯೆಯಿರುವ ಪಯಣವನ್ನು ನಾವು ಎರಡು ಭಾಗಗಳಲ್ಲಿ ಹೇಳಲು ಹೊರಟ್ಟಿದ್ದೇವೆ. ನಾವು ಕ್ರಿಯೇಟ್​ ಮಾಡಿರುವ 'ಸಲಾರ್' ಜಗತ್ತಿನ ಝಲಕ್ ಅನ್ನು ಶೀಘ್ರವೇ ಪ್ರೇಕ್ಷಕರಿಗೆ ಟ್ರೇಲರ್‌ನಲ್ಲಿ ತೋರಿಸಲಿದ್ದೇವೆ" ಎಂದರು.

ಒಂದೆಡೆ 'ಸಲಾರ್'​ ಕಥೆಯಲ್ಲಿ ಇಬ್ಬರು ಸ್ನೇಹಿತರು ಮುಂದೆ ದೊಡ್ಡ ಶತ್ರುಗಳಾಗಿ ಕಾಣಿಸುವುದು ಚಿತ್ರದಲ್ಲಿದೆ ಎಂಬ ಪ್ರಶಾಂತ್​ ಅವರ ಮಾತು, ಇದು ಖಂಡಿತ 'ಉಗ್ರಂ' ರಿಮೇಕ್​ ಇರಬಹುದು ಎಂಬುದನ್ನು ಪ್ರಾಯಶಃ ನಿಜ ಎನ್ನುವಂತೆ ಮಾಡುತ್ತಿದೆ. ಆದ್ರೆ, ಈ ಎಲ್ಲಾ ವದಂತಿಗಳಿಗೆ ಸಲಾರ್​ ಬಿಡುಗಡೆಯ ನಂತರವೇ ತೆರೆ ಬೀಳಲಿದೆ ಎಂಬುದಷ್ಟೇ ಖಚಿತ!